January 29, 2026
IMG-20260119-WA0176.jpg

ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ಇತ್ತೀಚಿನ ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ರೈತರು ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಅತಿಯಾದ ರಾಸಾಯನಿಕ ಗೊಬ್ಬರಗಳು ಹಾಗೂ ಕೀಟನಾಶಕಗಳ ಬಳಕೆಯಿಂದ ನಮ್ಮ ಮಣ್ಣು ತನ್ನ ಜೀವಂತಿಕೆಯನ್ನು ಕಳೆದುಕೊಳ್ಳುತ್ತಿದೆ. ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದ್ದು, ಬೆಳೆ ವೆಚ್ಚ ಹೆಚ್ಚಾಗುತ್ತಿರುವುದರೊಂದಿಗೆ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಈ ಎಲ್ಲ ಸಮಸ್ಯೆಗಳಿಗೆ ದೀರ್ಘಕಾಲಿಕ ಪರಿಹಾರವೆಂದರೆ ನೈಸರ್ಗಿಕ ಕೃಷಿ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜಿನೀಕಾಂತ್ ಅವರು ಹೇಳಿದರು.
ತಾಲ್ಲೂಕಿನ ಮತೋಡು ಹೋಬಳಿಯ ದೇವರಹಟ್ಟಿ ಗ್ರಾಮದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಭದ್ರಾವತಿ ವತಿಯಿಂದ ನೈಸರ್ಗಿಕ ಕೃಷಿ ಕುರಿತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಸ್ಥಿರ ಇಳುವರಿ ಹಾಗೂ ಸ್ವಾವಲಂಬನೆಗೆ ನೈಸರ್ಗಿಕ ಕೃಷಿ ಅಗತ್ಯವಿದ್ದು, ನೈಸರ್ಗಿಕ ಕೃಷಿ ಎಂದರೆ ಹೊರಗಿನಿಂದ ಪರಿಕರಗಳನ್ನು ಖರೀದಿಸದೇ, ನಮ್ಮ ಸುತ್ತಮುತ್ತಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ರಾಸಾಯನಿಕ ಮುಕ್ತವಾಗಿ ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಕೃಷಿ ಮಾಡುವ ವಿಧಾನವೆಂದು ವಿವರಿಸಿದರು.
ತುಮಕೂರಿನ ನಿವೃತ್ತ ಕೃಷಿ ಅಧಿಕಾರಿ ರಾಜಶೇಖರಯ್ಯ ಅವರು ನೈಸರ್ಗಿಕ ಕೃಷಿಯ ಅವಶ್ಯಕತೆ, ಅದರ ತತ್ವಗಳು, ಜೀವಾಮೃತ, ಬೀಜಾಮೃತ, ಘನಜೀವಾಮೃತ, ದಶಪರ್ಣಿ, ಹುಳಿ ಮಜ್ಜಿಗೆ ಬಳಕೆ, ಗಂಜಲು ಬಳಕೆ, ಹೊಲದಲ್ಲಿ ಹೊದಿಕೆ ಅಥವಾ ಮಲ್ಚಿಂಗ್‌ನಿಂದಾಗುವ ಉಪಯೋಗಗಳ ಕುರಿತು ವಿವರಿಸಿದರು. ಜೊತೆಗೆ ಜೀವಾಮೃತ, ಬೀಜಾಮೃತ ಹಾಗೂ ದಶಪರ್ಣಿ ತಯಾರಿಸುವ ವಿಧಾನವನ್ನು ಪ್ರಾಯೋಗಿಕವಾಗಿ ರೈತರಿಗೆ ಮನವರಿಕೆ ಮಾಡಿಕೊಟ್ಟರು.
ತರಬೇತಿ ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಪರಮೇಶ್ವರಪ್ಪ, ಸಹಾಯಕ ತಾಂತ್ರಿಕ ಅಧಿಕಾರಿ ತುಳಸಿರಾಮು, ಕೃಷಿ ಸಂಘದ ಸದಸ್ಯರು ಹಾಗೂ ಆಸಕ್ತ ರೈತರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading