January 30, 2026
FB_IMG_1737120545538.jpg


ಹೊಸದುರದಗ.ಜ.17:
ಬೆಂಬಲ ಬೆಲೆಯಡಿ ಸಿರಿಧಾನ್ಯಗಳನ್ನು ಖರೀದಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಪತ್ರ ಬರೆದು ಶಿಫಾರಸ್ಸು ಮಾಡಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಮಲ್ಲಿಹಳ್ಳಿ ಗ್ರಾಮದ ಕೃಷಿಕ ಪ್ರಭುಲಿಂಗಪ್ಪ ಹಾಗೂ ಮಹೇಶ್ ಅವರ ಸಿರಿಧಾನ್ಯ ರೈತರ ಒಕ್ಕಲು ಕಣ ಹಾಗೂ ಕ್ಷೇತ್ರಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ರೈತರೊಂದಿಗೆ ಸಂವಾದ ನಡೆಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಹೊಸದುರ್ಗ ತಾಲ್ಲೂಕಿನಲ್ಲಿ ರಾಜ್ಯದಲ್ಲಿ ಅತಿಹೆಚ್ಚು ಸಿರಿಧಾನ್ಯ ಬೆಳೆ ಬೆಳೆಯಲಾಗುತ್ತದೆ. ಈ ಭಾಗದಲ್ಲಿ ಸಾಂಪ್ರದಾಯಿಕವಾಗಿಯೇ ಸಿರಿಧಾನ್ಯ ಬೆಳೆಯುವುದು ರೂಢಿಯಲ್ಲಿದೆ. ಕಡಿಮೆ ಮಳೆಯ ನಡುವೆ ಬರಿ ಇಬ್ಬನಿ ಆಧರಿಸಿ ವಾರ್ಷಿಕವಾಗಿ ಎರಡು ಬೆಳೆಗಳನ್ನು ರೈತರು ತೆಗೆಯುತ್ತಾರೆ. ಈ ಮೊದಲು ಸಿರಿಧಾನ್ಯಗಳಿಗೆ ಮಾರುಕಟ್ಟೆ ಇರಲಿಲ್ಲ. ಈಗ ಮಾರುಕಟ್ಟೆ ದೊರಕುತ್ತಿದೆ. ರಾಗಿ, ಭತ್ತ, ತೊಗರಿ ಮಾದರಿಯಲ್ಲಿ ಸಿರಿಧಾನ್ಯಗಳನ್ನು ಬೆಂಬಲ ಬೆಲೆಯಡಿ ಖರೀದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಇದೇ ಜ.23 ರಿಂದ 25 ರವರೆಗೆ ಅಂತರರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಮೇಳ ಉದ್ಘಾಟಿಸುವರು. ದೇಶದ 25 ರಾಜ್ಯಗಳ ಕೃಷಿ ಮಂತ್ರಿಗಳು ಹಾಗೂ ಅಧಿಕಾರಿಗಳು, ರೈತರು ಭಾಗವಹಿಸುವರು. ಇದರೊಂದಿಗೆ ವಿವಿಧ ದೇಶಗಳ ಅಧಿಕಾರಿ ಹಾಗೂ ರೈತರು ಸಹ ಮೇಳದಲ್ಲಿ ಪಾಲ್ಗೊಳ್ಳುವರು. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲೂ ಸಿರಿಧಾನ್ಯಗಳಿಗೆ ಮಾರುಕಟ್ಟೆ ದೊರಕಿಸಲು ಪ್ರಯತ್ನ ಮಾಡಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಶಾಸಕ ಗೋವಿಂದಪ್ಪನವರಿಗೆ ಸನ್ಮಾನ: ಹೊಸದುರ್ಗ ಶಾಸಕ ಗೊವಿಂದಪ್ಪನವರು ಸ್ವತಃ ಕೃಷಿಕರಾಗಿದ್ದು, ಸಿರಿಧಾನ್ಯ ಬೆಳೆಯುವುದರೊಂದಿಗೆ ಆಹಾರದಲ್ಲಿಯೂ ಸಿರಿಧಾನ್ಯ ಬಳಸುತ್ತಿದ್ದಾರೆ. ಈ ಮೂಲಕ ತಾಲ್ಲೂಕಿನ ರೈತರಿಗೆ ಮಾದರಿಯಾಗಿದ್ದಾರೆ. ಹೊಸದುರ್ಗ ಮಾದರಿಯಲ್ಲಿ ಮಳೆ ಕಡಿಮೆ ಬೀಳುವ ರಾಜ್ಯದ ಇತರೆ ಜಾಗದಲ್ಲಿ ಸಿರಿಧಾನ್ಯ ಬೆಳೆಯಲು ರೈತರಿಗೆ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುವುದು. ಅಂತರಾಷ್ಟ್ರೀಯ ಮೇಳದಲ್ಲಿ ಮುಖ್ಯಮಂತ್ರಿಗಳಿಂದ ಶಾಸಕ ಬಿ.ಜಿ.ಗೋವಿಂದಪ್ಪ ಅವರಿಗೆ ಸನ್ಮಾನಿಸಲಾಗುವುದು ಎಂದರು.
ಮಲ್ಲಿಹಳ್ಳಿ ಗ್ರಾಮದ ಮಹೇಶ್ ಹಾಗೂ ಪ್ರಭುಲಿಂಗಪ್ಪ ನವರ ಸಿರಿಧಾನ್ಯ ರೈತರ ಒಕ್ಕಲು ಕಣ ಹಾಗೂ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ರೈತ ಮಹೇಶ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ರೂ.12 ಸಾವಿರಕ್ಕೆ ದುಡಿಯುತ್ತಿದ್ದರು. ಖರ್ಚು ಕಳೆದು ತಿಂಗಳಿಗೆ ರೂ.4 ಸಾವಿವರ ಮಾತ್ರ ಉಳಿಯುತ್ತಿತ್ತು. ಈಗ ಮರಳಿ ಸಮಗ್ರ ಕೃಷಿ ಪದ್ದತಿಯಲ್ಲಿ ವಾರ್ಷಿಕವಾಗಿ ಎಲ್ಲಾ ಖರ್ಚು ಕಳೆದು ರೂ.4 ಲಕ್ಷ ಲಾಭ ಗಳಿಸುತ್ತಿದ್ದಾರೆ. ರೇಷ್ಮೆ, ಕೋಳಿ ಸಾಕಾಣಿಕೆ, ಸಿರಿ ಧಾನ್ಯಗಳನ್ನು ಬೆಳದು ರಾಜ್ಯದ ಇತರೆ ಯುವಕರಿಗೂ ಮಾದರಿಯಾಗಿದ್ದಾರೆ. ಇನ್ನೊರ್ವ ರೈತ ಪ್ರಭುಲಿಂಗಸ್ವಾಮಿ ಸಹ ಸಮಗ್ರ ಕೃಷಿ ಮಾಡುತ್ತಿದ್ದು, ಯಾವುದೇ ಸಾಲ ಹಾಗೂ ಬಡ್ಡಿಯ ಜಂಜಾಟವಿಲ್ಲದೇ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕೃಷಿ ಇಲಾಖೆ, ಕೃಷಿ ವಿಶ್ವ ವಿದ್ಯಾಲಯಗಳು ನೀಡುವ ಸಲಹೆಗಳನ್ನು ರೈತರು ಕೃಷಿಯಲ್ಲಿ ಅಳವಡಿಸಿಕೊಂಡರೆ ಜೀವನ ಸುಧಾರಿಸುವುದು ಎಂದು ಸಚಿವ ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟರು.
ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಲಾಗಿದೆ. ಒಂದುವರೆ ವರ್ಷಗಳ ಆಡಳಿತ ನೀಡಲಾಗಿದೆ. ಸರ್ಕಾರ ಹಾಗೂ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅಪರಾಧಗಳ ಸಂಖ್ಯೆ ಇಳಿಮುಖವಾಗಿದೆ. ಕೆಲ ಅಹಿತಕರ ಘಟನೆಗಳು ನಡೆದಿವೆ. ಸರ್ಕಾರ ಇವುಗಳನ್ನು ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳನ್ನು ಬಂಧಿಸಿ ಕಾನೂನು ಪ್ರಕ್ರಿಯೆಗೆ ಒಳಪಡಿಸಲಾಗುವುದು. ಯಾರೇ ತಪ್ಪು ಮಾಡಿದರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಸಚಿವ ಚಲುವರಾಯಸ್ವಾಮಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಬಡವರ ಸಿರಿಧಾನ್ಯ ಇಂದು ಶ್ರೀಮಂತ ಆಹಾರವಾಗಿದೆ: ಈ ಮೊದಲು ನವಣೆ ಅಕ್ಕಿ ಅನ್ನ ಉಣ್ಣುತ್ತಾರೆ ಎಂದರೆ, ಗ್ರಾಮೀಣ ಭಾಗದಲ್ಲಿ ಬಡವರು ಎಂದು ಭಾವಿಸಿ ಹೆಣ್ಣು ನೀಡುತ್ತಿರಲಿಲ್ಲ. ಇಂದು ಕಾಲ ಬದಲಾಗಿದೆ. ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆಯ ಫಲವಾಗಿ ಬಡವರಿಗೂ ಅಕ್ಕಿ ಸಿಗುತ್ತಿದೆ ಎಂದು ಶಾಸಕ ಬಿ.ಜಿ.ಗೊವಿಂದಪ್ಪ ರೈತರೊಂದಿಗಿನ ಸಂವಾದದ ವೇಳೆ ಹೇಳಿದರು.
ಪೌಷ್ಠಿಕ ಆಹಾರ ಎನಿಸಿದ ಸಿರಿಧಾನ್ಯಗಳು ನಮ್ಮ ಆಹಾರ ಪದ್ದತಿಯಿಂದ ದೂರವಾಗುತ್ತಿವೆ. ವೈದ್ಯಲೋಕ ಸಿರಿಧಾನ್ಯಗಳ ಮಹತ್ವನ್ನು ಸಾಬೀತು ಮಾಡಿದೆ. ಇದರಿಂದಾಗಿ ಶ್ರೀಮಂತರು ಸಹ ಸಿರಿಧಾನ್ಯಗಳ ಆಹಾರ ಸೇವಿಸುತ್ತಿದ್ದಾರೆ. ಸಿರಿಧಾನ್ಯಗಳಿಗೆ ಉತ್ತಮ ಮಾರುಕಟ್ಟೆ ದೊರಕಿದರೆ ಹೆಚ್ಚು ರೈತರು ಸಿರಿಧಾನ್ಯ ಕೃಷಿ ಕಡೆಗೆ ಮುಖ ಮಾಡುವರು. ಹೊಸದುರ್ಗ ತಾಲ್ಲೂಕು ಮೊದಲಿನಿಂದಲೂ ಸಿರಿಧಾನ್ಯ ಕೃಷಿ ಹೆಸರಾಗಿದೆ. ಸದ್ಯ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಪಡಿತರ ವಿತರಣೆಯಲ್ಲಿ ಸ್ಥಳೀಯವಾಗಿ ಬೆಳೆಯುವ ಸಿರಿಧಾನ್ಯಗಳನ್ನು ಸರ್ಕಾರ ಖರೀದಿಸಿ, ಜನರಿಗೆ ವಿತರಿಸಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಮುಖಂಡರು, ರೈತರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading