ಚಿತ್ರದುರ್ಗ ಮಾ.17:
ಸಮಾಜದಲ್ಲಿ ಲಿಂಗ ಸಮಾನತೆ ಕಾಯ್ದುಕೊಳ್ಳುವ ಮೂಲಕ ಮಹಿಳೆಯರಿಗೆ ಗೌರವ ಮತ್ತು ಸಮಾನ ಅವಕಾಶ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ವಿಜಯ್ ಹೇಳಿದರು.
ನಗರದ ಜಿಲ್ಲಾ ಬಾಲ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ “ಗಳಿಸಲು ಅವಕಾಶ ಕೋಡಿ” ಎಂಬ ಘೋಷವಾಕ್ಯದಡಿ ಹಮ್ಮಿಕೊಂಡಿದ್ದ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಸಮಾಜದಲ್ಲಿ ಕೇವಲ ಗೌರವ ನೀಡುವುದಷ್ಟೇ ಅಲ್ಲದೆ, ಅವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ಕಲ್ಪಿಸಿಕೊಡಬೇಕು. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮುಂದೆ ಬರಲು ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸಬೇಕು. ಉದ್ಯಮಶೀಲತೆ ಸೇರಿದಂತೆ ಎಲ್ಲಾ ವೃತ್ತಿಗಳಲ್ಲಿ ಪುರುಷರಿಗೆ ಸಮಾನವಾಗಿ ಗುರುತಿಸಿಕೊಳ್ಳುವಂತಾಗಬೇಕು. ಲಿಂಗದ ಆಧಾರದ ಮೇಲೆ ನಡೆಯುವ ತಾರತಮ್ಯ ಸಂಪೂರ್ಣವಾಗಿ ನಿಲ್ಲಿಸಬೇಕು. “ಗಳಿಸಲು ಅವಕಾಶ ಕೋಡಿ” ಎಂಬ ಘೋಷವಾಕ್ಯದಡಿ ಮಹಿಳೆಯರಿಗೆ ಬೆಂಬಲ ನೀಡಿದಾಗ ಅವರು ಉನ್ನತ ಮಟ್ಟಕ್ಕೇರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಉನ್ನತ ಶಿಕ್ಷಣದ ಫಲಿತಾಂಶಗಳಲ್ಲಿ ಹೆಣ್ಣುಮಕ್ಕಳು ಪುರುಷರಿಗಿಂತ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ರಾಜಕೀಯದಲ್ಲಿ ಮೀಸಲಾತಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಮತ್ತು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸುವ ದಿನಗಳು ದೂರವಿಲ್ಲ ಎಂದರು.
ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತರು ಮತ್ತು ಶಿಕ್ಷಕರು ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕು. ಬಾಲ್ಯವಿವಾಹದಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗುತ್ತವೆ. ಮುಖ್ಯವಾಗಿ ಅಪೌಷ್ಟಿಕತೆ ಮತ್ತು ಅಂಗವೈಕಲ್ಯದಂತಹ ಸಮಸ್ಯೆಗಳು ಕಾಡುತ್ತವೆ. ಬಾಲ್ಯವಿವಾಹದ ಬಗ್ಗೆ ಮಾಹಿತಿ ದೊರೆತರೆ ತಕ್ಷಣವೇ 1098 ಸಹಾಯವಾಣಿಗೆ ಕರೆ ಮಾಡುವ ಮೂಲಕ ಬಾಲ್ಯ ವಿವಾಹ ತಡೆದು ಮಗುವಿನ ಶಿಕ್ಷಣಕ್ಕೆ ಒತ್ತು ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ್ ತಿಳಿಸಿದರು.
ಮಕ್ಕಳನ್ನು ಬೆಳೆಸುವಲ್ಲಿ ತಾಯಿಯ ಪಾತ್ರ ಅತಿ ಮುಖ್ಯವಾದುದು. ಕೇವಲ ಅಂಗನವಾಡಿ ಅಥವಾ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿದರೆ ಜವಾಬ್ದಾರಿ ಮುಗಿಯುವುದಿಲ್ಲ. ಮಕ್ಕಳ ಶಿಕ್ಷಣ ಮತ್ತು ನಡವಳಿಕೆಯಲ್ಲಿ ತಾಯಿಯ ನಿರಂತರ ಗಮನವಿರಬೇಕು. ಮನೆಯ ಪ್ರತಿಯೊಂದು ಸಣ್ಣ ಕೆಲಸದಲ್ಲಿಯೂ ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ಅವರಿಗೆ ಜೀವನದ ಮೌಲ್ಯಗಳನ್ನು ಕಲಿಸಬೇಕು. ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಕೆಲಸದ ಒತ್ತಡದಿಂದಾಗಿ ಮಕ್ಕಳಿಗೆ ಮೊಬೈಲ್ ನೀಡಿ ಸುಮ್ಮನಿರಿಸುವ ಪ್ರವೃತ್ತಿ ಹೆಚ್ಚಾಗಿದೆ ಎಂದರು.
ಪ್ರಸೂತಿ, ಸ್ತ್ರೀರೋಗ ಮತ್ತು ಬಂಜೆತನ ನಿವಾರಣಾ ತಜ್ಞರಾದ ಡಾ.ಜ್ಯೋತಿ ಶರತ್ ಕುಮಾರ್ ಉಪನ್ಯಾಸ ನೀಡಿ, ಮಕ್ಕಳು ಅಂಗನವಾಡಿಯಿಂದ ಬಂದ ನಂತರ ಅವರೊಂದಿಗೆ ಸಂವಹನ ನಡೆಸುವ ಬದಲು ಅವರಿಗೆ ಟಿವಿ ಅಥವಾ ಮೊಬೈಲ್ ಗಮನಿಸಲು ಅವಕಾಶ ನೀಡುತ್ತಿರುವುದು ಮಕ್ಕಳ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಯಾವುದೇ ವ್ಯತ್ಯಾಸ ಮಾಡಬಾರದು. ಹೆಣ್ಣು ಮಗು ಮನೆಯ ಲಕ್ಷ್ಮಿ ಮತ್ತು ಪೋಷಕರ ಆಸರೆಯಾಗಿ ನಿಲ್ಲಬಲ್ಲಳು. ಗಂಡು ಮಕ್ಕಳಿಗೂ ಮನೆಯ ಕೆಲಸಗಳನ್ನು ಕಲಿಸುವ ಮೂಲಕ ಪೇರೆಂಟೆಡ್ ಕಿಡ್ಸ್ ಆಗಿ ಬೆಳೆಸಬೇಕು ಇದರಿಂದ ಮುಂದಿನ ದಿನಗಳಲ್ಲಿ ಕೌಟುಂಬಿಕ ಸಾಮರಸ್ಯ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಿ.ಮಂಜುನಾಥ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಔಟಲವೆಡ್ ಭಾರತ ಎನ್‍ಜಿಓ ಮಿಮಾನಸ ಸಿಂಗ್ ಹಾಗೂ ಗಾಯಿತ್ರಿ ಶಿವರಾಮ್ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಇದ್ದರು.
=========
About The Author
Discover more from JANADHWANI NEWS
Subscribe to get the latest posts sent to your email.