
ಚಿತ್ರದುರ್ಗ ಮೇ. 17 : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಿಂದ ಚಳ್ಳಕೆರೆ ತಾಲ್ಲೂಕಿಗೆ ಹೊಸದಾಗಿ ರೈಲ್ವೆ ಸಂಪರ್ಕ ಕಲ್ಪಿಸಲು ಹೊಸ ರೈಲ್ವೇ ಮಾರ್ಗ ಯೋಜನೆ ರೂಪಿಸಿ ಅನುಷ್ಟಾನಗೊಳಿಸಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮನವಿ ಮಾಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಕೇಂದ್ರ ರೈಲ್ವೆ ಖಾತೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಜರುಗಿದ ದಾವಣಗೆರೆ-ಚಿತ್ರದುರ್ಗ-ತುಮಕೂರು ನೂತನ ರೈಲ್ವೆ ಮಾರ್ಗದ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಈ ಮನವಿ ಸಲ್ಲಿಸಿದರು.







ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸದಾಗಿ ದಾವಣಗೆರೆ – ಚಿತ್ರದುರ್ಗ-ತುಮಕೂರು ನೇರ ರೈಲ್ವೇ ಯೋಜನೆಯ ಕಾಮಗಾರಿಯು ಪ್ರಾರಂಭವಾಗಿರುವುದು ಜಿಲ್ಲೆಯ ಜನತೆಗೆ ಸಂತೋಷದ ವಿಷಯವಾಗಿರುತ್ತದೆ. ಈ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿಗೆ ರೈಲ್ವೇ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಅದೇ ರೀತಿ ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ, ಹೊಸದುರ್ಗ ಮತ್ತು ಚಳ್ಳಕೆರೆ ತಾಲ್ಲೂಕಿಗೆ ಈಗಾಗಲೇ ವಿವಿಧ ರೀತಿಯಲ್ಲಿ ರೈಲ್ವೇ ಸಂಪರ್ಕ ಕಲ್ಪಿಸಲಾಗಿದ್ದು, ಹಿರಿಯೂರು ತಾಲ್ಲೂಕಿನಿಂದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿಗೆ ಇದುವರೆವಿಗೂ ಯಾವುದೇ ರೈಲ್ವೆ ಸಂಪರ್ಕ ಕಲ್ಪಿಸಿರುವುದಿಲ್ಲ. ಇದರಿಂದ ಚಳ್ಳಕೆರೆ ಮತ್ತು ಹಿರಿಯೂರು ತಾಲ್ಲೂಕಿನ ಮಧ್ಯ ಭಾಗದ ಸಾರ್ವಜನಿಕರ, ರೈತರ ಉತ್ಪನ್ನಗಳಿಗೆ ಹಾಗೂ ಇತರ ಕೃಷಿಯೇತರ ಉತ್ಪನ್ನಗಳಿಗೆ ಸಾಗಣೆ ಮಾಡಲು ತೊಂದರೆಯಾಗುತ್ತಿದ್ದು ಅಲ್ಲದೇ ಸಾರ್ವಜನಿರು ಸಹ ರೈಲ್ವೆ ಸೇವೆಯಿಂದ ವಂಚಿತರಾಗಿದ್ದು, ಅವರು ಬೆಂಗಳೂರಿಗೆ ಮತ್ತು ಉತ್ತರ ಭಾರತದ ನಗರಗಳಿಗೆ ಸಂಪರ್ಕ ಕೈಗೊಳ್ಳಬೇಕಾದಲ್ಲಿ ಚಳ್ಳಕೆರೆಯಿಂದ ಬಸ್ ಮೂಲಕ ಬೆಂಗಳೂರಿಗೆ ತೆರಳಿ ಅಲ್ಲಿಂದ ಉತ್ತರ ಭಾರತದ ನಗರಗಳಿಗೆ ರೈಲು ಮೂಲಕ ತೆರಳುತ್ತಿದ್ದು ಇದರಿಂದ ಅಧಿಕ ಆರ್ಥಿಕ ವೆಚ್ಚವಾಗುತ್ತಿದೆ. ಹೀಗಾಗಿ ಚಳ್ಳಕೆರೆ ಹಾಗೂ ಹಿರಿಯೂರು ಮಧ್ಯ ಭಾಗದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಮತ್ತು ಮಕ್ಕಳ ಉನ್ನತ ವಿಧ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಿರಿಯೂರು ತಾಲ್ಲೂಕಿನಿಂದ ಚಿತ್ರುದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿಗೆ ಹೊಸದಾಗಿ ರೈಲ್ವೇ ಸಂಪರ್ಕ ಕಲ್ಪಿಸಲು ಹೊಸ ರೈಲ್ವೇ ಮಾರ್ಗ ಯೋಜನೆ ರೂಪಿಸುವುದು ಅತ್ಯವ್ಯಶಕವಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಿಂದ ಚಳ್ಳಕೆರೆ ತಾಲ್ಲೂಕಿಗೆ ಹೊಸದಾಗಿ ರೈಲ್ವೇ ಸಂಪರ್ಕ ಕಲ್ಪಿಸಲು ಹೊಸ ರೈಲ್ವೆ ಮಾರ್ಗ ಯೋಜನೆ ರೂಪಿಸಿ ತುರ್ತಾಗಿ ಅನುಷ್ಟಾನಗೊಳಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳವಂತೆ ಸಚಿವ ಡಿ. ಸುಧಾಕರ್ ಅವರು ಮನವಿ ಮಾಡಿದರು. ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಕೂಡ ಇದೇ ವಿಷಯದ ಬಗ್ಗೆ ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಮಾಡಿ, ಹಿರಿಯೂರು-ಚಳ್ಳಕೆರೆ ನೂತನ ರೈಲ್ವೆ ಮಾರ್ಗ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದರು. ಮನವಿ ಸ್ವೀಕರಿಸಿದ ಸಚಿವ ಸೋಮಣ್ಣ ಪ್ರತಿಕ್ರಿಯಿಸಿ, ಈ ಕುರಿತು ರೈಲ್ವೆ ಅಧಿಕಾರಿಗಳೊಂದಿಗೆ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸಿ, ರೈಲ್ವೆ ಕಾರ್ಗೋ ಕಾರಿಡಾರ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಗೋವಿಂದ ಎಂ. ಕಾರಜೋಳ, ಶಾಸಕರಾದ ಟಿ.ರಘುಮೂರ್ತಿ, ಡಾ.ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ರೈಲ್ವೆ ಇಲಾಖೆ ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ಅಜಯ್ ಶರ್ಮಾ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಜಿಎಂ) ಮುದಿತ್ ಮಿತ್ತಲ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ನೇರ ರೈಲ್ವೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್, ಸೇರಿದಂತ ರೈಲ್ವೆ ಇಲಾಖೆ ಅಧಿಕಾರಿಗಳು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.