ಹಿರಿಯೂರು :
ತಾಲ್ಲೂಕಿನ ರೈತರುಗಳು ಪಹಣಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು ತಾಲ್ಲೂಕು ಕಚೇರಿ, ಹಾಗೂ ಜಿಲ್ಲಾಕಚೇರಿಗೆ ಪಹಣಿ ತಿದ್ದುಪಡಿಗಾಗಿ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಪಹಣಿ ತಿದ್ದುಪಡಿ ಅಭಿಯಾನವನ್ನು ತಾಲ್ಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದೇವೆ ಎಂಬುದಾಗಿ ಉಪವಿಭಾಗಾಧಿಕಾರಿಗಳಾದ ಮಹಮದ್ ಜಿಲಾನ್ ಖುರೇಷಿ ಹೇಳಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಚಿತ್ರದುರ್ಗ, ಕಂದಾಯ ಇಲಾಖೆ, ಹಾಗೂ ತಾಲ್ಲೂಕು ಆಡಳಿತದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ “ಪಹಣಿ ತಿದ್ದುಪಡಿ ಅಭಿಯಾನ” ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಪಹಣಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ರೈತರಿಗೂ ತಾಲ್ಲೂಕು ಕಚೇರಿಯಲ್ಲಿ ಪಹಣಿ ತಿದ್ದುಪಡಿ ಮಾಡಲಾಗುತ್ತಿದ್ದು, ಈಗಾಗಲೇ ಸುಮಾರು 350 ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ, ಇನ್ನೂ ಬಾಕಿ ಉಳಿದಿರುವ ಅರ್ಜಿಗಳನ್ನು ಪ್ರತಿವಾರ ನಾವೇ ಖುದ್ದಾಗಿ ಬಂದು ನಿಮ್ಮ ಅಹವಾಲುಗಳನ್ನು ಸ್ವೀಕರಿಸಿ, ಸರಿಪಡಿಸುತ್ತೇವೆ ಎಂದರಲ್ಲದೆ,
ಈ ಅಭಿಯಾನ ಒಂದು ತಿಂಗಳುಗಳ ಕಾಲ ನಡೆಯಲಿದ್ದು, ಪ್ರತಿವಾರ ನಾವು ತಾಲ್ಲೂಕು ಕಚೇರಿಗೆ ಭೇಟಿ ನೀಡಿ, ಸ್ಥಳದಲ್ಲಿಯೇ ನಿಮ್ಮ ಪಹಣಿಯನ್ನು ತಿದ್ದುಪಡಿ ಮಾಡುತ್ತೇವೆ, ಈ ಪಹಣಿ ತಿದ್ದುಪಡಿಯ ಅಭಿಯಾನದ ಬಗ್ಗೆ ನಿಮ್ಮ ಸುತ್ತಮುತ್ತಿಲಿನ ಜನರಿಗೆ ಹಾಗೂ ರೈತರಿಗೆ ಮಾಹಿತಿ ನೀಡಿ, ಅವರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತಾಗಲಿ ಎಂಬುದಾಗಿ ಕರೆ ನೀಡಿದರು.
ತಾಲ್ಲೂಕು ತಹಶೀಲ್ದಾರರಾದ ಸಿದ್ದೇಶ್ ಮಾತನಾಡಿ, ತಾಲ್ಲೂಕಿನ ರೈತರು ತಮ್ಮ ಜಮೀನುಗಳ ಪಹಣಿಯಲ್ಲಿನ ಸಣ್ಣಸಣ್ಣ ತಿದ್ದುಪಡಿಗಳಿಗಾಗಿ ಕಚೇರಿಗೆ ಅಲೆಯುವುದು, ಅಥವಾ ಯಾರೋ ಅನ್ಯವ್ಯಕ್ತಿಗಳಿಗೆ ಹಾಗೂ ಏಜೆಂಟರುಗಳಿಗೆ ಹಣಕೊಟ್ಟು ಮೋಸಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ನಮ್ಮ ತಾಲ್ಲೂಕು ಕಚೇರಿ ಆವರಣದಲ್ಲಿಯೇ “ಪಹಣಿ ತಿದ್ದುಪಡಿ ಅಭಿಯಾನ”ವನ್ನು ಹಮ್ಮಿಕೊಳ್ಳಲಾಗಿದೆ ಎಂದರಲ್ಲದೆ,
ತಾಲ್ಲೂಕಿನ ರೈತರು ನೇರವಾಗಿ ತಾಲ್ಲೂಕು ಕಚೇರಿಗೆ ಬಂದು ಅರ್ಜಿ ಸಲ್ಲಿಸುವ ಮೂಲಕ ಪಹಣಿಯಲ್ಲಿ ಹೆಸರು ತಿದ್ದುಪಡಿ, ಪಹಣಿ ತಿದ್ದುಪಡಿ, ಹಿಸ್ಸಾ ತಿದ್ದುಪಡಿ, ಆಕಾರ್ ಬಂದ್ ತಿದ್ದುಪಡಿ, ವಿಸ್ತೀರ್ಣ ವ್ಯತ್ಯಾಸ ತಿದ್ದುಪಡಿ, ಕೋಂ/ಬಿನ್ ತಿದ್ದುಪಡಿ ಸೇರಿದಂತೆ 7 ವಿವಿಧ ತಿದ್ದುಪಡಿಗಳನ್ನು ಮಾಡಿಕೊಳ್ಳುವ ಅವಕಾಶವಿದ್ದು, ಇದರ ಸದುಪಯೋಗವನ್ನು ತಾಲ್ಲೂಕಿನ ಜನತೆ ಪಡೆದುಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ತಿಪ್ಪೇಸ್ವಾಮಿ, ಎ.ಡಿ.ಎಲ್.ಆರ್.ನರಸಿಂಹಯ್ಯ, ಶಿರಸ್ತೇದಾರ್ ಹೇಮಂತ್ ಕುಮಾರ್, ತಾಲ್ಲೂಕು ಕಚೇರಿ ಚನ್ನಬಸವರಾಜ್, ಬಿ.ಜಿ.ಬಸವರಾಜ್, ಹಾಗೂ ವಿಲಾಸ್, ಶ್ರೀನಿವಾಸ್ ರೆಡ್ಡಿ ಸೇರಿದಂತೆ ತಾಲ್ಲೂಕು ಕಚೇರಿ ಸಿಬ್ಬಂದಿ ಹಾಗೂ ತಾಲ್ಲೂಕಿನ ವಿವಿಧ ಭಾಗಗಳಿಂದ ಅಭಿಯಾನ ಕಾರ್ಯಕ್ರಮಕ್ಕೆ ಆಗಮಿಸಿದ್ದ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.



About The Author
Discover more from JANADHWANI NEWS
Subscribe to get the latest posts sent to your email.