January 29, 2026
1760802692025.jpg

ಚಿತ್ರದುರ್ಗ ಅ. 18 :
ರಾಜ್ಯದ ಮಹತ್ವಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳಿಂದ ಕರ್ನಾಟಕ ರಾಜ್ಯದ ತಲಾ ಆದಾಯ ಹೆಚ್ಚಳವಾಗಿದೆ ಎಂಬುದನ್ನು ಕೇಂದ್ರ ಸರ್ಕಾರ ನೀಡಿರುವ ವರದಿಗಳಿಂದಲೇ ತಿಳಿದುಬಂದಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಹೇಳಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನಾಡಿನ ಜನರಿಗೆ ನೀಡಿದ್ದ ಭರವಸೆಯಂತೆ, ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೂಡಲೆ ಜಾರಿಗೊಳಿಸಿ, ನುಡಿದಂತೆ ನಡೆದಿದೆ. ನಮ್ಮ ಸರ್ಕಾರ ಜಾರಿಗೊಳಿಸಿರುವ ಪ್ರತಿಯೊಂದು ಗ್ಯಾರಂಟಿ ಯೋಜನೆಗಳು ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಸಬಲೀಕರಣ ದೃಷ್ಟಿಯಿಂದ ಮಹತ್ವದ್ದಾಗಿವೆ. ಯೋಜನೆಗಳ ಸವಲತ್ತು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿವೆ. ಪಂಚಗ್ಯಾರಂಟಿ ಯೋಜನೆಗಳಿಂದ ದೇಶಕ್ಕೆ ಕರ್ನಾಟಕ ಮಾದರಿಯಾಗಿದೆ. ಈಗ ದೇಶದೆಲ್ಲೆಡೆ ಕರ್ನಾಟಕ ಮಾಡೆಲ್ ಆಗುತ್ತಿದೆ. ಪಂಚಗ್ಯಾರಂಟಿಗಳ ಮುಖಾಂತರ ಜಿಲ್ಲೆಯ ಜನತೆಗೆ ಸರ್ಕಾರ 2,588.64 ಕೋಟಿ ರೂ. ಹಣವನ್ನು ವ್ಯಯಿಸಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿ ಜೊತೆಗೆ ಜನಕಲ್ಯಾಣ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುμÁ್ಠನಕ್ಕೆ ತಂದಿದೆ. ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕಾಭಿವೃದ್ಧಿಗೆ ಗ್ಯಾರಂಟಿ ಯೋಜನೆಗಳು ಆಧಾರವಾಗಿರುವೆ. ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗಾಗಿಯೇ ಒಟ್ಟು 98,500 ಕೋಟಿ ರೂ. ಗಳನ್ನು ನೀಡಿದೆ. ಇದರ ನಡುವೆಯೂ ಅಭಿವೃದ್ದಿಗಾಗಿಯೇ ಈ ವರ್ಷ ಬಜೆಟ್‍ನಲ್ಲಿ 1.35 ಲಕ್ಷ ಕೋಟಿ ರೂ. ಅನುದಾನವನ್ನು ಮೀಸಲಿರಿಸಿದೆ. ರಾಜ್ಯದ 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸುಮಾರು 27 ಸಾವಿರ ಕೋಟಿ ರೂ. ಗಳ ಸಾಲವನ್ನು ನೀಡುವ ಗುರಿ ಹೊಂದಲಾಗಿದೆ. ರೈತ ಬಾಂಧವರು ಸರ್ಕಾರದ ಈ ಕೊಡುಗೆಯನ್ನು ಸ್ಮರಿಸಬೇಕಿದೆ. ಹಣದ ಕೊರತೆಯಾಗಿದೆ ಎಂದು ಸುಳ್ಳು ಅಪಪ್ರಚಾರ ಮಾಡುವ ವಿರೋಧ ಪಕ್ಷಗಳಿಗೆ ಈ ಅಂಕಿ ಅಂಶಗಳೇ ಉತ್ತರ ಹೇಳುತ್ತವೆ ಎಂದರು.
ಕೇಂದ್ರ ಸರ್ಕಾರ ಕಳೆದ ಆಗಸ್ಟ್ ತಿಂಗಳಿನಿಂದ ನೀಡಿದ ಅಂಕಿ ಅಂಶಗಳಂತೆ ರಾಜ್ಯಗಳ ಸರಾಸರಿ ತಲಾ ಆದಾಯ 1. 05 ಲಕ್ಷ ರೂ. ಗಳಿದ್ದರೆ, ಕರ್ನಾಟಕ ರಾಜ್ಯದ ತಲಾ ಆದಾಯ 2.04 ಲಕ್ಷ ರೂ. ಗಳಾಗಿವೆ. ರಾಜ್ಯದ ತಲಾ ಆದಾಯ ಹೆಚ್ಚಳಕ್ಕೆ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳೇ ಕಾರಣವಾಗಿವೆ ಎಂಬುದನ್ನು ಆರ್ಥಿಕ ತಜ್ಞರೇ ಹೇಳುತ್ತಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳು ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಮಾತನಾಡಿ, ಅನ್ನಭಾಗ್ಯ ಯೋಜನೆಯಿಂದ ಬಡವರು ಮೂರು ಹೊತ್ತು ನೆಮ್ಮದಿಯಾಗಿ ಊಟ ಮಾಡುತ್ತಿದ್ದಾರೆ. ರಾಜ್ಯವನ್ನು ಹಸಿವು ಮುಕ್ತವನ್ನಾಗಿಸುವಲ್ಲಿ ಅನ್ನಭಾಗ್ಯ ಯೋಜನೆ ಪರಿಣಾಮಕಾರಿಯಾಗಿದ್ದು, ಬಡ ಕುಟುಂಬಗಳಿಗೆ ಈ ಯೋಜನೆ ಆಧಾರವಾಗಿದೆ. ಅಧಿಕಾರಿಗಳು ವಿವಿಧ ಕಾರಣಗಳಿಗಾಗಿ, ಅವೈಜ್ಞಾನಿಕವಾಗಿ ಅರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್‍ಗಳನ್ನು ರದ್ದುಗೊಳಿಸಬಾರದು. ಸಮರ್ಪಕವಾಗಿ ಪರಿಶೀಲಿಸಿದ ಬಳಿಕವೇ ಕ್ರಮ ಕೈಗೊಳ್ಳಬೇಕು. ಅರ್ಹ ಫಲಾನುಭವಿಗಳು ಈ ಯೋಜನೆಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಶೀಘ್ರ :
********** ಚಿತ್ರದುರ್ಗ ಜಿಲ್ಲೆ ಪದೇ ಪದೇ ಬರಕ್ಕೆ ತುತ್ತಾಗುವ ಹಿಂದುಳಿದ ಜಿಲ್ಲೆಯಾಗಿದ್ದು, ಪಂಚ ಗ್ಯಾರಂಟಿ ಯೋಜನೆಗಳು ಈ ಜಿಲ್ಲೆಯ ಬಡ ಜನರ ಪಾಲಿಗೆ ವರದಾನವಾಗಿದೆ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಸುಮಾರು ಶೇ. 98 ರಷ್ಟು ಅನುಷ್ಠಾನವಾಗಿದ್ದು, ಜಿಲ್ಲೆಯ ಫಲಾನುಭವಿಗಳು ಯೋಜನೆಯ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲಿಯೇ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಟ 300 ಜನ ಗ್ಯಾರಂಟಿ ಫಲಾನುಭವಿಗಳನ್ನು ಜಿಲ್ಲಾ ಕೇಂದ್ರಕ್ಕೆ ಕರೆಯಿಸಿ, ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಂವಾದ ಹಾಗೂ ಸಮಾವೇಶವನ್ನು ಆಯೋಜಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ದಿನಾಂಕ ಹಾಗೂ ಸ್ಥಳ ನಿಗದಿಪಡಿಸಲಾಗುವುದು. ಅದೇ ರೀತಿ ರಾಜ್ಯ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲೂ “ಗ್ರಾಮ ಪಂಚಾಯತಿಗಳ ನಡೆ- ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕಡೆ” ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು, ಇದರ ರೂಪುರೇಷೆ ಸಿದ್ಧವಾಗುತ್ತಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಈ ಕುರಿತು ಘೋಷಣೆ ಮಾಡಲಿದ್ದಾರೆ ಎಂದರು.
ಶಕ್ತಿ ಯೋಜನೆ :
*******ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 57 ಸಾವಿರ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. 4.83 ಕೋಟಿ ಮಹಿಳೆಯರು ಉಚಿತ ಪ್ರಯಾಣಿಸಿದ್ದು, ಇದಕ್ಕಾಗಿ 202.85 ಕೋಟಿ ರೂ. ಹಣವನ್ನು ಸಾರಿಗೆ ನಿಗಮಕ್ಕೆ ಸರ್ಕಾರ ಪಾವತಿ ಮಾಡಿದೆ. ಹಿರಿಯೂರಿನಲ್ಲಿ ಇತ್ತೀಚೆಗೆ ಡಿಪೋ ಉದ್ಘಾಟನೆಯಾಗಿದೆ. ಶೀಘ್ರದಲ್ಲಿಯೇ ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ಘಟಕಗಳು ಕೂಡ ಉದ್ಘಾಟನೆಯಾಗಲಿವೆ ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ ತಿಳಿಸಿದರು. ಶಕ್ತಿ ಯೋಜನೆ ಜಾರಿಯಿಂದಾಗಿ ಬಹಳಷ್ಟು ಮಹಿಳೆಯರು ಉದ್ಯೋಗ ಕಂಡುಕೊಂಡಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಕೂಡ ಹೆಣ್ಣು ಮಕ್ಕಳ ದಾಖಲಾತಿ ಹೆಚ್ಚಿದ್ದು, ಶಿಕ್ಷಣದಿಂದ ವಂಚಿತರಾಗುತ್ತಿದ್ದ ಹೆಣ್ಣು ಮಕ್ಕಳಿಗೆ ಶಕ್ತಿ ಯೋಜನೆ ವರದಾನವಾಗಿದೆ. ಮಹಿಳೆಯರು, ಹೆಣ್ಣು ಮಕ್ಕಳು ಹೆಚ್ಚು ಬಸ್ ಪ್ರಯಾಣ ಮಾಡುತ್ತಿದ್ದು, ಬಸ್‍ಗಳ ಕೊರತೆ ಕೂಡ ಆಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಕೆಲ ಸದಸ್ಯರು ಅಭಿಪ್ರಾಯಪಟ್ಟರು. ಕೆಎಸ್‍ಆರ್‍ಟಿಸಿ ಡಿಸಿ ವೆಂಕಟೇಶ್ ಪ್ರತಿಕ್ರಿಯಿಸಿ, ಬಸ್‍ಗಳು ಹಾಗೂ ಸಿಬ್ಬಂದಿ ಕೊರತೆ ಇರುವುದು ನಿಜ. ಹೀಗಾಗಿ ಜಿಲ್ಲೆಗೆ 150 ಹೊಸ ಬಸ್‍ಗಳ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿದೆ. ಹೊಸ ಘಟಕಗಳು ಪ್ರಾರಂಭವಾದ ಬಳಿಕ ಬಸ್‍ಗಳು ಪೂರೈಕೆಯಾಗುವ ನಿರೀಕ್ಷೆ ಇದೆ ಎಂದರು.
ಅನ್ನಭಾಗ್ಯ :
*******ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 14,03,399 ಪಡಿತರ ಚೀಟಿಗಳಿವೆ. ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ (ಆಃಖಿ) ಮೂಲಕ 371.95 ಕೋಟಿ ರೂ. ಹಣವನ್ನು ವರ್ಗಾಯಿಸಲಾಗಿದೆ. ಜಿಲ್ಲೆಯಲ್ಲಿ 3,94,636 ಬಿಪಿಎಲ್ ಕಾರ್ಡ್‍ದಾರರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಪಡಿತರ ಅಕ್ಕಿಯನ್ನು ಗಲ್ಲಿ ಗಲ್ಲಿಗಳಲ್ಲಿ ಆಟೋಗಳ ಮೂಲಕ ಅಕ್ರಮವಾಗಿ ಸಂಗ್ರಹಿಸಿ, ಕಳ್ಳ ಸಾಗಾಣಿಕೆ ಮಾಡುವ ಪ್ರಕರಣ ನಡೆಯುತ್ತಿದ್ದರೂ, ಅಧಿಕಾರಿಗಳು ಇದನ್ನು ಗಮನಿಸುತ್ತಿಲ್ಲ. ಕಾಳಸಂತೆಕೋರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ ಆರೋಪಿಸಿದರು. ಅನ್ನಭಾಗ್ಯ ಯೋಜನೆಯಡಿ ವಿತರಣೆ ಆಗುವ ಅಕ್ಕಿಯ ತೂಕದಲ್ಲಿ ಮೋಸವಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಯೋಜನೆ ಬಗ್ಗೆ ಎಲ್ಲೂ ಲೋಪವಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಗ್ಯಾರಂಟಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಅಧಿಕಾರಿಗಳು ಮತ್ತು ಫಲಾನುಭವಿಗಳ ನಡುವಿನ ಕೊಂಡಿಯಂತೆ ಕಾರ್ಯ ನಿರ್ವಹಿಸಬೇಕು. ಗ್ಯಾರಂಟಿ ಅದಾಲತ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ಥಳೀಯ ಮಟ್ಟದಲ್ಲೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಪಡಿತರ ಅಕ್ಕಿ ಕಾಳಸಂತೆಗೆ ಹೋಗದಂತೆ ಎಚ್ಚರ ವಹಿಸಬೇಕು ಎಂದು ದಿನೇಶ್ ಗೂಳಿಗೌಡ ಸೂಚನೆ ನೀಡಿದರು.
ಗೃಹಲಕ್ಷ್ಮಿ :
****** ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 3,98,083 ಫಲಾನುಭವಿಗಳಿದ್ದು, 1617.01 ಕೋಟಿ ರೂ. ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಶೇ.98ರಷ್ಟು ಮಂದಿ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಗೃಹಲಕ್ಷ್ಮಿ ಯೋಜನೆಯಲ್ಲಿ ನೋಂದಣಿಯಾದವರ ಪೈಕಿ 4966 ಮಂದಿ ಮೃತಪಟ್ಟಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ತಿಳಿಸಿದರು. ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿದ್ದ ಫಲಾನುಭವಿಗಳು ಮೃತಪಟ್ಟಿರುವ ಕುರಿತು ಪ್ರತಿ ತಿಂಗಳು ಮಾಹಿತಿ ಕ್ರೋಢೀಕರಿಸಿ ರಾಜ್ಯ ಸಮಿತಿಗೆ ಕಳುಹಿಸಬೇಕು ಎಂದು ಉಪಾಧ್ಯಕ್ಷ ಗೂಳಿಗೌಡ ಅವರು ಸೂಚನೆ ನೀಡಿದರು.
ಗೃಹಜ್ಯೋತಿ :
******ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3,79,140 ಗ್ರಾಹಕರು ನೋಂದಣಿಯಾಗಿದ್ದು 65.13 ಕೋಟಿ ಉಚಿತ ವಿದ್ಯುತ್ ಬಳಕೆ ಮಾಡಿದ್ದಾರೆ. ಇದಕ್ಕಾಗಿ ಸರ್ಕಾರ 371.80 ಕೋಟಿ ರೂ. ಸಬ್ಸಿಡಿ ಹಣವನ್ನು ಪಾವತಿ ಮಾಡಲಾಗಿದೆ. ಜಿಲ್ಲೆಯ ಶೇ.95.70 ಮಂದಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಬೆಸ್ಕಾಂ ನ ಎಲ್ಲಾ ಶಾಖೆಗಳಲ್ಲಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಪ್ರಕಟಿಸಲು ಇಲಾಖೆ ನಿರ್ದೇಶನ ನೀಡಿದ್ದು, ಶೀಘ್ರ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಮಾತನಾಡಿ, ರಾಜ್ಯದಲ್ಲಿ ಸುಮಾರು 35 ಲಕ್ಷ ಕೃಷಿ ಪಂಪ್‍ಸೆಟ್‍ಗಳು ಇವೆ. ಚಿತ್ರದುರ್ಗ ಜಿಲ್ಲೆ ಒಂದರಲ್ಲೇ 5 ಲಕ್ಷಕ್ಕೂ ಹೆಚ್ಚು ಕೃಷಿ ಪಂಪ್‍ಸೆಟ್‍ಗಳು ಇವೆ. ಸುಮಾರು 19 ಸಾವಿರ ಕೋಟಿ ರೂ. ಗಳನ್ನು ರಾಜ್ಯ ಸರ್ಕಾರ ರೈತರ ಪರವಾಗಿ ಹಣ ಪಾವತಿಸುತ್ತಿದೆ. ಈ ಕುರಿತು ಗ್ಯಾರಂಟಿ ಯೋಜನೆ ಸಮಿತಿಗಳ ಸದಸ್ಯರು ರೈತರಲ್ಲಿ ಅರಿವು ಮೂಡಿಸಬೇಕು ಎಂದರು.
ಯುವನಿಧಿ :
******ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯ 7,183 ಫಲಾನುಭವಿಗಳಿಗೆ ನಿರುದ್ಯೋಗ ಭತ್ಯೆಯಾಗಿ 19.03 ಕೋಟಿ ರೂ. ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ದಿನೇಶ್ ಗೂಳಿಗೌಡ ಅವರು ಪ್ರತಿಕ್ರಿಯಿಸಿ, ಎಲ್ಲ ಜಿಲ್ಲೆಗಳಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಬೇಕು. ಕೌಶಲ್ಯ ತರಬೇತಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮುಖ್ಯಮಂತ್ರಿಗಳೇ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಉದ್ಯೋಗ ಮೇಳವನ್ನು ಆಯೋಜಿಸಲು ಕ್ರಮ ವಹಿಸಬೇಕು. ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿದ್ದ ಫಲಾನುಭವಿಗಳಿಗೆ ಉದ್ಯೋಗ ದೊರೆತಿದ್ದರೆ, ಅಂತಹ ಫಲಾನುಭವಿಗಳಿಂದ ಯುವನಿಧಿ ಯೋಜನೆ ಕುರಿತ ಅಭಿಪ್ರಾಯವನ್ನು ದಾಖಲಿಸುವ ಕಾರ್ಯ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷರುಗಳಾದ ಡಿ.ಎನ್. ಮೈಲಾರಪ್ಪ, ನಾಗೇಶ್ ರೆಡ್ಡಿ, ನಿರಂಜನ್, ಸದಸ್ಯರಾದ ಇಂದಿರಾ, ಅಬ್ದುಲ್ ಷಾ ವಲಿ, ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಮಟ್ಟದ ಅಧ್ಯಕ್ಷರುಗಳು, ಸದಸ್ಯರುಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading