ಚಳ್ಳಕೆರೆ ಡಿ.16 ಚಳ್ಳಕೆರೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ–150ಎ ವ್ಯಾಪ್ತಿಯಲ್ಲಿ ಓಬಳಾಪುರದಿಂದ ಪಗಲಬಂಡೆ, ಕೊಸಕುಂಟೆ, ಪರಶುರಾಂಪುರ, ದೊಡ್ಡಚೆಲ್ಲೂರು ಸಂಪರ್ಕಿಸುವ ಕಿ.ಮೀ 74.92 ರಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸುಮಾರು 43 ವರ್ಷಗಳ ಹಳೆಯ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಸಮಯದಲ್ಲೂ ಕುಸಿಯುವ ಅಪಾಯದಲ್ಲಿದೆ.

ಈ ಸೇತುವೆಯು ಸುತ್ತಮುತ್ತಲಿನ 25 ರಿಂದ 30 ಗ್ರಾಮಗಳ ಪ್ರಮುಖ ಸಂಪರ್ಕ ಸೇತುವೆಯಾಗಿದ್ದು, ತಕ್ಷಣವೇ ಹೊಸ ಸೇತುವೆ ನಿರ್ಮಾಣ ಅವಶ್ಯಕವಾಗಿದೆ. ಇದೇ ರೀತಿಯಾಗಿ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ–ಕೊರಲಕುಂಟೆ ಮಾರ್ಗದ 17.90 ಕಿ.ಮೀ ಉದ್ದದ ಕೆಳ ಸೇತುವೆಯೂ ಶಿಥಿಲಗೊಂಡಿದ್ದು, 2022–23ರ ಮಳೆಗಾಲದಲ್ಲಿ ರಸ್ತೆ ದಾಟುವ ವೇಳೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಈ ಗಂಭೀರ ಸಮಸ್ಯೆಗಳ ಬಗ್ಗೆ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಲೋಕೋಪಯೋಗಿ ಸಚಿವರ ಗಮನ ಸೆಳೆದರು.
ಈ ಕುರಿತು ಉತ್ತರಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು,
ಚಳ್ಳಕೆರೆ (ರಾಷ್ಟ್ರೀಯ ಹೆದ್ದಾರಿ–150ಎ) ರಿಂದ ವಿಶ್ವನಾಥನಹಳ್ಳಿ ರಸ್ತೆ (ರಾಜ್ಯ ಹೆದ್ದಾರಿ–243) ಕಿ.ಮೀ 75.30 ರಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ರೂ. 650 ಲಕ್ಷ,
ದೊಡ್ಡರಿ–ಓಬೇನಹಳ್ಳಿ ರಸ್ತೆ ಮಾರ್ಗದ ರೆಡ್ಡಿಹಳ್ಳಿ, ಗೋಪನಹಳ್ಳಿ, ಚಿಕ್ಕನಹಳ್ಳಿ, ಯಲಗಟ್ಟಿ, ಕೋನಿಗರಹಳ್ಳಿ, ಗೋಸಿಕೆರೆ ಕಾವಲ್, ಗೋಸಿಕೆರೆ, ಚಿಕ್ಕಚೆಲ್ಲೂರು (ಜಿಲ್ಲಾ ಮುಖ್ಯ ರಸ್ತೆ) ಕಿ.ಮೀ 18.00 ರಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ರೂ. 4,000 ಲಕ್ಷ ಅಂದಾಜು ವೆಚ್ಚದ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ತಿಳಿಸಿದರು.
2025–26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಸೇತುವೆಗಳ ದುರಸ್ತಿ ಹಾಗೂ ಪುನರ್ ನಿರ್ಮಾಣಕ್ಕಾಗಿ ರೂ. 1,000 ಕೋಟಿ ಯೋಜನೆ ಘೋಷಿಸಲಾಗಿದ್ದು, ಸರ್ಕಾರದ ಆದೇಶ ಸಂಖ್ಯೆ ಲೋಇ 434 ಸಿಆರ್‌ಎಂ 2025 (ಇ) ದಿನಾಂಕ 22-11-2025 ರನ್ವಯ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯ ಸೇತುವೆಗಳ ಪುನರ್ ನಿರ್ಮಾಣ ಮತ್ತು ಪುನಶ್ಚೇತನ ಕಾಮಗಾರಿಗಳನ್ನು ರೂ. 2,000 ಕೋಟಿ ವೆಚ್ಚದಲ್ಲಿ ಹಂತ ಹಂತವಾಗಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.
ಅದರಂತೆ, ಚಳ್ಳಕೆರೆ ತಾಲ್ಲೂಕಿನ ಪ್ರಸ್ತಾಪಿತ ಸೇತುವೆಗಳ ನಿರ್ಮಾಣವನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
About The Author
Discover more from JANADHWANI NEWS
Subscribe to get the latest posts sent to your email.