ಚಿತ್ರದುರ್ಗದಲ್ಲಿ “ಆಸರೆ” ಯೋಜನೆಗೆ ವೇಗ
ಒಂಟಿಯಾಗಿ ವಾಸಿಸುವ ಮಹಿಳೆಯರು, ಹಿರಿಯ ನಾಗರಿಕರಿಗೆ ಪೊಲೀಸ್ ಭರವಸೆ
ಚಿತ್ರದುರ್ಗ: ಮಾನ್ಯ ರಂಜಿತ್ ಕುಮಾರ್ ಬಂಡಾರು, ಪೊಲೀಸ್ ವರಿಷ್ಠಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆ ಅವರ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ “ಆಸರೆ” ಎಂಬ ವಿನೂತನ ಸಮುದಾಯ ಪೊಲೀಸ್ ಉಪಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರು ಹಾಗೂ ವಯೋವೃದ್ಧ ಹಿರಿಯ ನಾಗರಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಕಾಪಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಇತ್ತೀಚಿನ ದಿನಗಳಲ್ಲಿ ಒಂಟಿತನ, ಅಸುರಕ್ಷತೆ, ಅಭದ್ರತೆ ಮತ್ತು ಕಾಳಜಿಯ ಕೊರತೆ ಮುಂತಾದ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆ, “ಆಸರೆ” ಯೋಜನೆ ಒಂದು ಮಾನವೀಯ ಹೆಜ್ಜೆಯಾಗಿದೆ. ಈ ಯೋಜನೆಯ ಮೂಲಕ ಒಂಟಿಯಾಗಿ ವಾಸಿಸುವ ಮಹಿಳೆಯರು ಮತ್ತು ಹಿರಿಯ ನಾಗರಿಕರು ತಾವು ಒಂಟಿಯಲ್ಲ, ತಮ್ಮೊಂದಿಗೆ ಪೊಲೀಸ್ ಇಲಾಖೆ ಹಾಗೂ ಸರ್ಕಾರ ಸದಾ ಇರುವುದೆಂಬ ಬಲವಾದ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಪಡೆಯುತ್ತಿದ್ದಾರೆ.



ಯೋಜನೆಯ ಅನುಷ್ಠಾನದ ಭಾಗವಾಗಿ, ಪೊಲೀಸ್ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ, ಒಂಟಿಯಾಗಿ ವಾಸಿಸುವವರ ಕುಂದು-ಕೊರತೆಗಳನ್ನು ಆಲಿಸಿ, ಅಗತ್ಯ ಸಲಹೆ ಹಾಗೂ ಸಹಾಯವನ್ನು ಒದಗಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದನೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. “ಆಸರೆ” ಯೋಜನೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳೂ ಹಮ್ಮಿಕೊಳ್ಳಲಾಗುತ್ತಿವೆ.
ಚಳ್ಳಕೆರೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಕುಮಾರ್ ಕೆ. ಅವರು ಯೋಜನೆಯನ್ನು ಸ್ಥಳೀಯ ಮಟ್ಟದಲ್ಲಿ ಸಮರ್ಪಕವಾಗಿ ಜಾರಿಗೆ ತರುವಲ್ಲಿ ಸಕ್ರಿಯ ಪಾತ್ರವಹಿಸುತ್ತಿದ್ದು, ಹಿರಿಯ ನಾಗರಿಕರು ಹಾಗೂ ಮಹಿಳೆಯರೊಂದಿಗೆ ನೇರ ಸಂಪರ್ಕ ಸಾಧಿಸಿ ಅವರ ವಿಶ್ವಾಸ ಗಳಿಸುತ್ತಿದ್ದಾರೆ.
ಒಟ್ಟಿನಲ್ಲಿ, “ಆಸರೆ” ಯೋಜನೆ ಸಮುದಾಯ ಪೊಲೀಸ್ ವ್ಯವಸ್ಥೆಯತ್ತ ಮತ್ತೊಂದು ಹೆಜ್ಜೆಯಾಗಿದ್ದು, ಸುರಕ್ಷಿತ ಮತ್ತು ವಿಶ್ವಾಸಭರಿತ ಸಮಾಜ ನಿರ್ಮಾಣದ ದಿಸೆಯಲ್ಲಿ ಮಹತ್ವದ ಪಾತ್ರವಹಿಸಿದೆ.
About The Author
Discover more from JANADHWANI NEWS
Subscribe to get the latest posts sent to your email.