ಚಿತ್ರದುರ್ಗ ಮಾರ್ಚ್16:
ಬಿಸಿಲ ಧಗೆಗೆ ಪ್ರಾಣಿ-ಪಕ್ಷಿಗಳು ಬಾಯಾರಿ ಬಳಲುತ್ತಿರುತ್ತವೆ. ಮಡಿಕೆ-ಕುಡಿಕೆಯಲ್ಲಿ ನೀರಿಡಿ. ಪ್ರಾಣಿ, ಪಕ್ಷಿಗಳ ದಾಹ ನೀಗಿಸಿ ಎಂಬ ಸಂದೇಶಗಳು ಬೇಸಿಗೆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಿಗೆ ಬೀಳುತ್ತವೆ. ಆದರೆ ಇದನ್ನು ಅಕ್ಷರಶಃ ಕಾರ್ಯಗತಗೊಳಿಸುವ ಮೂಲಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಪಕ್ಷಿ ಪ್ರೇಮ ಮೆರೆದಿದ್ದಾರೆ.
ಕೋಟೆನಾಡು ಚಿತ್ರದುರ್ಗದಲ್ಲಿ ಈ ಬಾರಿ ಬಿಸಿಲಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಿನಲ್ಲಿ ಕಂಡುಬರುತ್ತಿದ್ದ ಬಿರು ಬೇಸಿಗೆ, ಈ ಬಾರಿ ಮಾರ್ಚ್ ತಿಂಗಳಿನಲ್ಲಿಯೇ ತನ್ನ ಪ್ರತಾಪ ತೋರಲು ಆರಂಭಿಸಿದೆ. ಈ ಹಿನ್ನಲೆಯಲ್ಲಿ ಪಕ್ಷಿಗಳ ಹಸಿವು ನೀಗಿಸುವ ಹಾಗೂ ದಾಹ ತಣಿಸುವ ಪ್ರಯತ್ನವೊಂದು ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದಿದೆ.
ಬೇಸಿಗೆಯಲ್ಲಿನ ತಾಪಮಾನ ನಿಧಾನವಾಗಿ ಏರಿಕೆಯಾಗುತ್ತಿದೆ. ಪರಿಣಾಮ ನೀರಿನ ಸೆಲೆಗಳು ಬತ್ತಲಾರಂಭಿಸಿವೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಜನರೊಂದಿಗೆ ಪ್ರಾಣಿ, ಪಕ್ಷಿಗಳು ಸಹ ಬಿಸಿಲಿನ ತಾಪಕ್ಕೆ ಸಿಲುಕಿ ಕಂಗಲಾಗುವುದು ಸಹಜ. ಹೀಗಾಗಿ ಪ್ರಾಣಿ-ಪಕ್ಷಿಗಳು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುವುದು ಅಸಾಮಾನ್ಯವೇನಲ್ಲ. ಮನುಷ್ಯರಿಗೆ ನೀರಡಿಕೆಯಾದರೆ ಎಲ್ಲಿಂದಾದರೂ ನೀರು ಪಡೆದು ಕುಡಿಯುತ್ತೇವೆ. ಆದರೆ ಮೂಕ ಪ್ರಾಣಿ-ಪಕ್ಷಿಗಳಿಗೆ ಎಲ್ಲಿ ನೀರು ಸಿಗುತ್ತದೆಯೋ ಎಂದು ಹುಡುಕಿಕೊಂಡು ಅಲೆದಾಡಬೇಕು. ಬೇಸಿಗೆಯ ಬೇಗೆಯಲ್ಲಿ ಪಕ್ಷಿಗಳು ಆಹಾರ, ನೀರಿಗಾಗಿ ಅವುಗಳು ಪಡುವ ವೇದನೆ ಗಮನಿಸಿದ ಜಿ.ಪಂ ಸಿಇಒ ಮಾನವೀಯತೆ ಮೆರೆದಿದ್ದಾರೆ.
ಚಿತ್ರದುರ್ಗ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಗಿಡ-ಮರಗಳಿಗೆ ಮತ್ತು ಕಾರ್ಯಾಲಯದ ಮಹಡಿ ಮೇಲೆ ತಮ್ಮ ಸ್ವಂತ ಹಣದಲ್ಲಿ ಪ್ಲಾಸ್ಟಿಕ್ ಬೌಲ್‍ಗಳನ್ನು ನೇತು ಹಾಕಿ, ಒಂದರಲ್ಲಿ ನೀರು, ಇನ್ನೊಂದರಲ್ಲಿ ವಿವಿಧ ಬಗೆಯ ಧಾನ್ಯ, ಕಾಳುಗಳನ್ನು ಹಾಕಿದ್ದಾರೆ. ಇದರಿಂದಾಗಿ ಪಕ್ಷಿಗಳು ಬಂದು ಆಹಾರ ತಿಂದು, ನೀರನ್ನು ಕುಡಿದು, ಹಸಿವು ಹಾಗೂ ದಣಿವು ನೀಗಿಸಿಕೊಳ್ಳುತ್ತಿದ್ದು, ಇದರಿಂದಾಗಿ ಜಿಲ್ಲಾ ಪಂಚಾಯಿತಿ ಆವರಣ ಪಕ್ಷಿಗಳ ಚಿಲಿಪಿಲಿ, ಕಲರವದಿಂದ ಕೂಡಿದೆ.
ಬೇಸಿಗೆಯಲ್ಲಿ ಜನಸಾಮಾನ್ಯರಿಗೂ ಸಹ ಕುಡಿಯುವ ನೀರಿನ ಬವಣೆ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಪಕ್ಷಿ ಸಂಕುಲಗಳ ಪಾಡು ಹೇಳತೀರದು. ಜನರ ದುರಾಸೆಗೆ ಅನೇಕ ಪ್ರಾಣಿ ಪಕ್ಷಿ ಸಂಕುಲಗಳು ನಾಶವಾಗುತ್ತಿವೆ. ಇಂತಹ ಸಮಯದಲ್ಲಿ ಪ್ರಾಣಿ, ಪಕ್ಷಿಗಳ ಸಂಕುಲವನ್ನು ಉಳಿಸಿ, ಬೆಳೆಸಬೇಕಾದ್ದು ಮಾನವೀಯ ಧರ್ಮವಾಗಿದೆ. ಹೀಗಾಗಿಯೇ ಜಿ.ಪಂ. ಆವರಣದಲ್ಲಿ ಪಕ್ಷಿಗಳ ಹಸಿವು ಹಾಗೂ ನೀರಿನ ದಾಹ ನೀಗಿಸಲು ಗಿಡಮರಗಳಲ್ಲಿ ಪ್ಲಾಸ್ಟಿಕ್ ಬೌಲ್‍ಗಳನ್ನು ನೇತುಹಾಕಿಸಿದ್ದೇನೆ. ಪಕ್ಷಿಗಳು ಇದರಿಂದ ತಮ್ಮ ದಾಹ ನೀಗಿಸುವುದನ್ನು ಕಂಡಾಗ ಖುಷಿಯಾಗುತ್ತದೆ. ಇದೇ ರೀತಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯಲ್ಲಿ ಇಓ ಗಳು ಮತ್ತು ಪಿಡಿಒ ಗಳು ತಮ್ಮ ವೈಯಕ್ತಿಕ ಹಣದಲ್ಲಿ ಪಕ್ಷಿಗಳ ನೀರಿನ ದಾಹ ನೀಗಿಸಲು ಮುಂದಾಗಬೇಕು. ತಮ್ಮ ಪಂಚಾಯತಿ ವ್ಯಾಪ್ತಿ ಸುತ್ತಮುತ್ತಲಿರುವ ಗಿಡ ಮರ, ಮಹಡಿಗಳ ಮೇಲೆ ಪಕ್ಷಿಗಳಿಗೆ ಒಂದಿಷ್ಟು ನೀರು ಮತ್ತು ಆಹಾರವಿನ್ನಿಡುವ ಕಾರ್ಯ ಮಾಡುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡುತ್ತೇನೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಅವರು.








About The Author
Discover more from JANADHWANI NEWS
Subscribe to get the latest posts sent to your email.