January 29, 2026
FB_IMG_1768824562216.jpg

ಚಿತ್ರದುರ್ಗಜ.19:
ಸಮಾಜದಲ್ಲಿನ ಲೋಪದೋಷ, ಅನ್ಯಾಯ, ಅನೀತಿಯನ್ನು ಯಾವುದೇ ಮುಲಾಜಿಲ್ಲದೇ ನೇರವಾಗಿ ಖಂಡಿಸಿದ ನಿಷ್ಠುರವಾದಿ ಕವಿ ವೇಮನ ಎಂದು ಚಳ್ಳಕೆರೆ ತಾಲ್ಲೂಕು ಬೇಡರೆಡ್ಡಿಹಳ್ಳಿಯ ಸಾಹಿತಿ ಎಸ್.ಬಿ.ಭೀಮಾರೆಡ್ಡಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ “ಮಹಾಯೋಗಿ ವೇಮನ” ಜಯಂತಿ ಆಚರಣೆ ಸಮಾರಂಭದಲ್ಲಿ ವೇಮನರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಸಾಮಾಜಿಕ ಸಮಾನತೆ, ನೈತಿಕ ಮೌಲ್ಯಗಳ ಬಗ್ಗೆ ಜನಸಾಮಾನ್ಯರ ಭಾಷೆಯಲ್ಲಿ ಸರಳ ಮತ್ತು ಶಕ್ತಿಯುತವಾದ ವಚನಗಳ ಮೂಲಕ ಜಾತಿ ಪದ್ಧತಿ, ಮೂಢನಂಬಿಕೆಗಳನ್ನು ತಮ್ಮ ಪದ್ಯಗಳ ಮೂಲಕ ತೀವ್ರವಾಗಿ ಖಂಡಿಸಿದ್ದಾರೆ ಎಂದು ತಿಳಿಸಿದರು.
ದಾರ್ಶನಿಕರಲ್ಲಿ ವಿಶೇಷವಾಗಿ ವೇಮನರು ವಿದೇಶಿ ಸಂಶೋಧಕರಿಂದ ಅತೀ ಹೆಚ್ಚು ಸಂಶೋಧನೆಗೆ ಒಳಪಟ್ಟ ವ್ಯಕ್ತಿ. ವಿದೇಶ ಸಂಶೋಧಕ ಸಿ.ಪಿ.ಬ್ರೌನ್ ಅವರು ವೇಮನರ ವಚನಗಳನ್ನು ಸಂಗ್ರಹ ಮಾಡಿದ ಮೇಲೆ, ಅದರಲ್ಲಿರುವ ವಿಷಯ, ತಿರುಳನ್ನು ಬೇರೆಯವರಿಂದ ಕೇಳಿ ತಿಳಿದು, ಆಶ್ಚರ್ಯಚಕಿತರಾಗುತ್ತಾರೆ. ಜನಸಾಮಾನ್ಯರ ಭಾಷೆಯಲ್ಲಿ ಹೆಚ್ಚಿನ ವ್ಯಾಕರಣ ಬಳಸದೇ, ಸರಳ ಭಾಷೆಯಲ್ಲಿಯೇ ವಿಶೇಷ ಜ್ಞಾನ, ವಿಶೇಷ ತತ್ವದ ಮಾತುಗಳನ್ನು ಹೇಳಿದ ವ್ಯಕ್ತಿಯನ್ನು ಸಂಪೂರ್ಣವಾಗಿ ಅರಿತರೆ ಸಂಶೋಧನೆಗೆ ಮೌಲ್ಯ ಬರಲಿದೆ ಎಂಬ ಕಾರಣದಿಂದ ವೇಮನ ತಿಳಿಯುವ ಉದ್ದೇಶದಿಂದ ತೆಲಗು ಭಾಷೆಯನ್ನೂ ಕಲಿತು ಸುಮಾರು 1167 ವಚನಗನ್ನು ಸಂಗ್ರಹ ಮಾಡಿದ್ದಾರೆ ಎಂದು ಹೇಳಿದರು.
ವೇಮನರು ತಮ್ಮ ಎಲ್ಲ ವಚನಗಳಲ್ಲಿ ಆತ್ಮಚಿಂತನೆ ಕುರಿತು ಹೆಚ್ಚು ತಿಳಿಸಿದ್ದಾರೆ. ಆತ್ಮಚಿಂತನೆಯಿಂದ ವ್ಯಕ್ತಿಯಲ್ಲಿ ನೈತಿಕತೆ ಬರಲಿದೆ. ಈ ನೈತಿಕತೆ ಬಳಸಿಕೊಂಡು ನಾವು ಮುಕ್ತಿ ಮಾರ್ಗದ ಕಡೆ ಸಾಗಬೇಕು. ಅಲ್ಲಿ ಆತ್ಮ ಚಿಂತನೆ, ನೈತಿಕತೆ, ಮುಕ್ತಿ ಮಾರ್ಗಕ್ಕೆ ಸಂಬಂಧಪಟ್ಟ ಬೇರೆ ಬೇರೆ ರೀತಿಯಾದ ವಚನಗಳನ್ನು ರಚಿಸಿರುವುದನ್ನು ನಾವು ಕಾಣಬಹುದಾಗಿದೆ. ವೇಮನರ ಪದ್ಯಗಳು ಕನ್ನಡದ ಕಂದಪ್ಯದ ಛಂದಸ್ಸಿನ ಪ್ರಕಾರಕ್ಕೆ ಸೇರಿದ್ದು, ಮೊದಲ ಸಾಲಿನಲ್ಲಿ ಸತ್ಯ, ಎರಡನೇ ಸಾಲಿನಲ್ಲಿ ವಾಸ್ತವ ಸ್ಥಿತಿ ಹಾಗೂ ಮೂರನೇ ಸಾಲಿನಲ್ಲಿ ವಾಸ್ತವ ಸ್ಥಿತಿಯ ಕ್ರೂರತೆ ಖಂಡಿಸುತ್ತದೆ ಎಂದು ತಿಳಿಸಿದ ಅವರು, ಸಮುದಾಯವು ಸಂಕುಚಿತ ಮನೋಭಾವ ಬಿಡಬೇಕು. ಜಗತ್ತು ಸಂಕೀರ್ಣವಾಗಿದ್ದು, ಈ ಸಂಕೀರ್ಣವಾದ ಜಗತ್ತಿನಲ್ಲಿ ನಾವುಗಳು ವಿಶೇಷ ಜ್ಞಾನ ಪಡೆದು ನಮ್ಮ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಹರಿಹರ ತಾಲ್ಲೂಕು ಹೊಸಹಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮಿಗಳು ಮಾತನಾಡಿ, ವೇಮನ ಚರಿತ್ರೆ ನಮಗೆ ನೆಪಮಾತ್ರ. ಅವರ ಸಾಹಿತ್ಯ ಬೋಧನೆಗಳು ನಮ್ಮ ದಾರಿಗೆ ಬೆಳಕು ಚೆಲ್ಲಲಿವೆ. ಪ್ರಜಾಕವಿ ವೇಮನರ ಸಾಹಿತ್ಯ ಮುಂದಿಟ್ಟುಕೊಂಡು ನಾವು ನಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ನಾವೆಲ್ಲರೂ ಸಂತೃಪ್ತಿಯಿಂದ ಬದುಕುಬೇಕು ಎಂಬುದೇ ಮಹನೀಯರ ಜಯಂತಿಗಳ ಆಶಯ. ವೇಮನರು ತಮ್ಮ ಬೋಧನೆಗಳನ್ನು ಜನರಾಡುವ ಭಾಷೆಯಲ್ಲಿ ಸರಳವಾಗಿ ಬರೆದಿರುವುದು ಅವರ ವಿಶೇಷ. ಜನರಿಗೆ ಗೊತ್ತಿರುವ ಉಪಮೆ, ಪ್ರತಿಮೆಗಳ ಮೂಲಕ ತಿಳಿಸಿದ್ದಾರೆ. ಇದು ಹೆಚ್ಚಿನ ಜನರಿಗೆ ತಲುಪಲು ಸಾಧ್ಯವಾಯಿತು ಅಭಿಪ್ರಾಯಪಟ್ಟರು.
ಎಸ್.ಆರ್.ಪಾಟೀಲರು ವೇಮನ ಸುಮಾರು 5000 ವಚನಗಳನ್ನು ಸಂಗ್ರಹಿಸಿ, ತೆಲುಗಿನಿಂದ ಕನ್ನಡಕ್ಕೆ ಭಾಷಾಂತರಿಸಿ, ಅವುಗಳಿಗೆ ಟಿಪ್ಪಣಿ, ವಿಮರ್ಶೆ ನೀಡಿ, ವೇಮನ ಸಾಹಿತ್ಯ ಕನ್ನಡಿಗರಿಗೆ ದೊರೆಯುವಲ್ಲಿ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ ಅವರು, ವೇಮನ ಸಾಹಿತ್ಯವನ್ನು ಜನಪ್ರಿಯಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಎಂ.ಗೋವಿಂದರಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ ಗುರುನಾಥ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಜಿಲ್ಲಾ ಪಂಚಾಯಿತಿ ಲೆಕ್ಕಪತ್ರ ಶಾಖೆಯ ಸಹಾಯಕ ನಿರ್ದೇಶಕ ದಾದಾಪೀರ್ ಸೇರಿದಂತೆ ರೆಡ್ಡಿ ಸಮಾಜದ ಮುಖಂಡರು ಇದ್ದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು. ಚಿತ್ರದುರ್ಗದ ಉಮೇಶ್ ಪತ್ತಾರ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading