February 17, 2026
IMG20260217120516_01.jpg

ಚಳ್ಳಕೆರೆ: ನಗರದ ನಗರಸಭೆ ಆವರಣದಲ್ಲಿ ಪ್ರಭಾರೆ ಪೌರಾಯುಕ್ತೆ ಡಾ. ನಾಗವೇಣಿ ಅವರ ನೇತೃತ್ವದಲ್ಲಿ ದಿನವಹಿ ತರಕಾರಿ ಮಾರುಕಟ್ಟೆ ಸಂತೆ ವಸೂಲಾತಿ, ವಾರದ ಸಂತೆಯ ಶುಲ್ಕ ವಸೂಲಿ, ಖಾಸಗಿ ಬಸ್ ನಿಲ್ದಾಣದ ಬಸ್ ನಿಲುಗಡೆ ಸುಂಕ ಹಾಗೂ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ದ್ವಿಚಕ್ರ ವಾಹನ ನಿಲುಗಡೆ ಸುಂಕ ವಸೂಲಾತಿ ಹಕ್ಕುಗಳಿಗೆ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಿತು.
ಹರಾಜಿನಲ್ಲಿ ದಿನವಹಿ ಸಂತೆ ಮಾರುಕಟ್ಟೆ ವಸೂಲಾತಿ ಹಕ್ಕಿಗೆ ತೀವ್ರ ಪೈಪೋಟಿ ಕಂಡುಬಂದಿದ್ದು, ಟೆಂಡರ್ ದಾರರಾದ ಸುರೇಶ್ ಅವರು ₹15 ಲಕ್ಷ 5 ಸಾವಿರಕ್ಕೆ ತಮ್ಮದಾಗಿಸಿಕೊಂಡರು. ವಾರದ ಸಂತೆ ಶುಲ್ಕ ವಸೂಲಾತಿ ಟೆಂಡರ್ ಅನ್ನು ಗೋವಿಂದರಾಜು ಅವರು ₹10 ಲಕ್ಷ 65 ಸಾವಿರಕ್ಕೆ ಪಡೆದರು.

ಖಾಸಗಿ ಬಸ್ ನಿಲ್ದಾಣ ಟೆಂಡರ್‌ಗೆ ವಿರೋಧ
ಖಾಸಗಿ ಬಸ್ ನಿಲ್ದಾಣದ ಬಸ್ ನಿಲುಗಡೆ ಸುಂಕ ಹಾಗೂ ದ್ವಿಚಕ್ರ ವಾಹನ ನಿಲುಗಡೆ ಸುಂಕ ವಸೂಲಾತಿ ಟೆಂಡರ್ ವಿಚಾರವಾಗಿ ನಗರಸಭೆ ಅಧಿಕಾರಿಗಳು, ಟೆಂಡರ್ ದಾರರು ಮತ್ತು ಬಸ್ ಮಾಲೀಕರ ನಡುವೆ ತೀವ್ರ ವಾಗ್ವಾದ ನಡೆಯಿತು.
ಬಸ್ ಮಾಲೀಕರು, “ನಗರಸಭೆ ವತಿಯಿಂದ ಬಸ್ ನಿಲ್ದಾಣದಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು—ಕುಡಿಯುವ ನೀರು, ನೆರಳು, ಶೌಚಾಲಯ, ಸರಿಯಾದ ನಿಲುಗಡೆ ವ್ಯವಸ್ಥೆ—ಒದಗಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸುಂಕ ಪಾವತಿಸಲು ಸಾಧ್ಯವಿಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇನ್ನೊಂದೆಡೆ, ಕೆಲ ಟೆಂಡರ್ ದಾರರು ಸಹ ಸೌಲಭ್ಯಗಳಿಲ್ಲದ ಪರಿಸ್ಥಿತಿಯಲ್ಲಿ ಸುಂಕ ವಸೂಲಿ ಮಾಡಲು ಸಾಧ್ಯವಿಲ್ಲವೆಂದು ತಿಳಿಸಿ, ಟೆಂಡರ್ ಪ್ರಕ್ರಿಯೆಯನ್ನು ಮುಂದೂಡಬೇಕೆಂದು ಒತ್ತಾಯಿಸಿದರು. ನಗರಸಭೆ ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದರೂ ಒಪ್ಪಂದವಾಗದೆ, ಕೊನೆಗೆ ಪ್ರಭಾರೆ ಪೌರಾಯುಕ್ತೆ ಡಾ. ನಾಗವೇಣಿ ಅವರು ಖಾಸಗಿ ಬಸ್ ನಿಲ್ದಾಣ ಮತ್ತು ದ್ವಿಚಕ್ರ ವಾಹನ ನಿಲುಗಡೆಗೆ ಸಂಬಂಧಿಸಿದ ಎರಡು ಟೆಂಡರ್‌ಗಳನ್ನು ಮುಂದೂಡಲಾಗಿದೆ ಎಂದು ಘೋಷಿಸಿದರು.
ನಗರಸಭೆಯ ಷರತ್ತುಗಳು
ಟೆಂಡರ್ ಪಡೆದ ಬಿಡ್‌ದಾರರು ನಗರಸಭೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡಬಾರದು. ಸುಂಕ ವಸೂಲಿ ಮಾಡುವಾಗ ನಗರಸಭೆಯಿಂದ ಭಾವಚಿತ್ರವುಳ್ಳ ಗುರುತಿನ ಚೀಟಿ ಪಡೆಯಬೇಕು. ಹೆಚ್ಚುವರಿ ಸುಂಕ ವಸೂಲಿ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಹಾಗೂ ಗುತ್ತಿಗೆದಾರರು ಹಳ್ಳಿಗಳಿಂದ ಬರುವ ನಾಗರಿಕರು ಮತ್ತು ನಗರ ವ್ಯಾಪಾರಸ್ಥರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಸುಂಕ ವಸೂಲಿ ಮಾಡಬೇಕು ಎಂಬ ನಿಯಮ ಸೇರಿದಂತೆ ಇತರೆ ಷರತ್ತುಗಳನ್ನು ಪಾಲಿಸಬೇಕಾಗಿದೆ.
ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು, ಟೆಂಡರ್ ದಾರರು ಹಾಗೂ ಬಸ್ ಮಾಲೀಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading