ಹೊಸದುರ್ಗ: ಗುಂಡಪ್ಪನವರು ಕೈಯಾಡಿಸಿದ ವಿಷಯಗಳೇ ಇಲ್ಲ. ಪತ್ರಕರ್ತರಾಗಿ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳ ಲೋಪ- ದೋಷಗಳನ್ನು ಎತ್ತಿ ತೋರಿಸಿ ಅನುಪಮ ಸೇವೆ ಸಲ್ಲಿಸಿದ್ದಾರೆ ಎಂದು ಹಿರಿಯ ಪತ್ರಕರ್ತ ಮತ್ತು ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ನಾಗತಿಹಳ್ಳಿ ಮಂಜುನಾಥ್ ಅಭಿಮತ.






ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಡಿವಿಜಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿ ಹಿಡಿದು ನಾಗರಿಕನ ಕರ್ತವ್ಯ ಏನು? ಹಕ್ಕು-ಬಾಧ್ಯತೆಗಳನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಪತ್ರಕರ್ತರ ಸಂಘವನ್ನು ಸ್ಥಾಪಿಸುವ ಮೂಲಕ ಪತ್ರಕರ್ತರ ಸಂಘಟನೆ ಹಾಗೂ ಅಭ್ಯುದಯಕ್ಕೆ ಶ್ರಮಿಸಿದ್ದರು ಎಂದು ಸ್ಮರಿಸಿಕೊಂಡರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಆರ್. ಶಾಂತಪ್ಪ ಮಾತನಾಡಿ, ಗುಂಡಪ್ಪನವರು ಒಬ್ಬ ಸಾಹಿತಿಯಾಗಿ ಮಾತ್ರವಲ್ಲದೆ, ತತ್ವಜ್ಞಾನಿಯಾಗಿ ಮಂಕುತಿಮ್ಮನ ಕಗ್ಗ ಕೃತಿ ಬರೆದಿದ್ದಾರೆ. ಇದು ಜನಸಾಮಾನ್ಯರ ಬದುಕಿನಲ್ಲಿ ‘ಕನ್ನಡದ ಭಗವದ್ಗೀತೆ’ ಎಂದೇ ಹೆಸರಾಗಿದ್ದು, ತನ್ನ ಆಂತರ್ಯದಲ್ಲಿ ಸಾರ್ವಕಾಲಿಕ ಸತ್ಯವನ್ನು ಹಾಗೂ ಸರ್ವಾಂಗೀಣ ಸತ್ವವನ್ನು ಗರ್ಭಿಕರಿಸಿಕೊಂಡು, ಮಾನ್ಯರಿಂದ ಸಾಮಾನ್ಯರೆಲ್ಲರ ಕೈ ದೀವಿಗೆಯಾಗಿ ಅಪಾರ ಸತ್ಪರಿಣಾಮವನ್ನುಂಟು ಮಾಡುತ್ತಿರುವ ಕೃತಿಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಓಂಕಾರಪ್ಪ ಮಾತನಾಡಿ, ಆಧುನಿಕ ಕನ್ನಡದ ಸರ್ವಜ್ಞ ಎಂಬ ಹೆಸರಾಗಿರುವ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕನ್ನಡ ಸಾರಸ್ವತ ಲೋಕದ ಮೇರು ಸಾಹಿತಿಯಾಗಿ ಪತ್ರಕರ್ತರನ್ನು ಒಗ್ಗೂಡಿಸಲು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವನ್ನು ಸ್ಥಾಪಿಸಿದ ಕೀರ್ತಿ ಪಡೆದಿದ್ದಾರೆ. ಇವರ ಬದುಕು-ಬರಹ ಪತ್ರಕರ್ತರಿಗೆ ಮಾದರಿಯಾಗಲಿ ಎಂದು ಹೇಳಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಮಾನಸ ತುಂಬಿನಕೆರೆ ಬಸವರಾಜ್ ಮಾತನಾಡಿ, 95 ವರ್ಷಗಳ ಹಿಂದೆ ಪತ್ರಕರ್ತರ ಹಿತರಕ್ಷಣೆಗಾಗಿ ಡಿವಿಜಿಯವರು ಸಂಘಟನೆಯನ್ನು ಕಟ್ಟಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇಂದು ಹೆಮ್ಮರವಾಗಿ ಬೆಳೆದಿದೆ. ಡಿವಿಜಿಯವರಲ್ಲಿ ದೂರದೃಷ್ಟಿ ಬಹಳ ಮುಖ್ಯವಾಗಿತ್ತು ಎಂದು ಬಣ್ಣಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಮಹೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಲಕ್ಕಿಹಳ್ಳಿ ಸಿದ್ಧೇಶ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ತುಂಬಿನಕೆರೆ ಬಸವರಾಜ್, ತಾಲೂಕು ಕ.ಸಾ.ಪ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಮತ್ತು ಚಂದ್ರು, ಕಾರ್ಯಾಧ್ಯಕ್ಷ ರಾಮಚಂದ್ರಪ್ಪ, ಖಜಾಂಚಿ ಶಿವಣ್ಣ ಮತ್ತು ಪತ್ರಕರ್ತರ ಸಂಘದ ಸಂತೋಷ್ ಸೇರಿದಂತೆ ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.