*ಚಿತ್ರದುರ್ಗ* : ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ದೇಶಕ್ಕಾಗಿ ಬದುಕನ್ನೇ
ಅರ್ಪಿಸಿದ್ದ ಭೀಮಣ್ಣ ಖಂಡ್ರೆ, ಸ್ವತಂತ್ರ ಭಾರತದಲ್ಲೂ ಚಳವಳಿ ಮುಂದುವರಿಸಿದ
ಅಪರೂಪದ ಜನನಾಯಕ ಎಂದು ಮಾಜಿ ಸಚಿವ ಎಚ್.ಆಂಜನೇಯ ಬಣ್ಣಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಭೀಮಣ್ಣ
ಖಂಡ್ರೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ರಾಜ್ಯ, ದೇಶದಲ್ಲಿ
ಅನೇಕ ರಾಜಕಾರಣಿಗಳು ಆಡಳಿತ ನಡೆಸಿ ಕಣ್ಮರೆ ಆಗಿದ್ದಾರೆ. ಆದರೆ, ಭೀಮಣ್ಣ
ಖಂಡ್ರೆ ಅಗಲಿಕೆ ಬಳಿಕವೂ ಜೀವಂತವಾಗಿ ಉಳಿಯಲಿದ್ದಾರೆ ಎಂದರು.
ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಂತು ದೇಶಕ್ಕೆ ಸ್ವತಂತ್ರ
ತಂದುಕೊಡುವಲ್ಲಿ ಶ್ರಮಿಸಿದ ಖಂಡ್ರೆ ಅವರು, ಬ್ರಿಟಿಷರ ಮುಕ್ತ ಭಾರತದಲ್ಲಿನ
ಅಸಮಾನತೆ ವಿರುದ್ಧ ನಿರಂತರ ಹೋರಾಟ ನಡೆಸಿದ್ದು ಸ್ಮರಣೀಯ ಎಂದು
ತಿಳಿಸಿದರು.
ಹೈದರಬಾದ್ ಕರ್ನಾಟಕಕ್ಕೆ ಅನುದಾನ, ಅಭಿವೃದ್ಧಿ ವಿಷಯದಲ್ಲಿ ಆಗುತ್ತಿದ್ದ
ಅನ್ಯಾಯದ ವಿರುದ್ಧ ಸಿಡಿದೆದ್ದು ತನ್ನ ಜೀವ ಇರುವವರೆಗೂ ಹೋರಾಟ ನಡೆಸಿದ್ದು
ಮಾದರಿ. ಮೈಸೂರು ಭಾಗಕ್ಕೆ ಹೆಚ್ಚು ಅನುದಾನ, ಅಭಿವೃದ್ಧಿಗೆ ಮನ್ನಣೆ ನೀಡುವುದು, ಇತರೆ ಪ್ರದೇಶಗಳನ್ನು ಕಡೆಗಣಿಸುವುದನ್ನು ಖಂಡ್ರೆ ಸದಾ ವಿರೋಧಿಸುತ್ತಿದ್ದರು. ವಿಧಾನಸಭೆ ಅಧಿವೇಶನ ಹಾಗೂ ಹೊರಗಡೆ
ಧ್ವನಿಯೆತ್ತುವ ಮೂಲಕ ಪ್ರಾದೇಶಿಕ ತಾರತಮ್ಯ ಹೋಗಲಾಡಿಸಲು ಶ್ರಮಿಸಿದ
ರಾಜಕಾರಣಿ ಎಂದು ಹೇಳಿದರು.
ನಿಷ್ಠೂರ, ನೇರ ನಡೆ-ನುಡಿ ವ್ಯಕ್ತಿತ್ವ ಹೊಂದಿದ್ದ ಅವರು, ತಮ್ಮ ಸಮುದಾಯ, ಪ್ರದೇಶಕ್ಕೆ ಅನ್ಯಾಯ ಆಗುವುದನ್ನು ಸಹಿಸಿಕೊಳ್ಳುತ್ತಿರಲಿಲ್ಲ.
ಎಲ್.ಜಿ.ಹಾವನೂರು ವರದಿ ಜಾರಿಗೊಳಿಸಲು ದೇವರಾಜ ಅರಸು ಮುಂದಾಗುತ್ತಿದ್ದಂತೆ
ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಬೇಕೆಂದು ಪಟ್ಟುಹಿಡಿದಿದ್ದರು. ಅವಕಾಶ
ನೀಡದಿದ್ದ ಸಂದರ್ಭ ವರದಿ ಪ್ರತಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು ಎಂದರು.
ಪ್ರಜಾಪ್ರಭುತ್ವದಲ್ಲಿ ಯಾವುದೇ ವರದಿ, ಕಾನೂನು ಜಾರಿಗೊಳಿಸುವ ಮುನ್ನ
ಚರ್ಚೆ ನಡೆಸಬೇಕು. ಬಳಿಕ ಸಾಧಕ-ಬಾಧಕ ವಿಮರ್ಶೆ ನಂತರ ರಾಜ್ಯ, ಸಮುದಾಯಕ್ಕೆ ಉತ್ತಮವಾಗುವುದು ಖಚಿತಗೊಂಡಲ್ಲಿ ಅನುಷ್ಠಾನಗೊಳಿಸಬೇಕು.
ಆದರೆ, ಹಾವನೂರು ವರದಿ ಜಾರಿ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರ ಸರಿಯಲ್ಲ ಎಂದು ತಮ್ಮ ಸಿಟ್ಟನ್ನು ಮುಖ್ಯಮಂತ್ರಿ ವಿರುದ್ಧವೇ ಬಹಿರಂಗವಾಗಿ ಹೊರಹಾಕಿದ್ದರು ಎಂದು ತಿಳಿಸಿದರು.
ವೀರಶೈವ ಲಿಂಗಾಯಿತರು ಬಹುತೇಕ ಕೃಷಿ ನಂಬಿ ಬದುಕು ಕಟ್ಟಿಕೊಂಡಿದ್ದರು. ತಮ್ಮ ಬದುಕು, ಕಾಯಕದತ್ತವೇ ಚಿತ್ತ ಹರಿಸಿದ್ದರು. ಇಂತಹ
ಸಮುದಾಯದಲ್ಲಿ ಹೋರಾಟದ ಕಿಚ್ಚು, ಜಾಗೃತಿ ಮೂಡಿಸಿದ ಹೆಗ್ಗಳಿಕೆಗೆ ಖಂಡ್ರೆ ಅವರಿಗೆ ಸಲ್ಲುತ್ತದೆ ಎಂದರು.
ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಸಮುದಾಯದಲ್ಲಿ
ಜಾಗೃತಿ ಘಂಟೆ ಸದ್ದು ಮಾಡಿದ ಖಂಡ್ರೆ, ಶಿಕ್ಷಣ, ಉದ್ಯೋಗ ಸೇರಿ ವಿವಿಧ ರೀತಿ
ಮುಖ್ಯವಾಹಿನಿಗೆ ತರಲು, ಮೀಸಲು ಸೌಲಭ್ಯ ಕಲ್ಪಿಸಲು ಶ್ರಮಿಸಿದರು. ಅವರೊಬ್ಬ
ಅಪರೂಪದ, ಹೋರಾಟದ ರಾಜಕಾರಣಿ ಎಂದು ಬಣ್ಣಿಸಿದರು.
ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷರಾಗಿದ್ದರೂ ಎಲ್ಲ ವರ್ಗ-ಧರ್ಮದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು.ಯಾವುದೇ ಜಾತಿಗೆ ಅನ್ಯಾಯವಾದರೆ ಅದನ್ನು ತಕ್ಷಣವೇ ನೇರವಾಗಿ ಖಂಡಿಸಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದರು ಎಂದು
ತಿಳಿಸಿದರು.
ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಜೊತೆಗೆ ರಾಜ್ಯದಲ್ಲಿ ತನ್ನ ಬೆಂಬಲಿಗರನ್ನು ಮುಖ್ಯವಾಹಿನಿಗೆ ತರಲು ಆದ್ಯತೆ ನೀಡಿದ ಖಂಡ್ರೆ, ಅನೇಕರನ್ನು ರಾಜಕಾರಣದಲ್ಲಿ
ನೆಲೆಯೂರುವಂತೆ ಮಾಡಿದ್ದಾರೆ. ಅವರು ಅಗಲಿಕೆ ಪಕ್ಷ, ರಾಜ್ಯ,
ಸಮುದಾಯಕ್ಕೆ ತೀವ್ರ ನಷ್ಟವನ್ನುಂಟು ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, 103 ವರ್ಷಗಳ ಕಾಲ ಬದುಕಿದ ಭೀಮಣ್ಣ ಖಂಡ್ರೆ ಅವರ ಬದುಕು ನಮಗೆ ಮಾದರಿ ಆಗಬೇಕು. ಅವರಲ್ಲಿದ್ದ ಶಿಸ್ತು, ಬದ್ಧತೆ, ಪಕ್ಷನಿಷ್ಠೆ ನಾವೆಲ್ಲರೂ
ಮೈಗೂಡಿಸಿಕೊಳ್ಳಬೇಕು. ತಮ್ಮ ಪ್ರದೇಶ, ಸಾರ್ವಜನಿಕರಿಗೆ ಅನ್ಯಾಯ ಆಗುವುದರ ವಿರುದ್ಧ ಅವರ ಹೋರಾಟ ಮನೋಭಾವನೆ ಯುವಪೀಳಿಗೆ
ಪಾಲಿಸಬೇಕು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲಾಧ್ಯಕ್ಷ ಶಿವಣ್ಣ, ಜಿಪಂ ಮಾಜಿ ಸದಸ್ಯರಾದ ಬಿ.ಪಿ.ಪ್ರಕಾಶಮೂರ್ತಿ, ಆರತಿ ಮಹಡಿ ಮಾತನಾಡಿದರು.
ಮುಖಂಡರಾದ
ಆರ್.ನರಸಿಂಹರಾಜು, ಕುಮಾರಸ್ವಾಮಿ, ಡಿ.ಎನ್.ಮೈಲಾರಪ್ಪ,
ಕೆ.ಪಿ.ಸಂಪತ್‍ಕುಮಾರ್, ಮುನಿರಾ, ಆರ್.ಕೆ.ಸರ್ಧಾರ್, ಅನಿಲ್‍ಕೋಟಿ, ರವೀಂದ್ರ,
ತಿಪ್ಪೇಸ್ವಾಮಿ, ಚೇತನ್ ಇತರರಿದ್ದರು.
ಪೋಟೊ ಕ್ಯಾಪ್ಷನ್:ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭೀಮಣ್ಣ ಖಂಡ್ರೆ ಸಂತಾಪ
ಸಭೆಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಇತರರು.
About The Author
Discover more from JANADHWANI NEWS
Subscribe to get the latest posts sent to your email.