ಚಳ್ಳಕೆರೆ ಡಿ.16 ಅಕ್ರಮ ಖಾತೆ ಹಾಗೂ ಜಾಗ ಒತ್ತುವರಿ ತೆರವಿಗೆ ಗ್ರಾಮಸ್ಥರು ಪಟ್ಟು ಹಿಡಿದ ಪರಿಣಾಮ ಗ್ರಾಮಸಭೆಯನ್ನು ರದ್ದುಪಡಿಸಲಾಯಿತು.
ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಬಡಜನರಿಗೆ ಆಶ್ರಯ ವಸತಿ

ಯೋಜನೆಯಡಿ ನಿವೇಶನ ಹಂಚಿಕೆ ಕುರಿತು ಮಂಗಳವಾರ ಗ್ರಾಮಸಭೆ ನಡೆಸಲಾಗಿತ್ತು. ಜಿಲ್ಲಾಧಿಕಾರಿಗಳ ಆದೇಶದಂತೆ ರಿ.ಸ.ನಂ. 34 ರಲ್ಲಿರುವ 5 ಎಕರೆ ಸರ್ಕಾರಿ ಭೂಮಿಯನ್ನು ನಿವೇಶನ ರಹಿತ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಗ್ರಾಮ ಪಂಚಾಯಿತಿ ಅರ್ಜಿ ಆಹ್ವಾನಿಸಿದ್ದು, ಒಟ್ಟು 305 ಕುಟುಂಬಗಳು ಅರ್ಜಿ ಸಲ್ಲಿಸಿದ್ದರು.










ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಪ್ಪೇಸ್ವಾಮಿ ಎನ್.ಆರ್. ಮಾತನಾಡಿ, 5 ಎಕರೆ ಭೂಮಿಯಲ್ಲಿ 30×40 ಅಳತೆಯ ನಿವೇಶನಗಳನ್ನು 80 ಕುಟುಂಬಗಳಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ನಿಯಮಾನುಸಾರ ಮಹಿಳೆಯರು ಅರ್ಹರಾಗಿದ್ದು, ಅಂಗವಿಕಲರು, ಮಾಜಿ ಸೈನಿಕರು ಹಾಗೂ ಹಿರಿಯ ನಾಗರಿಕರ ವಿಷಯದಲ್ಲಿ ಪುರುಷರೂ ಅರ್ಹರಾಗುತ್ತಾರೆ. ವಾರ್ಷಿಕ ಆದಾಯ 1.20 ಲಕ್ಷ ಮೀರಿರಬಾರದು, ಅರ್ಜಿದಾರರು ಯಾವುದೇ ವಸತಿ ಹೊಂದಿರಬಾರದು ಹಾಗೂ ಸರ್ಕಾರದ ವಸತಿ ಯೋಜನೆ ಲಾಭ ಪಡೆದಿರಬಾರದು ಎಂದು ತಿಳಿಸಿದರು. ಗ್ರಾಮಸ್ಥರ ಒಪ್ಪಿಗೆ ದೊರೆತರೆ ಜಾತಿವಾರು ವಿಂಗಡಣೆ ಮೂಲಕ, ಇಲ್ಲದಿದ್ದರೆ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದರು.
ಆನ್‌ಲೈನ್ ತಂತ್ರಾಂಶದ ಮೂಲಕ ಪರಿಶೀಲನೆ ನಡೆಸಿದಾಗ 83 ಕುಟುಂಬಗಳು ಈಗಾಗಲೇ ಸರ್ಕಾರಿ ಮನೆ ಹಾಗೂ ಸೌಲಭ್ಯ ಪಡೆದಿರುವುದು, 46 ಕುಟುಂಬಗಳು ಖಾತೆ ಹೊಂದಿರುವುದು ಪತ್ತೆಯಾಗಿದ್ದು, ಒಟ್ಟು 129 ಅರ್ಜಿಗಳನ್ನು ಅನರ್ಹವೆಂದು ತಿರಸ್ಕರಿಸಲಾಗಿದೆ ಎಂದು ಪಿಡಿಓ ತಿಳಿಸಿದರು.





ಸಭೆಯಲ್ಲಿ ಸರ್ಕಾರಿ ಗೋಮಾಳ ಜಾಗದಲ್ಲಿ ಅಕ್ರಮವಾಗಿ ಮಾಡಿರುವ ಖಾತೆಗಳನ್ನು ರದ್ದುಪಡಿಸಿ, ಒತ್ತುವರಿ ತೆರವುಗೊಳಿಸಿ ಎಲ್ಲ ಸಮುದಾಯದವರಿಗೆ ಸಮಾನವಾಗಿ 30×40 ನಿವೇಶನ ಹಂಚಿಕೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ರಾಜಕೀಯ ಒತ್ತಡಕ್ಕೆ ಮಣಿದು ಭೂಮಿ ಹಂಚಿಕೆ ಮಾಡಿದರೆ ನ್ಯಾಯಾಲಯ ಮೊರೆ ಹೋಗುವುದಾಗಿ ಎಚ್ಚರಿಸಿದರು.
ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ ಕುಮಾರ್ ಮಾತನಾಡಿ, ಸುಮಾರು 45 ಎಕರೆ ಒತ್ತುವರಿ ಭೂಮಿಯನ್ನು ಸರ್ಕಾರದ ಅಧೀನಕ್ಕೆ ಪಡೆದು ಗ್ರಾಮದ ಪ್ರತಿಯೊಬ್ಬರಿಗೂ ಆಶ್ರಯ ವಸತಿ ಯೋಜನೆಯಡಿ ನಿವೇಶನ ನೀಡಿ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಸಭೆಯಲ್ಲಿ ನೂಡಲ್ ಅಧಿಕಾರಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ. ಸುಮಿತ್ರ, ಸದಸ್ಯರಾದ ನಾಗರಾಜ್, ಹರೀಶ್, ಕಲಾವತಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ತಿರಸ್ಕೃತಗೊಂಡ ಹಾಲಿ ಸದಸ್ಯರ ಅರ್ಜಿ
ನಿವೇಶನ ಹಕ್ಕುಪತ್ರ ಪಡೆದು ಮನೆ ನಿರ್ಮಿಸಿಕೊಂಡಿದ್ದರೂ ಆಶ್ರಯ ವಸತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದ ಹಾಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರಕಾರಿ ಗೋಮಾಳದಲ್ಲಿ ಹಕ್ಕು ಪತ್ರ ಪಡೆದು ಮನೆ ನಿರ್ಮಾಣ ಮಾಡಿದ್ದರಿಂದ ಅರ್ಜಿಯನ್ನು ಆನ್‌ಲೈನ್ ತಂತ್ರಾಂಶದ ಪರಿಶೀಲನೆಯ ನಂತರ ಗ್ರಾಮಸಭೆಯಲ್ಲಿ ತಿರಸ್ಕರಿಸಲಾಯಿತು.
ಗ್ರಾಪಂ ಸದಸ್ಯೆಯೊಬ್ಬರು ಪ್ರಧಾನ ಮಂತ್ರಿ ಅವಾಜ್ ಯೋಜನೆಯಡಿ ವಸತಿ ಸೌಲಭ್ಯ ಅರ್ಜಿ ಸಲ್ಲಿಸಿರುವುದು ಅನ್ ಲೈನ್ ನಲ್ಲಿ ಪತ್ತೆಯಾಗಿದ್ದು ನಿವೇಶನಕ್ಕೆ ಹಾಕಿದ ಅರ್ಜಿ ತಿರಸ್ಕರಿಸಲಾಗಿದೆ
About The Author
Discover more from JANADHWANI NEWS
Subscribe to get the latest posts sent to your email.