July 20, 2025
1752844012011.jpg


ಚಿತ್ರದುರ್ಗಜುಲೈ18:
ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ, ಆಸ್ಪತ್ರೆ ಆವರಣ ಶುಚಿತ್ವದ ಕಡೆಗೆ ಗಮನಹರಿಸಿ ಸೊಳ್ಳೆ ಉತ್ಪತ್ತಿ ತಾಣಗಳ ನಾಶಪಡಿಸಿ 2027ಕ್ಕೆ ಮಲೇರಿಯ ಮುಕ್ತ ದೇಶವನ್ನಾಗಿಸಲು ಖಾಸಗಿ ಆಸ್ಪತ್ರೆ ವೈದ್ಯರು ಮತ್ತು ಇತರೆ ವೃಂದದ ಅಧಿಕಾರಿಗಳ ಸಹಕಾರ ಅತ್ಯಗತ್ಯ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಶಿ ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ, ತಾಲ್ಲೂಕು ಅಧಿಕಾರಿಗಳ ಕಚೇರಿಯಿಂದ ಮಲೇರಿಯಾ ವಿರೋಧ ಮಾಸ ಆಚರಣೆ-2025ರ ಅಂಗವಾಗಿ ಖಾಸಗಿ ಆಸ್ಪತ್ರೆ ವೈದ್ಯಾಧಿಕಾರಿಗಳು, ಡೈಗ್ನೋಸ್ಟಿಕ್ ವೈದ್ಯಾಧಿಕಾರಿಗಳು, ಲ್ಯಾಬೋರೇಟರಿ ತಂತ್ರಜ್ಞ ಅಧಿಕಾರಿಗಳಿಗೆ ಆಯೋಜಿಸಿದ ಮಲೇರಿಯಾ ಕುರಿತು ಸಮರ್ಥನಾ ಸಭೆ ಕಾರ್ಯಾಗಾರದಲ್ಲಿ ಗಪ್ಪಿ ಗಂಭೂಸಿಯಾ ಮೀನುಗಳು ಹಾಗೂ ಲಾರ್ವಗಳ ಪ್ರದರ್ಶನ ಮಾಡಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ. “ಮರು ಹೂಡಿಕೆ ಮಾಡಿ” “ಮರುಕಲ್ಪನೆ ಮಾಡಿ’ ‘ಮರು ಉತ್ತೇಜನ ನೀಡಿ’ ಎಂಬ ಘೋಷವಾಕ್ಯದೊಂದಿಗೆ ಮಲೇರಿಯಾ ರೋಗಕ್ಕೆ ನಿಗದಿತ ಚಿಕಿತ್ಸೆ ಲಭ್ಯವಿದೆ. ಆತಂಕ ಬೇಡ. ಆದರೆ ಶೀಘ್ರ ಪತ್ತೆ ಸಂಪೂರ್ಣ ಚಿಕಿತ್ಸೆ ಅವಶ್ಯ. 2021 ರಿಂದ ಮಲೇರಿಯಾ ಪ್ರಕರಣಗಳು ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಆದರೆ ರೋಗ ಬಾರದಂತೆ ಸರ್ವರೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ. ನೀರು ನಿಲ್ಲದಂತೆ ನಿಗಾವಹಿಸಿ ನಿರುಪಯುಕ್ತ ವಸ್ತುಗಳನ್ನು ದೂರ ವಿಲೇವಾರಿ ಮಾಡಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಿ ಸೊಳ್ಳೆ ನಿಯಂತ್ರಣ ಮಾಡುವುದರ ಜೊತೆಗೆ ಸ್ವಯಂ ರಕ್ಷಣಾ ವಿಧಾನಗಳನ್ನು ಬಳಸಿ ಮಲೇರಿಯಾ ರೋಗ ನಿವಾರಣೆಗೆ ಶ್ರಮಿಸಬೇಕು ಎಂದರು.
ಖಾಸಗಿ ಆಸ್ಪತ್ರೆಗಳಿಗೆ ಬಂದ ರೋಗಿಗಳಿಗೆ ಯಾವುದೇ ಜ್ವರವಿರಲಿ ತಪ್ಪದೇ ರಕ್ತಪರೀಕ್ಷೆ ಮಾಡಿಸಿ ಮಲೇರಿಯಾ ರೋಗ ದೃಢಪಟ್ಟಲ್ಲಿ ರಾಷ್ಟ್ರೀಯ ಮಾರ್ಗಸೂಚಿಯಂತೆ ನಿಗದಿತ ಔಷಧೋಪಚಾರ ಮಾಡಬೇಕು. ಕೀಟಜನ್ಯ ರೋಗಗಳ ಲ್ಯಾಬ್ ಟೆಸ್ಟ್‍ಗಳಿಗೆ ಸರ್ಕಾರದ ಮಾರ್ಗಸೂಚಿಯಂತೆ ಶುಲ್ಕ ವಿಧಿಸುವುದು ಮತ್ತು ಅವರ ಸಂಪೂರ್ಣ ವಿಳಾಸ ದೂರವಾಣಿ ಸಂಖ್ಯೆ ನಮೂದಿಸಿ ಖಾಸಗಿ ಆಸ್ಪತ್ರೆ ವೈದ್ಯರು ಮತ್ತು ಲ್ಯಾಬೋರೇಟರಿ ವೈದ್ಯಾಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ತುರ್ತಾಗಿ ಮಾಹಿತಿ ನೀಡಬೇಕೆಂದರು. ಇದರಿಂದ ರೋಗ ನಿಯಂತ್ರಣ ಕ್ರಮ ವಹಿಸಲು ಅನುಕೂಲವೆಂದರು ಆಸ್ಪತ್ರೆಗಳಿಗೆ ಬಂದ ರೋಗಗಳಿಗೆ ಕೀಟಜನ್ಯ ರೋಗಗಳ ನಿಯಂತ್ರಣದ ಬಗ್ಗೆ ಮಾಹಿತಿ ಶಿಕ್ಷಣ ನೀಡುವುದರ ಜೊತೆಗೆ ರೋಗ ತಡೆಗೆ ಶ್ರಮಿಸಬೇಕೆಂದರು.
ಆರೋಗ್ಯ ಇಲಾಖೆ ವತಿಯಿಂದ ಕೆರೆ, ಕಟ್ಟೆ ಬಾವಿಗಳಿಗೆ ಜೈವಿಕ ನಿಯಂತ್ರಣ ಕ್ರಮವಾಗಿ ಗಪ್ಪಿ , ಗಂಭೂಸಿಯ ಮೀನುಗಳನ್ನು ಬಿಡಲಾಗಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಬಿ.ವಿ.ಗಿರೀಶ್ ಮಾತನಾಡಿ, ಮಲೇರಿಯ ಒಂದು ಪರಾವಲಂಬಿ ಸೂಕ್ಷ್ಮಾಣು ಜೀವಿಯಿಂದ ಉಂಟಾಗುತ್ತದೆ. ಸೋಂಕು ಹೊಂದಿದ ಹೆಣ್ಣು ಅನಾಪಿಲೀಸ್ ಸೊಳ್ಳೆಗಳು ಮಲೇರಿಯಾ ರೋಗವನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ ಇದರಲ್ಲಿ ನಾಲ್ಕು ಪ್ರಭೇದಗಳಿದ್ದು, ರಾಜ್ಯದಲ್ಲಿ ಪಿವಿ ಮತ್ತು ಪಿಎಫ್ ಮಲೇರಿಯಾ ಪ್ರಭೇದಗಳು ಸದ್ಯದಲ್ಲಿ ಕಂಡು ಬರುತ್ತಿದ್ದು, ಎಂಡಮಿಕ್ ಪ್ರದೇಶದಲ್ಲಿ ಭೇಟಿ ನೀಡಿ ಹಿಂತಿರುಗಿದ ವ್ಯಕ್ತಿಗೆ ಜ್ವರ ಇದೆ ಎಂದು ಆಸ್ಪತ್ರೆಗೆ ಬಂದ ರೋಗಿಗೆ ಸಂಶಯಾಸ್ಪದ ಮಲೇರಿಯಾ ಎಂದು ಪರಿಗಣಿಸಿ ರಕ್ತ ಪರೀಕ್ಷೆ ಮಾಡಿ ರೋಗ ದೃಢಪಟ್ಟರೆ ರಾಷ್ಟ್ರೀಯ ಔಷಧೋಪಚಾರ ಮಾಡಿ ರೋಗ ನಿಯಂತ್ರಣ ಮಾಡಬೇಕು ಎಂದರು.
ಜೈವಿಕ ನಿಯಂತ್ರಣ ಕ್ರಮಗಳಾದ ಗಪ್ಪಿ ಗಂಬೂಸಿಯ ಮೀನುಗಳನ್ನು ನೀರಿನ ತಾಣಗಳಲ್ಲಿ ಬಿಡುವುದು ಮನೆಯ ಮುಂದೆ ಚಂಡು ಹೂವು, ಸೇವಂತಿಗೆ, ತುಳಸಿ ಬೆಳೆಸುವುದರ ಮುಖಾಂತರ ಸೊಳ್ಳೆ ನಿಯಂತ್ರಿಸಬಹುದು ಎಂದರು.
ಕೀಟಶಾಸ್ತ್ರಜ್ಞೆ ನಂದಿನಿಕಡಿ ಮಾತನಾಡಿ, ಮಲೇರಿಯಾ ಸಂಶಯಾಸ್ಪದ ರೋಗಿ ಕಂಡು ಬಂದರೆ ಗುಣಮಟ್ಟದ ರಕ್ತ ಲೇಪನ ಮಾಡಿ ತುರ್ತಾಗಿ ಪರೀಕ್ಷೆ ಮಾಡಿರಿ ರೋಗ ದೃಢಪಟ್ಟಲ್ಲಿ ತುರ್ತಾಗಿ ಡಿಎಚ್‍ಒ ಕಚೇರಿಗೆ ಮಾಹಿತಿ ನೀಡಿರಿ. ಆರೋಗ್ಯ ಕಾರ್ಯಕರ್ತರು ರೋಗಿಗಳಿಗೆ 14 ದಿನಗಳ ಚಿಕಿತ್ಸೆಗೆ ಮತ್ತು ಅನುಸರಣ ಭೇಟಿ ಮಾಡಲು ಮತ್ತು ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.
. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಕಾರ್ಯಗಾರ ನಿರೂಪಿಸಿದರು. ಕಾರ್ಯಗಾರದಲ್ಲಿ ಕರಪತ್ರಗಳ ಪ್ರದರ್ಶನ ಮತ್ತು ಹಂಚಿಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯ್ಕ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ, ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಸುರೇಶ್ ಬಾಬು, ಡಾ ಯಶಸ್, ಮತ್ತು ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಲ್ಯಾಬೋರೇಟರಿ ವೈದ್ಯಾಧಿಕಾರಿಗಳು ಹಾಗೂ ಪ್ರಯೋಗಶಾಲಾ ತಂತ್ರಜ್ಞಾಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಳಲಿ ಶ್ರೀನಿವಾಸ್, ಮಲ್ಲಿಕಾರ್ಜುನ, ಶ್ರೀನಿವಾಸ್ ಮೂರ್ತಿ, ಯೋಗೀಶ್, ಗಂಗಾಧರ ರೆಡ್ಡಿ., ನಂದೀಶ್, ಪ್ರವೀಣ್ ಕುಮಾರ್, ನಾಗರಾಜ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ನಾಗರತ್ನ ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading