ಚಿತ್ರದುರ್ಗ ಮಾರ್ಚ್17:
ಲಸಿಕೆಗಳು ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸುತ್ತವೆ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು.
ನಗರದ ಸಂತ ಜೋಸೆಫೆರ ಕಾನ್ವೆಂಟ್ ಶಾಲೆಯಲ್ಲಿ ಸೋಮವಾರ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲಸಿಕಾ ದಿನದ ಅಂಗವಾಗಿ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ಮಗುವಿಗೆ ಲಸಿಕೆ ಹಾಕುವುದನ್ನು ಖಚಿತಪಡಿಸಿಕೊಳ್ಳಲು ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರ ಶ್ರಮವನ್ನು ಗುರುತಿಸಲು ಮತ್ತು ಪ್ರಶಂಸಿಸಲು ಭಾರತ ಸರ್ಕಾರವು ಮಾರ್ಚ್ 16 ಅನ್ನು ರಾಷ್ಟ್ರೀಯ ಲಸಿಕೆ ದಿನವನ್ನಾಗಿ ಆಚರಿಸುತ್ತದೆ. ತೀವ್ರವಾದ ವ್ಯಾಕ್ಸಿನೇಷನ್ ಡ್ರೈವ್‍ಗಳ ಮೂಲಕ ದಿನನಿತ್ಯದ ಪ್ರತಿರಕ್ಷಣೆಯನ್ನು ಹೆಚ್ಚಿಸುವಲ್ಲಿ ಭಾರತವು ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಹೇಳಿದರು.
ಲಸಿಕೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ದೇಶದಲ್ಲಿ ಮೊದಲ ಲಸಿಕೆ ದಿನಾಚರಣೆಯನ್ನು 1995ರ ಮಾರ್ಚ್ 16ರಂದು ಆಚರಣೆ ಮಾಡಲಾಯಿತು. ಅಂದು ದೇಶದಲ್ಲಿ ಪೋಲಿಯೊ ಹನಿ ಹಾಕುವ ‘ಪಲ್ಸ್ ಪೋಲಿಯೊ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಎರಡು ದಶಕಗಳ ಬಳಿಕ ದೇಶದಲ್ಲಿ ಕ್ರಮೇಣ ಪೋಲಿಯೊ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ, 2014ರಲ್ಲಿ ಭಾರತವನ್ನು ಪೋಲಿಯೊ ಮುಕ್ತ ಎಂದು ಘೋಷಿಸಲಾಯಿತು. ಮಕ್ಕಳಿಗೆ ಪೋಲಿಯೊ ಹನಿ ಜತೆಗೆ ಮಕ್ಕಳಿಗೆ ದಡಾರ, ಸಿಡುಬು, ಕ್ಷಯಗಳ ಲಸಿಕೆ ಹಾಕಿಸುವುದೂ ಮುಖ್ಯ. ಲಸಿಕೆ ದಿನದಂದು ಈ ಅಂಶಗಳ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ. ಸಕಾಲದಲ್ಲಿ ಲಸಿಕೆ ಹಾಕಿಸುವುದರಿಂದ ಪ್ರತಿ ವರ್ಷ ಲಕ್ಷಾಂತರ ಮಕ್ಕಳು ಸಾವಿನಿಂದ ಪಾರಾಗುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪೋಷಣ್ ಅಭಿಯಾನ ವ್ಯವಸ್ತಾಪಕ ಕರಕಪ್ಪ ಮೇಟಿ ಮಾತನಾಡಿ, ಬೇಸಿಗೆಯಲ್ಲಿ ಬದುಕುವ ರೀತಿ, ಶಾಖದ ಅಲೆಯಿಂದ ಯಾವರೀತಿ ಸಂರಕ್ಷಣೆ ಮಾಡಿಕೊಳ್ಳುವ ಬಗೆ ತಿಳಿಸಿದರು.
ತೆಳು ಕಾಟನ್ ಬಟ್ಟೆಗಳನ್ನು ಧರಿಸಬೇಕು. ಮಸಾಲೆ ಪದಾರ್ಥಗಳನ್ನು ಕರಿದ ತಿಂಡಿಗಳನ್ನು ತಿನ್ನಬಾರದು. ನಿರ್ಜಲೀಕರಣವಾಗದಂತೆ ಹೆಚ್ಚು ಹೆಚ್ಚು ನೀರು ಕುಡಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಾನಾಯ್ಕ್, ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್ , ಶಾಲೆಯ ಮುಖ್ಯ ಶಿಕ್ಷಕಿ ಇರುದ್ಯಾ ರಾಣಿ, ಸಹ ಶಿಕ್ಷಕರಾದ ಸುಶೀಲಾ, ಮೇರಿ, ರೀಟಾ, ದಾಕ್ಷಾಯಣಿ, ವಿಕ್ಟೋರಿಯಾ, ಕೆ.ಎಸ್.ಅಜ್ಜಯ್ಯ, ಶಿವಕುಮಾರ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ವಿಜಯಾಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ರೇಖಾ, ಆಶಾ ಕಾರ್ಯಕರ್ತೆ ಗೀತಾ ಇದ್ದರು. ಎಲ್ಲಾ ವಿದ್ಯಾರ್ಥಿಗಳಿಗೆ ಹಿಮೋಗ್ಲೋಬಿನ್ ಪರೀಕ್ಷೆ ನಡೆಸಲಾಯಿತು.
About The Author
Discover more from JANADHWANI NEWS
Subscribe to get the latest posts sent to your email.