January 29, 2026
IMG-20251217-WA0223.jpg

ಚಳ್ಳಕೆರೆ ಸುದ್ದಿ :
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಶ್ರೀ ಶರಣ ಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವ ಹಾಗೂ ದಲಿತ ಸಮುದಾಯದ ಶ್ರೀ ದುರ್ಗಾಂಬಿಕ ದೇವಿಯ ದೀಪೋತ್ಸವ ಕಾರ್ಯಕ್ರಮಗಳು ಭಕ್ತಿ–ಭಾವದಿಂದ ಅದ್ದೂರಿಯಾಗಿ ನೆರವೇರಿದವು.

ಗ್ರಾಮೀಣ ಜಾನಪದ ಶೈಲಿಯ ತಮಟೆ, ನಗಾರಿ, ಉರುಮೆ, ನಂದಿಕೋಲು ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಶ್ರೀ ಶರಣ ಬಸವೇಶ್ವರ ಸ್ವಾಮಿಯ ತೇರು ಹೊರಟಿತು. ವಂಶಸ್ಥರ ಕುಟುಂಬದ ವತಿಯಿಂದ ಸಕಲ ವಿಧಿ–ವಿಧಾನಗಳೊಂದಿಗೆ ನಡೆದ ಮೀಸಲು ಪೂಜೆಯ ನಂತರ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಗ್ರಾಮದ ಮುಖಂಡರು ತೇರಿಗೆ ಚಾಲನೆ ನೀಡಿದರು.

ಬಣ್ಣ ಬಣ್ಣದ ಭಾವುಟಗಳು, ಹೂವಿನ ಹಾರಗಳಿಂದ ಅಲಂಕರಿಸಲ್ಪಟ್ಟ ತೇರು ಗ್ರಾಮದ ಮುಖ್ಯ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಿ, ಪಾದಗಟ್ಟೆ ಸಮೀಪದ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ವೃತ್ತದ ಬಳಿ ಸೇರಿತು. ಈ ಸಂದರ್ಭದಲ್ಲಿ ಗ್ರಾಮದ ಪಾಲಯ್ಯನವರ ಪುತ್ರ ಶ್ರೀ ಅನಿಲ್ ಕುಮಾರ್ ಅವರು 9,500 ರೂ.ಗೆ ರಥದ ಮುಕ್ತಿ ಭಾವುಟವನ್ನು ಪಡೆದು ಶ್ರೀ ಶರಣ ಬಸವೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾದರು.

ಸಂಜೆಯ ವೇಳೆಗೆ ಡೊಳ್ಳು ಕುಣಿತ, ಕೀಲು ಕುದುರೆ ಸೇರಿದಂತೆ ವಿವಿಧ ನೃತ್ಯ ಪ್ರದರ್ಶನಗಳು ನಡೆದವು. ಭಕ್ತರು ಹೂವು, ಹಣ್ಣು, ಕಾಯಿ, ದವನ ಅರ್ಪಿಸಿ ತೇರಿಗೆ ಭಕ್ತಿ ಸಮರ್ಪಿಸಿದರು. ಮಂಗಳ ವಾದ್ಯಗಳೊಂದಿಗೆ ರಥೋತ್ಸವವು ಶ್ರೀ ಚೌಡೇಶ್ವರಿ ದೇವಿಯ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು.

ಇದೇ ವೇಳೆ ದಲಿತ ಸಮುದಾಯದ ಶ್ರೀ ದುರ್ಗಾಂಬಿಕ ದೇವಿಯ ದೇವಸ್ಥಾನದಲ್ಲಿ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು. ಹಿರಿಯರು, ಮಹಿಳೆಯರು, ಯುವಕರು, ಮಕ್ಕಳು ದೀಪ ಬೆಳಗುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ದೇವಿಯ ಪಾದ ಕಮಲಗಳಿಗೆ ಸಮರ್ಪಿಸಿ ದೇವಿಯ ಕೃಪೆಗೆ ಪಾತ್ರರಾದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮದ ಮುಖಂಡ ದೊಡ್ಡ ಓಬಯ್ಯ, ಪ್ರತಿವರ್ಷದಂತೆ ಈ ವರ್ಷವೂ ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಭಾಗವಹಿಸಿ ಕಾರ್ತಿಕೋತ್ಸವವನ್ನು ಯಶಸ್ವಿಗೊಳಿಸಿದ್ದಾರೆ. ಶ್ರೀ ಶರಣ ಬಸವೇಶ್ವರ ಸ್ವಾಮಿಯು ಗ್ರಾಮಸ್ಥರಿಗೆ ಆರೋಗ್ಯ, ಆಯುಷ್ಯ ನೀಡಲಿ, ಉತ್ತಮ ಮಳೆ–ಬೆಳೆ ಸಮೃದ್ಧಿಯಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಮಾಜಿ ಅಧ್ಯಕ್ಷರು, ಗ್ರಾಮದ ಮುಖಂಡರು, ರೈತರು, ಯುವಕರು ಹಾಗೂ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದು, ಎಲ್ಲರ ಸಹಕಾರದಿಂದ ರಥೋತ್ಸವ ಹಾಗೂ ದೀಪೋತ್ಸವ ಅತ್ಯಂತ ಯಶಸ್ವಿಯಾಗಿ ನೆರವೇರಿತು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading