March 18, 2026
IMG20260317115321_01.jpg

ಚಳ್ಳಕೆರೆ: ತಾಲೂಕಿನ ಹೆಗ್ಗೆರೆ ಸಮೀಪ ಇರುವ ಪ್ರಕಾಶ್ ಸ್ಪಾಂಜ್ ಅಂಡ್ ಐರನ್ ಕಂಪನಿಗೆ ಕಬ್ಬಿಣದ ಅದಿರು ಸಾಗಣೆ ಮಾಡುವ ಟಿಪ್ಪರ್ ಲಾರಿಗಳಿಂದ ಉಂಟಾಗುತ್ತಿರುವ ಭಾರೀ ಧೂಳು ಹಾಗೂ ರಸ್ತೆ ಹಾನಿ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ತಾಲೂಕು ಘಟಕ ತಹಶೀಲ್ದಾರ್ ರೇಹಾನ್ ಪಾಷಾಗೆ ಮನವಿ ಸಲ್ಲಿಸಿದೆ.ಸಂಘಟನೆಯ ತಾಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿ, ನಗರದ ರೈಲ್ವೆ ನಿಲ್ದಾಣದ ಬಳಿಯ ಡಂಪಿಂಗ್ ಯಾರ್ಡ್‌ಗೆ ಭೀಮಸಮುದ್ರ ಭಾಗದಿಂದ ರೈಲಿನ ಮೂಲಕ ಕಬ್ಬಿಣದ ಅದಿರು ಬರುತ್ತಿದ್ದು, ಅಲ್ಲಿಂದ ಹೆಗ್ಗೆರೆ ಗೇಟ್ ಬಳಿಯ ಕಾರ್ಖಾನೆಗೆ ಸಾಗಿಸಲು ಪ್ರತಿದಿನ ನೂರಾರು ಟಿಪ್ಪರ್ ಲಾರಿಗಳು ಸಂಚರಿಸುತ್ತಿವೆ ಎಂದು ಹೇಳಿದರು.
ಈ ವೇಳೆ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಅದಿರನ್ನು ಸಾಗಿಸಲಾಗುತ್ತಿದ್ದು, ಬೆಂಗಳೂರು ರಸ್ತೆ ಹಾಗೂ ಮದಕರಿನಗರ ಮಾರ್ಗ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಂಪು ಧೂಳು ಆವರಿಸುತ್ತಿದೆ ಎಂದು ಆರೋಪಿಸಿದರು.
ಈ ಧೂಳಿನಿಂದ ಸಾರ್ವಜನಿಕರಿಗೆ ಉಸಿರಾಟದ ತೊಂದರೆ ಸೇರಿದಂತೆ ಆರೋಗ್ಯ ಸಮಸ್ಯೆಗಳು ಉಂಟಾಗುವ ಭೀತಿ ಎದುರಾಗಿದೆ. ಕುಡಿಯುವ ನೀರು ಮಾಲಿನ್ಯಗೊಳ್ಳುವ ಸಾಧ್ಯತೆ ಇದ್ದು, ಕೃಷಿ ಜಮೀನುಗಳ ಬೆಳೆಗಳ ಮೇಲೂ ಗಣಿದೂಳು ಕುಳಿತು ಹಾನಿ ಉಂಟಾಗುತ್ತಿದೆ ಎಂದು ಹೇಳಿದರು.
ಭಾರೀ ವಾಹನ ಸಂಚಾರದಿಂದ ರಸ್ತೆಯಲ್ಲಿ ಗುಂಡಿಗಳು ಉಂಟಾಗಿ ರೈತರು ಮತ್ತು ಕಾರ್ಮಿಕರಿಗೆ ಸಂಚಾರ ಕಷ್ಟವಾಗುತ್ತಿದೆ. ರಸ್ತೆ ಬದಿಯ ಲಕ್ಷ್ಮೀ ಡಾಬಾ, ಗಂಧರ್ವ ರೆಸ್ಟೋರೆಂಟ್ ಸೇರಿದಂತೆ ವ್ಯಾಪಾರಸ್ಥರು ಧೂಳಿನ ಸಮಸ್ಯೆಯಿಂದ ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ರೈಲ್ವೆ ಸೇತುವೆ ಬಳಿ ರಸ್ತೆ ಕಿರಿದಾಗಿರುವುದರಿಂದ ವೇಗವಾಗಿ ಸಂಚರಿಸುವ ಲಾರಿಗಳು ಶಾಲೆ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಹೀಗಾಗಿ ಡಂಪಿಂಗ್ ಯಾರ್ಡ್‌ನಿಂದ ನೇರವಾಗಿ ಕಾರ್ಖಾನೆಗೆ ಸಾಗಣೆ ವ್ಯವಸ್ಥೆ ಕಲ್ಪಿಸಿ, ಧೂಳು ನಿಯಂತ್ರಣ ಹಾಗೂ ರಸ್ತೆ ದುರಸ್ತಿ ಕಾರ್ಯಗಳನ್ನು ತಕ್ಷಣ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಉಗ್ರ ಹೋರಾಟ ನಡೆಸುವುದಾಗಿ ಕರವೇ ಪ್ರವೀಣ್ ಶೆಟ್ಟಿ ಬಣ ಎಚ್ಚರಿಸಿದೆ.
ತಹಶೀಲ್ದಾರ್ ರೇಹಾನ್ ಪಾಷ ಅವರು ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲುಪಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಸಿ. ಭೋಜರಾಜ್, ಉಪಾಧ್ಯಕ್ಷ ಮರಿಕುಂಟೆ ಚಂದ್ರಣ್ಣ, ಪ್ರಧಾನ ಕಾರ್ಯದರ್ಶಿ ಪಿ. ಗಿರೀಶ್, ಯುವಘಟಕ ಅಧ್ಯಕ್ಷ ಮೋದಿನ್, ಸಂಘಟನಾ ಕಾರ್ಯದರ್ಶಿ ಶೇಖರ್, ಕಾರ್ಮಿಕ ಘಟಕದ ಅಧ್ಯಕ್ಷ ಈ. ಮಂಜುನಾಥ್, ಉಪಾಧ್ಯಕ್ಷ ತಿಪ್ಪೇಸ್ವಾಮಿ ಸೇರಿದಂತೆ ನಾಯಕನಹಟ್ಟಿ ಹೋಬಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading