September 16, 2025
1758029263693.jpg




ಚಿತ್ರದುರ್ಗ  ಸೆ.16:
ನಕಲಿ ವೈದ್ಯರ ಪತ್ತೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿನ ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆಯಡಿ, ಪ್ರತಿ ತಾಲ್ಲೂಕಿನಲ್ಲಿಯೂ ಪ್ರತ್ಯೇಕ ಜಾರಿ ತಂಡಗಳನ್ನು ರಚಿಸಿ ನಕಲಿ ವೈದ್ಯರ ಪತ್ತೆಗೆ ಶೋಧನೆ ನಡೆಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಕೆ.ಪಿ.ಎಂ.ಇ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಅಧಿನಿಯಮ) ಕುರಿತು ಜರುಗಿದ ಜಿಲ್ಲಾ ಮಟ್ಟದ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಅರ್ಹ ವಿದ್ಯಾರ್ಹತೆ ಮತ್ತು ಅಧಿಕೃತ ನೋಂದಣಿ ಇಲ್ಲದೆ ವೈದ್ಯ ವೃತ್ತಿ ನಡೆಸುತ್ತಿರುವ ನಕಲಿ ವೈದ್ಯರನ್ನು ಪತ್ತೆ ಹಚ್ಚಿ, ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ನಕಲಿ ವೈದ್ಯರು ಹೆಚ್ಚು ಇರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಈ ಹಿನ್ನಲೆಯಲ್ಲಿ ಪ್ರತಿ ತಾಲ್ಲೂಕು ಹಂತದಲ್ಲಿ ತನಿಖೆಗೆ ಉಪ ಸಮಿತಿ ರಚಿಸಬೇಕು. ದಾಳಿ ನಡೆಸುವ ಮೂಲಕ ದಾಖಲೆಗಳನ್ನು ಪರಿಶೀಲಿಸಬೇಕು. ವಿಶೇಷ ಕಾರ್ಯಪಡೆಯ ಮಾಸಿಕ ವರದಿಯನ್ನು ಕಾಲ ಕಾಲಕ್ಕೆ ಸರ್ಕಾರಕ್ಕೆ ಸಲ್ಲಿಸಬೇಕು. ಈಗಾಗಲೇ ಜಿಲ್ಲೆಯಾದ್ಯಂತ ನೊಂದಣಿಯಾಗಿರುವ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳು ಕೆ.ಪಿ.ಎಂ.ಇ ಕಾಯ್ದೆ ಪ್ರಕಾರ ಪಡೆದುಕೊಂಡ ದಾಖಲೆಗಳನ್ನು ಜಿಲ್ಲಾ ಮಟ್ಟದ ಪ್ರಾಧಿಕಾರಕ್ಕೆ ಸಲ್ಲಿಸಲು ಆರೋಗ್ಯ ಇಲಾಖೆಯಿಂದ ಸಂಬಂಧಪಟ್ಟವರಿಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಖಾಸಗಿ ವೈದ್ಯಕೀಯ ಸಂಸ್ಥೆಗಳ ಸ್ಥಳ ಪ್ರವೇಶ ಮತ್ತು ಪರಿಶೀಲನೆ ಮಾಡುವ ಜಿಲ್ಲಾ ಮಟ್ಟದ ಪ್ರಾಧಿಕೃತ ಅಧಿಕಾರಿಗಳ ತಂಡದಲ್ಲಿ ದಂತ ಹಾಗೂ ಆಯುಷ್ಯ ವೈದ್ಯಾಧಿಕಾರಿಗಳನ್ನು ನೇಮಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಎರಡು ವರ್ಷ ದಾಖಲೆಗಳ ನಿರ್ವಹಣೆ ಸೂಚನೆ :


2007ರ ಕೆ.ಪಿ.ಎಂ.ಇ ಕಾಯ್ದೆ ಪ್ರಕಾರ ಖಾಸಗಿ ಆಸ್ಪತ್ರೆಗಳು ಒಳರೋಗಿಗಳಿಗೆ ನೀಡಿದ ಚಿಕಿತ್ಸೆಯ ದಾಖಲೆಗಳನ್ನು ಎರಡು ವರ್ಷಗಳ ಕಾಲ ನಿರ್ವಹಣೆ ಮಾಡುವುದು ಕಡ್ಡಾಯವಾಗಿದೆ. ತಪ್ಪದೇ ಇದರ ಪಾಲನೆಯಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.
ಖಾಸಗಿ ವೈದ್ಯಕೀಯ ಸಂಸ್ಥೆಯು ತನ್ನ ರಕ್ಷಣೆಯಲ್ಲಿರುವ ರೋಗಿಗಳಿಗೆ ಸಂಬಂಧಿಸಿದ ವೈದಕೀಯ ದಾಖಲೆಗಳನ್ನು ನಿಯಮಿತ ರೀತಿಯಲ್ಲಿ ನಿರ್ವಹಿಸಬೇಕು. ಈ ದಾಖಲೆಗಳನ್ನು ಜಿಲ್ಲಾ ಸರ್ಜನ್ ಪರಿಶೀಲಿಸಲು ಮುಕ್ತವಾಗಿರಿಸಬೇಕು. ರೋಗಿ ಅಥವಾ ಅವನ ಕುಟುಂಬದ ಸದಸ್ಯರು ವೈದ್ಯಕೀಯ ದಾಖಲೆಗಳನ್ನು ಪಡೆಯಲು ಹಕ್ಕುವುಳ್ಳರಾಗಿರುತ್ತಾರೆ. ಖಾಸಗಿ ಆಸ್ಪತ್ರೆಗಳು ಡಿಜಿಟಲ್ ರೂಪದಲ್ಲಿ ವೈದಕೀಯ ದಾಖಲೆಗಳನ್ನು ಶೇಖರಿಸಿಡಲು ಸಂಗ್ರಹಣ ಸಾಮಥ್ರ್ಯ ಹೆಚ್ಚಿಸಿಕೊಳ್ಳಬೇಕು ಎಂದು ಟಿ.ವೆಂಕಟೇಶ್ ತಿಳಿಸಿದರು.
ಅಗ್ನಿ ಸುರಕ್ಷತಾ ಪ್ರಮಾಣ ಕಡ್ಡಾಯ ಶಿಫಾರಸ್ಸು :


ವಾಣಿಜ್ಯ ಸಂಕೀರ್ಣ ಕಟ್ಟಡಗಳಿಗೆ ಸಂಬಂಧಪಟ್ಟ ಮಾಲೀಕರು ಅಗ್ನಿ ಸುರಕ್ಷತಾ ಪ್ರಮಾಣ ಪತ್ರವನ್ನು ಪಡೆಯುವುದು ಕಡ್ಡಾಯವಾಗಿದ್ದು, ಇದರ ನಂತರವೇ ನಗರಸಭೆ ಅಥವಾ ಸ್ಥಳೀಯ ಸಂಸ್ಥೆಗಳು ಇ ಸ್ವತ್ತು ವಿತರಿಸಬೇಕು. ಇದು ಆಸ್ಪತ್ರೆ ಕಟ್ಟಡಗಳಿಗೂ ಅನ್ವಯವಾಗುತ್ತದೆ. ಈ ಕುರಿತು ಜಿಲ್ಲಾ ಮಟ್ಟದ ಪ್ರಾಧಿಕಾರದಿಂದ ನಗರ, ಸ್ಥಳೀಯ ಸಂಸ್ಥೆಗಳಿಗೆ ಶಿಫಾರಸ್ಸು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕೆ.ಪಿ.ಎಂ.ಇ ಆನ್‍ಲೈನ್ ತಂತ್ರಾಂಶದಲ್ಲಿ ಹೊಸದಾಗಿ ಹಾಗೂ ನವೀಕರಣಕ್ಕಾಗಿ ಸ್ವೀಕೃತಗೊಂಡ ಅರ್ಜಿಗಳ ವಿವರಗಳ ಕುರಿತು ಚರ್ಚಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಜಿಲ್ಲಾ ಐ.ಎಂ.ಎ ಅಧ್ಯಕ್ಷ ಡಾ.ಪಾಲಕ್ಷಯ್ಯ, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಕಾಶಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ ನಾಗಸಮುದ್ರ, ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಖಾ, ಜಿಲ್ಲಾ ಸಮಿತಿಯ ನಾಮನಿರ್ದೇಶಿತ ವಕೀಲ ಉಮೇಶ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್ ಸೇರಿದಂತೆ ಮತ್ತಿತರರು ಇದ್ದರು.

========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading