January 29, 2026
FB_IMG_1737120075734.jpg


ಹೊಸದುರ್ಗ.ಜ.17:
ಸಿರಿಧಾನ್ಯ ಉತ್ಪಾದಕರು, ಮಾರುಕಟ್ಟೆದಾರರು, ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸುವ ಹಾಗೂ ಮಾರುಕಟ್ಟೆ ವಿಸ್ತರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ “ಸಿರಿಧಾನ್ಯ ಹಬ್” ನಿರ್ಮಾಣಕ್ಕೆ ಶೀಘ್ರ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಹೇಳಿದರು.
ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ದುರ್ಗದ ಸಿರಿ ರೈತ ಉತ್ಪಾದಕ ಕಂಪನಿ ಆವರಣದಲ್ಲಿ ಶುಕ್ರವಾರ ನಡೆದ ಸಿರಿಧಾನ್ಯ ಬೆಳೆಗಾರರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಸಿರಿಧಾನ್ಯ ಹಬ್ ನಿರ್ಮಾಣಕ್ಕೆ ಶೀಘ್ರದಲ್ಲಿ ಮುಖ್ಯಮಂತ್ರಿಗಳು ಭೂಮಿ ಪೂಜೆ ನೆರವೇರಿಸಲಿದ್ದು, ಮುಂದಿನ ಒಂದು ವರ್ಷದೊಳಗೆ ಸಿರಿಧಾನ್ಯ ಹಬ್ ನಿರ್ಮಿಸಲಾಗುವುದು. ಹಾಗಾಗಿ ಸಿರಿಧಾನ್ಯ ಹಬ್‍ನಲ್ಲಿ ಹೆಸರು ನೋಂದಣಿ ಮಾಡಿದರೆ ರಾಷ್ಟ್ರ, ಅಂತರ ರಾಷ್ಟ್ರೀಯ ಮಾರುಕಟ್ಟೆಗೆ ವೇದಿಕೆ ಸಿಗಲಿದ್ದು, ಉತ್ತಮ ಮಾರುಕಟ್ಟೆ ವ್ಯವಸ್ಥೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಇದೇ ಜ.23 ರಿಂದ 25 ರವರೆಗೆ ಬೆಂಗಳೂರಿನಲ್ಲಿ ಸಾವಯವ ಸಿರಿಧಾನ್ಯ ಅಂತರ ರಾಷ್ಟ್ರೀಯ ಮೇಳ ಹಮ್ಮಿಕೊಳ್ಳಲಾಗಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿದೆ. ಸಿರಿಧಾನ್ಯದ ಮಹತ್ವ ಎಲ್ಲರಿಗೂ ಪರಿಚಯಿಸಬೇಕು ಎಂಬುದು ಸಿರಿಧಾನ್ಯ ಮೇಳದ ಉದ್ದೇಶ ಎಂದು ಹೇಳಿದರು.
ರಾಜ್ಯದಲ್ಲಿಯೇ ಅತಿ ಹೆಚ್ಚು ಸಿರಿಧಾನ್ಯ ಬೆಳೆಯುವಲ್ಲಿ ಹೊಸದುರ್ಗ ತಾಲ್ಲೂಕು ಮುಂಚೂಣಿಯಲ್ಲಿದೆ. ಹೊಸದುರ್ಗ ತಾಲ್ಲೂಕಿನಲ್ಲಿ ಶೇ.90ರಷ್ಟು ಸಿರಿಧಾನ್ಯ ಬೆಳೆಯಲಾಗುತ್ತದೆ. ಹೊಸದುರ್ಗ ತಾಲ್ಲೂಕಿಗೆ ಇಲ್ಲಿಯವರೆಗೂ ಸಿರಿಧಾನ್ಯ ಬೆಳೆಗೆ ಸಿರಿಯೋಜನೆಯಡಿ ರೂ.33.96 ಕೋಟಿ ಸಹಾಯಧನ ನೀಡಲಾಗಿದ್ದು, ಕಳೆದ ವರ್ಷ ರೂ.15 ಕೋಟಿ ಸಹಾಯಧನ ಹೊಸದುರ್ಗ ತಾಲ್ಲೂಕಿಗೆ ನೀಡಿದೆ. ಈ ಯೋಜನೆಯಡಿ ರಾಜ್ಯದ 45 ಸಾವಿರ ಫಲಾನುಭವಿಗಳ ಪೈಕಿ ಹೊಸದುರ್ಗ ತಾಲ್ಲೂಕಿನಲ್ಲಿಯೇ 35 ಸಾವಿರ ಫಲಾನುಭವಿಗಳು ಇರುವುದು ಹೆಮ್ಮೆಯ ಸಂಗತಿ. ಹಾಗಾಗಿ ಶಾಸಕ ಗೋವಿಂದಪ್ಪನವರಿಗೆ ಇಲ್ಲಿನ ರೈತರ ಪರವಾಗಿ ಅಂತರ ರಾಷ್ಟ್ರೀಯ ಸಿರಿಧಾನ್ಯ ಮೇಳದಲ್ಲಿ ಸನ್ಮಾನಿಸಲಾಗುವುದು ಎಂದರು.
ಸಾವಯವ ಗೊಬ್ಬರ ಬಳಸಿದಲ್ಲಿ ಸಿರಿಧಾನ್ಯದ ಇಳುವರಿ ಹೆಚ್ಚಾಗುತ್ತದೆ. ರಸಗೊಬ್ಬರ ಕಡಿಮೆ ಮಾಡಿದಷ್ಟು ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ಸಿರಿಧಾನ್ಯ ರೋಗ ನಿರೋಧಕ ಶಕ್ತಿ ಇರುವ ಆಹಾರ. ಈ ಆಹಾರ ಸೇವನೆಯಿಂದ ಹೆಚ್ಚು ಕಾಲ ಆರೋಗ್ಯವಂತರಾಗಿ ಇರಲಿಕ್ಕೆ ಸಹಕಾರಿ ಆಗಲಿದೆ ಎಂದರು.
ಕೆಲವೇ ತಾಲೂಕುಗಳಿಗೆ ಮೀಸಲಾಗಿದ್ದ ಕೃಷಿಹೊಂಡ ನಿರ್ಮಾಣ ಸೌಲಭ್ಯವನ್ನು ರಾಜ್ಯದ ಎಲ್ಲ ತಾಲ್ಲೂಕುಗಳಿಗೂ ವಿಸ್ತರಿಸಲಾಗಿದೆ ಎಂದು ತಿಳಿಸಿದ ಅವರು, ಪಂಚ ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕೆಲಸಕ್ಕೂ ಒತ್ತು ನೀಡಲಾಗಿದೆ. ನಿರಂತರವಾಗಿ ರೈತಪರವಾಗಿರುವ ಸರ್ಕಾರ ನಮ್ಮದು ಎಂದರು.
ಕೃಷಿಯನ್ನು ಖುಷಿಯಿಂದ ಮಾಡಿದಲ್ಲಿ ಮಾತ್ರ ರೈತರು ಅಭಿವೃದ್ಧಿ ಕಾಣಲು ಸಾಧ್ಯ. ಸಮಗ್ರ ಕೃಷಿಪದ್ಧತಿ ಅಳವಡಿಸಿಕೊಂಡಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ರೈತರು ಕೃಷಿ ವಿಶ್ವವಿದ್ಯಾನಿಲಯ, ತಜ್ಞರು ಹಾಗೂ ಅಧಿಕಾರಿಗಳ ಸಲಹೆ, ಮಾರ್ಗದರ್ಶನ ಪಡೆದು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ವಾತಾವರಣಕ್ಕೆ ಹೊಂದಿಕೊಳ್ಳುವ ಬೆಳೆ ಬೆಳೆಯಬೇಕು. ರೈತರು ಬೆಳೆದಲ್ಲಿ ದೇಶ ಸುಭಿಕ್ಷತೆಯಿಂದಿರಲು ಸಾಧ್ಯ. ಯಾವ ಕಂಪನಿಗಳಿಂದಲ್ಲ ಎಂದು ಅಭಿಪ್ರಾಯಪಟ್ಟರು ಅವರು, ಸಿರಿಧಾನ್ಯ ನಾಡಾಗಿರುವ ಹೊಸದುರ್ಗ ತಾಲ್ಲೂಕಿಗೆ ಸಿರಿಧಾನ್ಯ ಬೆಳೆ ಪ್ರೋತ್ಸಾಹಕ್ಕಾಗಿ ಇಲಾಖೆಯಿಂದ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ರೈತರಿಗೆ ಸಿರಿಧಾನ್ಯ ಬೆಳೆಯಲು ಉತ್ತೇಜಿಸುವ ಉದ್ದೇಶದಿಂದ ಇದೇ ಜನವರಿ 23 ರಿಮದ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ. ಸಿರಿಧಾನ್ಯ ಬೆಳೆಯನ್ನು ಪರಿಶೀಲನೆ ಮಾಡಲು ಸಚಿವರು ಹಾಗೂ ಅಧಿಕಾರಿಗಳ ತಂಡ ಹೊಸದುರ್ಗದ ಮಲ್ಲಿಹಳ್ಳಿಗೆ ಭೇಟಿ ನೀಡಿದ್ದು, ಸಚಿವರು ಉತ್ಸುಕತೆಯಿಂದ ಆಗಮಿಸಿ, ರೈತರೊಂದಿಗೆ ಸಮಗ್ರ ಚರ್ಚೆ ನಡೆಸಿದರು. ದುರ್ಗದ ಸಿರಿ ರೈತ ಉತ್ಪಾದನಾ ಕಂಪನಿ ರೈತರಿಗೆ ಸಹಾಯ ಮಾಡುತ್ತಿದೆ. ಸರ್ಕಾರ ರೈತರಿಗೆ ಹೆಚ್ಚು ಒತ್ತು ನೀಡುತ್ತಿದೆ. ಸಚಿವರು ಸಮಗ್ರವಾಗಿ ಕೃಷಿ ಬಗ್ಗೆ ತಿಳಿದಿದ್ದು, ಅಷ್ಟೆ ಆಸಕ್ತಿವಹಿಸಿ, ಕೃಷಿಕರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ಆಸಕ್ತರಾಗಿದ್ದಾರೆ. ತಾಲ್ಲೂಕಿನ ರೈತರು ಸಿರಿಧಾನ್ಯ ಬೆಳೆಗೆ ದೇಶಾದ್ಯಂತ ಹೆಸರುವಾಸಿಯಾಗಿದೆ. ಮಲ್ಲಿಹಳ್ಳಿ ಸರ್ಕಾರ ಹಾಗೂ ವಿಶ್ವ ವಿದ್ಯಾಲಯಗಳ ಸಲಹೆ ಸೌಲಭ್ಯ ಪಡೆದು, ಸಾವಯವ ಕೃಷಿ, ರೇಷ್ಮೆ ಸಾಕಾಣಿಕೆ, ಹಸು ಸಾಕಾಣಿಕೆ ಮೂಲಕ ಮಿಶ್ರ ಕೃಷಿ ಅವಲಂಬಿಸಿ, ಆರ್ಥಿಕವಾಗಿ ಸಫಲರಾಗಿದ್ದಾರೆ. ಕೃಷಿಯನ್ನು ಖುಷಿಯಿಂದ ಮಾಡಬೇಕು. ಹಿಂದೆ ಸಿರಿಧಾನ್ಯ ಬಡವರ ಆಹಾರವಾಗಿತ್ತು. ಈಗ ಸಿರಿವಂತರ ಆಹಾರವಾಗಿದೆ. ಹೆಚ್ಚು ಸಿರಿಧಾನ್ಯ ಬೆಳೆದು, ಸೇವಿಸಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಶಾಸಕರು ಸಲಹೆ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಮಾತನಾಡಿ, ‘ಕೃಷಿಯಲ್ಲಿ ಆಧುನಿಕತೆ ಬೆಳೆದಂತೆಲ್ಲಾ ಸಿರಿಧಾನ್ಯ ವಿಸ್ತೀರ್ಣ, ಉತ್ಪಾದನೆ ಕಡಿಮೆಯಾಯಿತು. ಸಕ್ಕರೆ, ಮೈದಾ, ರಿಫೈನ್ಡ್ ಆಯಿಲ್ ಬಳಕೆ ಹೆಚ್ಚಾಯಿತು ಪರಿಣಾಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು ಎಂದು ಹೇಳಿದರು.
ಸಾವೆ, ನವಣೆ, ರಾಗಿ ಸೇರಿದಂತೆ ಹಲವು ಬೆಳೆಗಳು ತೃಣ ಅಥವಾ ಕಿರುಧಾನ್ಯವಲ್ಲ ಇಂದು ಸಿರಿಧಾನ್ಯಗಳಾಗಿವೆ. ಹೊಸದುರ್ಗ ತಾಲ್ಲೂಕಿನಲ್ಲಿ 28 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆ ಬೆಳೆಯಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 30 ಸಾವಿರ ಹೆಕ್ಟೇರ ಪ್ರದೇಶಕ್ಕೂ ಹೆಚ್ಚು ಸಿರಿಧಾನ್ಯ ಬೆಳೆ ಬೆಳೆಯುವ ಮೂಲಕ ಸುಮಾರು 3 ಸಾವಿರ ಟನ್‍ಗಿಂತಲೂ ಹೆಚ್ಚು ಸಿರಿಧಾನ್ಯ ಬೆಳೆಯಲಾಗುತ್ತದೆ ಎಂದು ಹೇಳಿದರು.
ಸಿರಿಧಾನ್ಯ ಮೇಳಗಳು ಜಾಗೃತಿ ಮೂಡಿಸುವ ಮೇಳಗಳಾಗಿವೆ. ಬೆಂಗಳೂರಿನಲ್ಲಿ ನಡೆಯುವ ಅಂತರ ರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ಈಗಾಗಲೇ 20 ವಿದೇಶಗಳು, 20 ಕ್ಕೂ ಅಧಿಕ ರಾಜ್ಯಗಳು ಭಾಗವಹಿಸಲಿಕ್ಕೆ ನೋಂದಣಿ ಮಾಡಿಸಲಾಗಿದೆ. ಸರ್ಕಾರವೂ ರೈತರ ಅಭಿವೃದ್ಧಿಗೆ ಶ್ರಮಿಸುತ್ತಿದೆ.
ಸಿರಿಧಾನ್ಯ ಬೆಳೆಯ ಜೊತೆಗೆ ಸಂಸ್ಕರಣಾ ಕಾರ್ಯವೂ ನಡೆಯಬೇಕು. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ 37 ರೈತ ಉತ್ಪಾದಕ ಕಂಪನಿಗಳು ಸಕ್ರಿಯವಾಗಿದ್ದು, ಇವುಗಳ ಉತ್ತೇಜನಕ್ಕೆ. ಸಿರಿಧಾನ್ಯಗಳ ಮೌಲ್ಯವರ್ಧನೆಗೆ ರೂ.10 ರಿಂದ 20 ಲಕ್ಷ ಸಹಾಯಧನ, ಮೇಲ್ದರ್ಜೆಗೇರಿಸಲು ರೂ.6 ಲಕ್ಷ ಸಹಾಯಧನ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಭದ್ರಾ ಮೇಲ್ದಂಡೆ ಯೋಜನೆ, ಚೆಕ್ ಡ್ಯಾಂ ನಿರ್ಮಾಣ, ಬ್ರಿಡ್ಜ್ ಕಂ ಬ್ಯಾರೇಜ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಶಾಸಕರು ಹೊಸದುರ್ಗವನ್ನು ನೀರಾವರಿ ಕ್ಷೇತ್ರ ಮಾಡುವ ಮೂಲಕ ರೈತರ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸಿರಿಧಾನ್ಯಗಳ ಸಿರಿ ಎಂಬ ಕರಪತ್ರ ಕರಪತ್ರಗಳನ್ನು ಕೃಷಿ ಸಚಿವ ಚೆಲುವರಾಯಸ್ವಾಮಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಕೃಷಿಕ ಸಮಾಜದ ಅಧ್ಯಕ್ಷ ರಾಗಿಶಿವಮೂರ್ತಿ, ಸಾವಯವ ಕೃಷಿ ಮಿಷನ್ ಮಾಜಿ ಅಧ್ಯಕ್ಷ ಸೋಮಶೇಖರ್, ಕೃಷಿ ಇಲಾಖೆ ಉಪನಿರ್ದೇಶಕ ಶಿವಕುಮಾರ್, ನಬಾರ್ಡ್‍ನ ಕವಿತಾ, ತಹಶೀಲ್ದಾರ್ ತಿರುಪತಿ ಪಾಟೀಲ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್.ಈಶ ಸೇರಿದಂತೆ ಕೃಷಿ ಅಧಿಕಾರಿಗಳು, ರೈತರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading