ಹಿರಿಯೂರು:
ಕೃಷಿ ವಿಜ್ಞಾನಿಗಳು ಹೊಸ ಹೊಸ ತಳಿಯ ಬೀಜಗಳ ಸಂಶೋಧನೆ ಮಾಡುವ ಮೂಲಕ ರೈತರಿಗೆ ಕೃಷಿ ಪದ್ಧತಿಯನ್ನು ಮುಂದುವರೆಸಲು ಅನುಕೂಲ ಮಾಡಿಕೊಡಬೇಕು ಎಂಬುದಾಗಿ ಚಿತ್ರದುರ್ಗ ಸಂಸದರಾದ ಗೋವಿಂದ ಕಾರಜೋಳ ಅವರು ಹೇಳಿದರು.
ತಾಲ್ಲೂಕಿನ ಬಬ್ಬೂರು ಫಾರಂ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಶನಿವಾರದಂದು ಆರಂಭಗೊಂಡ ಕೃಷಿ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದಾಗಿನಿಂದಲೂ ಸರ್ಕಾರಗಳು ನೀರಾವರಿ ಸೌಕರ್ಯ ಕಲ್ಪಿಸಿಕೊಡುವಲ್ಲಿ ಬದ್ಧತೆ ಪ್ರದರ್ಶಿಸಿಲ್ಲ. ರೈತರಿಗೆ ಎಲ್ಲಿಯವರೆಗೆ ನೀರಾವರಿ ಸೌಲಭ್ಯ ಕಲ್ಪಿಸುವುದಿಲ್ಲವೋ ಅಲ್ಲಿಯವರೆಗೆ ರೈತರ ಬದುಕು ಹಸನಾಗುವುದಿಲ್ಲ. ಮೀನು ಹಿಡಿಯುವುದನ್ನು ಕಲಿತರೆ ಶೇ.70ರಷ್ಟಿರುವ ರೈತರನ್ನು ಹಳ್ಳಿಗಳಲ್ಲೇ ವಾಸಿಸುವಂತೆ ಮಾಡಲು ಸ್ವಯಂ ಉದ್ಯೋಗವನ್ನು ಸೃಷ್ಟಿಸಬಹುದಾಗಿದೆ ಎಂಬುದಾಗಿ ಅವರು ಹೇಳಿದರು.
ನಾನು ನೀರಾವರಿ ಮಂತ್ರಿಯಾಗಿದ್ದಾಗ ಎತ್ತಿನಹೊಳೆ, ಭದ್ರಾ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ಸಾಕಾರಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಭದ್ರಾ ಮೇಲ್ದಂಡೆ ಯೋಜನೆಗೆ 5700 ಕೋಟಿ ರೂ. ನೀಡಲಾಗಿತ್ತು. ಈಗ ಹೆಚ್ಚು ಅನುದಾನ ನೀಡುವುದರ ಮೂಲಕ ರಾಜ್ಯ ಸರ್ಕಾರ ಕೇಂದ್ರದ ಕಡೆಗೆ ಬೊಟ್ಟು ಮಾಡುವುದನ್ನು ಬಿಡಬೇಕು ಎಂಬುದಾಗಿ ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್, ನೂತನ ಕೃಷಿ ಪದವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ 1916ರಲ್ಲಿ ಇಲ್ಲಿ ಬೀಜೋತ್ಪನ್ನ ಕೇಂದ್ರವನ್ನು ತೆರೆಯುವುದರ ಮೂಲಕ ದೂರದೃಷ್ಟಿ ಮೆರೆದಿದ್ದರು. 2008-2009 ರಲ್ಲಿ ತೋಟಗಾರಿಕಾ ಮಹಾವಿದ್ಯಾಲಯವಾಗಿ, ಈಗ ಹೊಸದಾಗಿ ಕೃಷಿ ಪದವಿ ಆರಂಭವಾಗಿರುವುದರಿಂದ ರೈತರ ಮಕ್ಕಳಿಗೆ ಅನುಕೂಲವಾಗಲಿದೆ ಎಂಬುದಾಗಿ ಅವರು ಹೇಳಿದರು.
ಜಿಲ್ಲೆಯಲ್ಲಿ ಹತ್ತು ವರ್ಷದಲ್ಲಿ 3 ವರ್ಷ ಮಾತ್ರವೇ ಮಳೆಯಾಗುತ್ತಿದ್ದು, ಯಥೇಚ್ಚವಾಗಿ ಅಡಿಕೆ ಬೆಳೆಯಬೇಡಿ. ಮಳೆಯಾಧಾರಿತ ಕೃಷಿ ಅನುಸರಿಸಬೇಕು. ಭದ್ರಾ ಮೇಲ್ದಂಡೆಯೋಜನೆಯನ್ನು ನಮ್ಮ ಸರ್ಕಾರ ಮುಗಿಸುವುದು ನೂರಕ್ಕೆ ನೂರರಷ್ಟು ಸತ್ಯ. ವಿಜ್ಞಾನಿಗಳು ರೈತರಿಗೆ ಪೂರಕವಾದ ಬೆಳೆ ಸಂಶೋಧನೆ ಮಾಡಬೇಕು ಎಂಬುದಾಗಿ ಹೇಳಿದರು.
ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಎಚ್. ಆರ್. ತಿಮ್ಮಯ್ಯ ಮಾತನಾಡಿ ಜಿಲ್ಲಾಧಿಕಾರಿಯವರು ನೀರಾವರಿ ಕ್ಯಾಲೆಂಡರ್ ಹಾಕಬೇಕು. ಹನಿನೀರಾವರಿಗೆ ಸಬ್ಸಿಡಿ ನೀಡಬೇಕು, ರೈತರಿಗೆ ಕಡಿಮೆ ಧರದಲ್ಲಿ ಕೃಷಿ ಸಾಮಾಗ್ರಿಗಳು ಸಿಗುವಂತೆ ಮಾಡಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ಕುಲಪತಿ ಆರ್.ಸಿ ಜಗದೀಶ, ಬಬ್ಬೂರು ಗ್ರಾಮಪಂಚಾಯಿತಿ ಅಧ್ಯಕ್ಷ ಚಿತ್ತಯ್ಯ, ಆಡಳಿತ ಮಂಡಳಿ ಸದಸ್ಯರಾದ ಫ್ರೊ.ಪಿ.ಕೆ. ಬಸವರಾಜ, ಫ್ರೊ.ಬಿ.ಕೆ.ಕುಮಾರಸ್ವಾಮಿ, ಶಿಕ್ಷಣ ನಿರ್ದೇಶಕ ಪ್ರೊ. ಹೇಮ್ಲಾ ನಾಯ್ಕ, ಕುಲಸಚಿವ ಫ್ರೊ. ಕೆ.ಸಿ. ಶಶಿಧರ, ದುಷ್ಯಂತ್ ಕುಮಾರ್, ಕೆ.ಟಿ. ಗುರುಮೂರ್ತಿ, ಎಸ್.ವಿ.ಪಾಟೀಲ, ಶರಣಬಸಪ್ಪ ಬೋಗಿ, ಮಂಜುನಾಥ, ಕವಿತಾ ಶಶಿಧರ, ಫ್ರೊ. ಶರಣಪ್ಪಜಂಗಂಡಿ, ಸವಿತಾ, ಕೆ.ಸಿ.ಹೊರಕೇರಪ್ಪ, ಕೆ.ಟಿ. ತಿಪ್ಪೇಸ್ವಾಮಿ, ಧನಂಜಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



About The Author
Discover more from JANADHWANI NEWS
Subscribe to get the latest posts sent to your email.