
ಚಿತ್ರದುರ್ಗಏ.17:
ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ರಸ್ತೆ ಸುರಕ್ಷತೆ ಹೆಚ್ಚಿಸಲು ವಿವಿಧ ಇಲಾಖೆಗಳು ಕೈಜೋಡಿಸುವ ಮೂಲಕ ಅಪಘಾತ ನಿಯಂತ್ರಣಕ್ಕೆ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿಗಳಲ್ಲಿ ಈ ಹಿಂದೆ ಕಪ್ಪುಚುಕ್ಕೆ ವಲಯಗಳನ್ನು ಗುರುತಿಸಿ, ಅಪಘಾತ ತಡೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆಗಳನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಇಳಿಕೆಗೆ ಕೈಗೊಂಡಿರುವ ಕ್ರಮಗಳೇನು? ರಸ್ತೆ ಸುರಕ್ಷತೆಗಾಗಿ ಕ್ರಮ ಕೈಗೊಂಡಿದ್ದಲ್ಲಿ ಅಪಘಾತಗಳ ಸಂಖ್ಯೆ ಇಳಿಕೆಯಾಗಿದೆಯೇ, ಇಲ್ಲವೇ ಎಂಬುವುದರ ಕುರಿತು ವಿಶ್ಲೇಷಣಾ ವರದಿ ಸಲ್ಲಿಸಬೇಕು ಎಂದು ತಿಳಿಸಿದ ಅವರು, ಈಗಾಗಲೇ ಹಂಪ್ಸ್, ರಂಬಲ್ಸ್, ಸೂಚನಾ ಫಲಕಗಳನ್ನು ಹಾಕಿರುವ ಕಡೆ ಅಪಘಾತಗಳ ಸಂಖ್ಯೆ ಇಳಿಕೆ ಆಗಿದೆಯೇ ಎಂಬ ಕುರಿತು ವಿಶ್ಲೇಷಣಾತ್ಮಕ ವರದಿ ನೀಡಬೇಕು ಎಂದು ತಿಳಿಸಿದರು.
ಚಳ್ಳಕೆರೆ ಗೇಟ್ ಬಸ್ ತಂಗುದಾಣ ನಿರ್ಮಾಣಕ್ಕೆ ತಕ್ಷಣ ಕ್ರಮವಹಿಸಿ:
ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿಯ ಬಸ್ ತಂಗುದಾಣ ನಿರ್ಮಾಣಕ್ಕೆ ತಕ್ಷಣ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು. ಬಸ್ ತಂಗುದಾಣ ನಿರ್ಮಾಣಕ್ಕೆ ಎನ್‍ಒಸಿ ನೀಡಿ, ಆರು ತಿಂಗಳಾದರೂ ಕಾಮಗಾರಿ ಪ್ರಾರಂಭ ಮಾಡದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು. ಚಳ್ಳಕೆರೆ ಗೇಟ್ ಬಳಿ ಹೊಸ ಮಾದರಿಯಲ್ಲಿ ತಂಗುದಾಣ ನಿರ್ಮಿಸಲು ಶಾಸಕರು ಅನುದಾನ ಒದಗಿಸಿದ್ದು, ಕೆಆರ್‍ಐಡಿಎಲ್‍ನಿಂದ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಕೂಡಲೇ ಕಾಮಗಾರಿ ಆರಂಭಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಚಳ್ಳಕೆರೆ ಗೇಟ್‍ನಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಮಾಡಬೇಕಿದೆ. ಚಳ್ಳಕೆರೆ ಗೇಟ್ ಬಳಿಯ ಅಂಡರ್‍ಪಾಸ್ ಕೆಳಗಡೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು, ನಿಲ್ಲಿಸುವವರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಸುಗಮ ಸಂಚಾರಕ್ಕೆ ಕ್ರಮ ವಹಿಸಬೇಕು. ಈ ಭಾಗದ ನಾಲ್ಕು ಕಡೆಯೂ ಫುಟ್‍ಪಾತ್ ಅತಿಕ್ರಮಣ ತೆರವುಗೊಳಿಸಿ ವಾಹನಗಳ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜೆಎಂಐಟಿ ಬಳಿ ಸ್ಕೈವಾಕ್:
*ನಗರದ ಜೆಎಂಐಟಿ ಬಳಿ ವಿದ್ಯಾರ್ಥಿಗಳು ಹೆದ್ದಾರಿ ಇಕ್ಕೆಲಗಳ ಮೆಶ್ ಅನ್ನು ಡ್ಯಾಮೇಜ್ ಮಾಡಿ, ಆ ಮೂಲಕ ರಸ್ತೆ ದಾಟಿ ಓಡಾಡುತ್ತಿದ್ದಾರೆ. ಹಲವು ಬಾರಿ ಇಲ್ಲಿ ಅಪಘಾತಗಳಾಗುತ್ತಿವೆ. ಹಾಗಾಗಿ ಇಲ್ಲಿ ಸ್ಕೈವಾಕ್ ಅಗತ್ಯವಿದ್ದು, ಸ್ಕೈವಾಕ್‍ಗೆ ಅನುಮತಿ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಂದ್ರಪ್ಪ ಸಭೆಗೆ ಮಾಹಿತಿ ನೀಡಿದರು. ಜೆಎಂಐಟಿ ಬಳಿ ಸ್ಕೈವಾಕ್ ಅಗತ್ಯವಿದ್ದು, ಈ ತಿಂಗಳಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಸಿ, ಕಾಮಗಾರಿ ಪ್ರಾರಂಭ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೆಳಗೋಟೆಯ ರಾಷ್ಟ್ರೀಯ ಹೆದ್ದಾರಿ ಬಳಿ ವೇಗ ಕಡಿತಗೊಳಿಸಲು ರಂಬಲ್ ಸ್ಟ್ರಿಪ್ಸ್, ಬ್ಲಿಂಕರ್ಸ್, ಲೈಟಿಂಗ್ ವ್ಯವಸ್ಥೆ ಮಾಡಬೇಕು. ಗಾಂಧಿ ವೃತ್ತದಿಂದ ಕೆಎಸ್‍ಆರ್‍ಟಿಸಿ ಮಾರ್ಗದ ರಸ್ತೆಯಲ್ಲಿ ಡಿವೈಡರ್ ತೆರವುಗೊಳಿಸಿದ ಬಳಿಕ ರಸ್ತೆಯನ್ನು ಸರಿಯಾದ ರೀತಿಯಲ್ಲಿ ದುರಸ್ತಿ ಮಾಡಿಲ್ಲ, ಕಬ್ಬಿಣದ ಸರಳುಗಳು ರಸ್ತೆಯ ಮೇಲೆಯೇ ಕಾಣುತ್ತಿದ್ದು, ಅಪಾಯಕಾರಿಯಾಗಿವೆ, ರಸ್ತೆ ಒಂದು ಕಡೆ ಎತ್ತರ, ಇನ್ನೊಂದೆಡೆ ತಗ್ಗಾಗಿದ್ದು, ವಾಹನ ಚಾಲನೆಗೆ ತೊಂದರೆಯಾಗಿ ಅಪಘಾತವಾಗುವ ಸಂಭವವಿದೆ. ಕೂಡಲೆ ನಗರದಲ್ಲಿ ಎಲ್ಲೆಲ್ಲಿ ಡಿವೈಡರ್‍ಗಳನ್ನು ತೆರವುಗೊಳಿಸಲಾಗಿದೆಯೇ ಅಲ್ಲಿ, ರಸ್ತೆ ಹಾಗೂ ಡಿವೈಡರ್ ಸರಿಪಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ನಗರದಲ್ಲಿ 27 ಕಡೆ ಆಟೋ ಪಾರ್ಕಿಂಗ್:
***ಚಿತ್ರದುರ್ಗ ನಗರಸಭೆ ವತಿಯಿಂದ ನಗರದಲ್ಲಿ 27 ಕಡೆ ಆಟೋ ಪಾರ್ಕಿಂಗ್‍ಗಾಗಿ ಜಾಗ ಗುರುತಿಸಲಾಗಿದ್ದು, ಈಗಾಗಲೇ 12 ಆಟೋ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಇನ್ನೂ 15 ಆಟೋ ಪಾರ್ಕಿಂಗ್ ಬಾಕಿ ಇದೆ ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದರು. ಚಿತ್ರದುರ್ಗ ನಗರದ ಗಾಂಧಿ ವೃತ್ತದಿಂದ ಪ್ರವಾಸಿ ಮಂದಿರ ಮಾರ್ಗದ ರಸ್ತೆಯ ಪಕ್ಕದಲ್ಲಿ ಆಟೋಗಳನ್ನು ಸಾಲಾಗಿ ನಿಲ್ಲಿಸುತ್ತಿದ್ದಾರೆ. ನಿಯಮಿತವಾಗಿ ತಪಾಸಣೆ ನಡೆಸಿ, ಆಟೋಗಳನ್ನು ನಿಲ್ಲಿಸದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸಂಚಾರಿ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಗೂಡಂಗಡಿಗಳ ತೆರವುಗೊಳಿಸಲು ಸೂಚನೆ:
*ಹಿರಿಯೂರು ನಗರದ ಒಳ ಬರುವ ಹಾಗೂ ಹೊರ ಬರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ಮಾರ್ಗ ಮಧ್ಯದಲ್ಲಿ ಬೃಹತ್ ವಾಹನಗಳು, ಲಾರಿಗಳು ಪಾರ್ಕಿಂಗ್ ಮಾಡುತ್ತಿದ್ದು, ಇದು ಅಪಾಯಕಾರಿ ವಲಯ ಆಗಿ ಮಾರ್ಪಟ್ಟಿದೆ. ಇಲ್ಲಿ ನಿಲ್ಲಿಸುವ ಲಾರಿಗಳಿಗೆ ದಂಡ ವಿಧಿಸಬೇಕು, ಇಲ್ಲಿ ಗೂಡಂಗಡಿಗಳ ಹಾವಳಿ ಹೆಚ್ಚಾಗಿದ್ದು, ಈ ಅಂಗಡಿಗಳು ಇರುವ ಭೂಮಿ ಕೃಷಿಯೇತರಕ್ಕೆ ಪರಿವರ್ತನೆ ಆಗಿಲ್ಲ, ಇಲ್ಲಿನ ಎಲ್ಲ ಅಂಗಡಿಗಳು ಅನಧಿಕೃತವಾಗಿದ್ದು, ನೋಟಿಸ್ ನೀಡಿ ಕೂಡಲೆ ತೆರವುಗೊಳಿಸಬೇಕು, ಹಾಗೂ ಇಲ್ಲಿನ ಅಂಗಡಿಗಳಿಗೆ ವಿದ್ಯುತ್ ಸಂಪರ್ಕವನ್ನು ತ್ವರಿತವಾಗಿ ಕಡಿತಗೊಳಿಸಬೇಕು ಎಂದು ಹಿರಿಯೂರು ಪೌರಾಯುಕ್ತ ವಾಸೀಂ ಅವರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು. ಟ್ರಕ್ ಟರ್ಮಿನಲ್‍ಗೆ ಈಗಾಗಲೇ ಎರಡು ಕಡೆಗಳಲ್ಲಿ ಜಾಗ ಗುರುತಿಸಲಾಗಿದೆ. 15 ದಿನಗಳೊಳಗಾಗಿ ಹಿರಿಯೂರು ನಗರ ವ್ಯಾಪ್ತಿಯಲ್ಲಿ ಸಂಚಾರಿ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮವಹಿಸಲಾಗುವುದು ಎಂದು ಹಿರಿಯೂರು ನಗರಸಭೆ ಪೌರಾಯುಕ್ತ ವಾಸೀಂ ತಿಳಿಸಿದರು. ಅಪಘಾತ ವಲಯ ಹಾಗೂ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ರಸ್ತೆಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಹಾಗೂ ಜಂಕ್ಷನ್ ರಸ್ತೆಗಳಲ್ಲಿ ಕ್ಯಾಟ್‍ಐಸ್ ಅಳವಡಿಕೆ, ಬ್ಲಿಂಕರ್ಸ್, ರಂಬಲ್ ಸ್ಟ್ರಿಪ್ಸ್, ಸೂಚನಾ ಫಲಕಗಳ ಅಳವಡಿಕೆ ಸೇರಿದಂತೆ ಅಗತ್ಯ ರಸ್ತೆ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡಲೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ : ನಗರದ ಮುರುಘಾಮಠದಿಂದ ಕವಾಡಿಗರ ಹಟ್ಟಿ ಮಾರ್ಗ ಮೂಲಕ ಹೊಳಲ್ಕೆರೆ ರಸ್ತೆಗೆ ಸಂಪರ್ಕಿಸುವ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸುವ ಕಾಮಗಾರಿ ಹಲವು ವರ್ಷಗಳಿಂದಲೂ ನಡೆಯುತ್ತಲೇ ಇದೆ. ಈ ಮಾರ್ಗದಲ್ಲಿ ಕವಾಡಿಗರ ಹಟ್ಟಿ ಬಳಿ, ಹಾಗೂ ಮುಂದಿನ ದಾರಿಯಲ್ಲಿ ರಸ್ತೆ ಗುಂಡಿ ಬಿದ್ದು ವಾಹನಗಳು ಅಪಘಾತಕ್ಕೆ ಒಳಗಾಗುತ್ತಿವೆ. ರಸ್ತೆ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ ಎಂದು ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಉತ್ತರಿಸಿ, ಮಹಾರಾಷ್ಟ್ರಾದ ಎಸ್.ಎಂ. ಔತಾಡೆ ಎಂಬುವವರು ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳದೆ, ಅಸಡ್ಡೆ ತೋರುತ್ತಿದ್ದಾರೆ, ಹಲವು ಬಾರಿ ನೋಟಿಸ್ ನೀಡಿದರೂ ಉಪಯೋಗವಾಗಿಲ್ಲ ಎಂದರು. ಕೂಡಲೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಿ, ಉಳಿದ ಕಾಮಗಾರಿಯನ್ನು ಬೇರೆಯವರಿಗೆ ವಹಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಅಪ್ರಾಪ್ತರು ಟ್ರ್ಯಾಕ್ಟರ್ ಚಾಲನೆ ಮಾಡುವುದನ್ನು ತಪ್ಪಿಸಿ :
* ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ಅವರು ಮಾತನಾಡಿ, ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಟ್ರ್ಯಾಲಿಗಳಿಗೆ, ಎತ್ತಿನಗಾಡಿಗಳಿಗೆ ರಿಫ್ಲೆಕ್ಟರ್ ಇಲ್ಲದ ಕಾರಣ ಪ್ರಮುಖ ರಸ್ತೆಗಳಲ್ಲಿ ರಾತ್ರಿ ವೇಳೆ ಅಪಘಾತಗಳು ಸಂಭವಿಸುತ್ತಿವೆ. ಆರ್‍ಟಿಒ ಅಧಿಕಾರಿಗಳು ಈ ಬಗ್ಗೆ ರಸ್ತೆಗಳಲ್ಲಿ ತಪಾಸಣೆ ನಡೆಸಿ, ಟ್ರ್ಯಾಕ್ಟರ್ ಟ್ರ್ಯಾಲಿ ಹಾಗೂ ಎತ್ತಿನ ಗಾಡಿಗಳಿಗೆ ರಿಫ್ಲೆಕ್ಟರ್ ಸ್ಟಿಕರ್‍ಗಳನ್ನು ಅಳವಡಿಸುವ ಕಾರ್ಯ ಆಗಬೇಕು. ಜಿಲ್ಲೆಯಲ್ಲಿ ಅಪ್ರಾಪ್ತ ಹುಡುಗರು, ವಾಹನ ಚಾಲನೆ ಪರವಾನಗಿ ಇಲ್ಲದವರು ಕೂಡ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿರುವುದು ಕಂಡುಬರುತ್ತಿದ್ದು, ಈ ಬಗ್ಗೆ ಪೊಲೀಸರು ಹಾಗೂ ಆರ್‍ಟಿಒ ಅಧಿಕಾರಿಗಳು ನಿಗಾ ವಹಿಸಿ, ತಪ್ಪಿತಸ್ಥರ ಮೇಲೆ ದಂಡ ಹಾಗೂ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಂದ್ರಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಿ.ಪಿ. ರೇಣುಪ್ರಸಾದ್ ಸೇರಿದಂತೆ ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

About The Author
Discover more from JANADHWANI NEWS
Subscribe to get the latest posts sent to your email.