December 14, 2025
1760801673385.jpg

ಚಿತ್ರದುರ್ಗ ಅ.18:
ನಿರಾಶ್ರಿತರು, ದೌರ್ಜನ್ಯಕ್ಕೆ ಒಳಗಾದವರು, ನಿವೇಶನ ಇಲ್ಲದವರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡಲು ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿಯೂ ಜಾಗ ಗುರುತಿಸಿ ಮೀಸಲು ಇರಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಭೆ, ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆ ಹಾಗೂ ಮ್ಯಾನುಯಲ್ ಸ್ಕ್ಯಾವೆಂಜಿಗ್ ಕುರಿತು ಜರುಗಿದ ತ್ರೈಮಾಸಿಕ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡದರು.
ಆಶ್ರಯ ನಿವೇಶನ ಹಂಚಿಕೆಗಾಗಿ ಜಿಲ್ಲೆಯಾದ್ಯಂತ 1,000 ಎಕರೆ ಜಾಗವನ್ನು ಈಗಾಗಲೇ ಕಂದಾಯ ಇಲಾಖೆಯಿಂದ ಗುರುತಿಸಿಲಾಗಿದೆ. ಬೇಡಿಕೆ ಅನುಸಾರ ಜಾಗವನ್ನು ಮಂಜೂರು ಮಾಡಲಾಗುವುದು. ದೌರ್ಜನ್ಯಕ್ಕೆ ಒಳಾಗದವರ ಕುಟುಂಬಗಳಿಗೆ ಕಾಯ್ದೆ ಅನುಸಾರ ಧನ ಪರಿಹಾರದ ಜೊತೆ ನಿವೇಶನ ಹಂಚಿಕೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಂಜೂರು ಮಾಡುವ ಸಮಯದಲ್ಲಿಯೂ ಆದ್ಯತೆ ನೀಡಲಾಗುವುದು. ದೌರ್ಜನ್ಯ ಪ್ರಕರಣದಲ್ಲಿ ಹಲ್ಲೆಯಿಂದ ಬಲಿಯಾದವರ ಕುಟುಂಬದ ಸದಸ್ಯರಿಗೆ ನಿಯಮಾನುಸಾರ ಉದ್ಯೋಗ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಅಕ್ಟೋಬರ್ ವರೆಗೆ ಒಟ್ಟು 30 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಸಂತ್ರಸ್ಥರಿಗೆ ಒಟ್ಟು ರೂ.40.42 ಲಕ್ಷ ಪರಿಹಾರ ಧನ ನೀಡಲಾಗಿದೆ. 06 ಪ್ರಕರಣದಲ್ಲಿ ಸಂತ್ರಸ್ಥರು ಮರಣ ಹೊಂದಿದ್ದಾರೆ. 03 ಅತ್ಯಾಚಾರ, 21 ಜಾತಿ ನಿಂದನೆ ಪ್ರಕರಣಗಳು ದಾಖಲಾಗಿವೆ.
ಜಿಲ್ಲೆಯಲ್ಲಿ ವಿವಿಧ ನ್ಯಾಯಾಲಯಗಳಲ್ಲಿ 136 ದೌರ್ಜನ್ಯ ಪ್ರಕರಣಗಳು ಬಾಕಿಯಿವೆ. ಈ ಪೈಕಿ 01 ಪ್ರಕರಣದಲ್ಲಿ ಶಿಕ್ಷೆಯಾದರೆ, 12 ಪ್ರಕರಣಗಳಲ್ಲಿ ಆರೋಪಿತರು ಬಿಡುಗಡೆಯಾಗಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆ ಕರೆತರಬೇಕು. ಗ್ರಾಮೀಣ ಭಾಗದಲ್ಲಿ ದೇವರ ಹೆಸರಿನಲ್ಲಿ ಅಮಾನವೀಯ ಮೌಢ್ಯ ಪದ್ದತಿಗಳು ನಡೆಯದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಪೌಷ್ಠಿಕ ಮಕ್ಕಳ ಆರೋಗ್ಯ ಸುಧಾರಣೆಗೆ ಹೆಚ್ಚುವರಿಯಾಗಿ ಆಹಾರ, ಹಾಲು, ಮೊಟ್ಟೆ ವಿತರಿಸುವುದರ ಜೊತೆ ನಿಯಮಿತವಾಗಿ ವೈದ್ಯಕೀಯ ತಪಾಸಣೆ ನಡೆಸಬೇಕು. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಬಾಲ ಕಾರ್ಮಿಕರನ್ನು ನೇಮಿಸಿಕೊಂಡ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಬೇಕು. ಕೃಷಿ ಇಲಾಖೆ ಅಧಿಕಾರಿಗಳು ಹೆಚ್ಚು ಕ್ಷೇತ್ರ ಭೇಟಿಗಳನ್ನು ಮಾಡುವ ಮೂಲಕ ರೈತರಿಗೆ ಬೆಳೆಗಳಲ್ಲಿನ ಕೀಟ ಹಾಗೂ ರೋಗ ನಿಯಂತ್ರಣ ಕುರಿತು ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.
ಇ-ಸ್ನಾಪ್ ತಂತ್ರಾಂಶದ ಮುಖಾಂತರ ಜಿಲ್ಲೆಯ ರೈತರಿಗೆ ರೋಗ ಹಾಗೂ ಕೀಟ ನಿಯಂತ್ರಣ ಕುರಿತು ರೈತರ ಮೊಬೈಲ್‍ಗೆ ಸಂದೇಶ ಕಳುಹಿಸುವ ಮೂಲಕ ಪರಿಹಾರ ನೀಡಲಾಗುತ್ತಿದೆ. ಪ್ರಸಕ್ತ ಮುಂಗಾರಿನಲ್ಲಿ 27,304 ಸಲಹೆಗಳನ್ನು ಇ-ಸ್ನಾಪ್ ಮೂಲಕ ನೀಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಮಿಥುನ್ ಸಭೆಯಲ್ಲಿ ಮಾಹಿತಿ ನೀಡಿದರು.
ವಿಶೇಷ ಪೊಲೀಸ್ ಠಾಣೆ ಸ್ಥಾಪನೆ :
**********
ಜಿಲ್ಲೆಯಲ್ಲಿ ದಾಖಲಾಗುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಶೀಘ್ರವಾಗಿ ವಿಲೇ ಮಾಡಲು ಪ್ರತ್ಯೇಕವಾಗಿ ವಿಶೇಷ ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ. ಸಂತ್ರಸ್ಥರು ನೇರವಾಗಿ ಈ ವಿಶೇಷ ಪೊಲೀಸ್ ಠಾಣೆಗೆ ಆಗಮಿಸಿ ದೂರು ಸಲ್ಲಿಸಬಹುದು. ಇತರೆ ಠಾಣೆಗಳಲ್ಲಿ ದಾಖಲಾದ ದೌರ್ಜನ್ಯ ಪ್ರಕರಣಗಳನ್ನು ವಿಶೇಷ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 15 ದೌರ್ಜನ್ಯ ಪಕ್ರಣಗಳು ದಾಖಲಾಗಿವೆ. ಇದರಲ್ಲಿ 7 ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. 1 ಪ್ರಕರಣದಲ್ಲಿ ವಿಚಾರಣೆಗೆ ತಡೆಯಾಜ್ಞೆ ತರಲಾಗಿದೆ. 1 ಪ್ರಕರಣದ ಚಾರ್ಜ್ ಶೀಟ್ ಸಿದ್ದವಾಗಿದೆ. 8 ತನಿಖೆ ಹಂತದಲ್ಲಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಂಜತ್ ಕುಮಾರ್ ಬಂಡಾರು ಸಭೆಯಲ್ಲಿ ತಿಳಿಸಿದರು.
ಸಮಿತಿ ಸದಸ್ಯರ ಅವಧಿ ಮುಕ್ತಾಯ-ಸನ್ಮಾನ :
***********
ಮೂರು ವರ್ಷದ ಅವಧಿಗೆ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ನೇಮಕವಾಗಿದ್ದ ಸದಸ್ಯರ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಸದಸ್ಯರಾದ ಗುಜ್ಜಾರಪ್ಪ, ಎಂ.ಡಿ.ನವಕೋಟಿ, ಡಿ.ಓ.ಮೊರಾರ್ಜಿ, ಬೋರಸ್ವಾಮಿ, ಹೇಮೇಗೌಡ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಕೈ ಜೋಡಿಸಿ, ಶಾಂತಿಯುತವಾಗಿ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ಥರಿಗೆ ಪರಿಹಾರ ದೊರಕಿಸಲು ಸದಸ್ಯರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಫಲಾನುಭವಿಗಳ ಆಯ್ಕೆಗೆ ಸೂಚನೆ:
***********
ಎಲ್ಲಾ ಇಲಾಖೆಗಳು ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅಡಿ ನಿಗದಿಪಡಿಸಿದ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಶೇ.100 ಆರ್ಥಿಕ ಪ್ರಗತಿಯನ್ನು ಸಾಧಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನುದಾನ ಕೈ ತಪ್ಪಿ ಹೋದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದರು.
ಮ್ಯಾನುಯಲ್ ಸ್ಕ್ಯಾವೆಂಜರ್ ಕುಟುಂಬ ವಿವರ ಸಂಗ್ರಹಿಸಿ :
************
ಪ್ರಸ್ತುತ ಜಿಲ್ಲೆಯಲ್ಲಿ ಯಾವುದೇ ಮ್ಯಾನುಯಲ್ ಸ್ಕ್ಯಾವೆಂಜರ್‍ಗಳು ಇಲ್ಲ. ಆದರೆ 2013 ಕ್ಕಿಂತ ಮುನ್ನ ಇದ್ದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕೆಲಸಗಾರರ ಕುಟುಂಬದ ವಿವರಗಳನ್ನು ಸಂಗ್ರಹಿಸಬೇಕು. ಅವರಿಗೆ ದೊರೆತ ಯೋಜನೆಗಳ ಮಾಹಿತಿಯನ್ನು ಸಂಗ್ರಹಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ್, ಪಶು ವೈದ್ಯಕೀಯ ಹಾಗೂ ಪಶು ಸೇವಾ ಇಲಾಖೆ ಉಪನಿರ್ದೇಶಕ ಡಾ.ಕುಮಾರ್ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading