September 16, 2025
1758019871684.jpg




ಚಿತ್ರದುರ್ಗ  ಸೆ.16:
ನೈರ್ಮಲ್ಯ ಮತ್ತು ಶುಚಿತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು “ಸ್ವಚ್ಛತಾ ಹೀ ಸೇವಾ-ಸ್ವಚ್ಛತೆಯೇ ಸೇವೆ ಪಾಕ್ಷಿಕ-2025” ಅಭಿಯಾನದ ಅಂಗವಾಗಿ ಇದೇ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 02 ರವರೆಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರ್ಯಕ್ರಮ, ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್.ಆಕಾಶ್ ತಿಳಿಸಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಅಕ್ಟೋಬರ್ 02ರಂದು ಸ್ವಚ್ಛ ಭಾರತ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಸ್ವಚ್ಛತೆಗಾಗಿ ಸ್ವಯಂ ಪ್ರೇರಣೆ ಮತ್ತು ಸಾಮೂಹಿಕ ಶ್ರಮದಾನ ಚಟುವಟಿಕೆಗಳನ್ನು ಹಮ್ಮಿಕೊಂಡು ಸಮುದಾಯದಲ್ಲಿ ಸ್ವಚ್ಛತೆಯ ಆಶಯಗಳನ್ನು ಬಲಪಡಿಸಲು 2017 ರಿಂದ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಆಂದೋಲನ ಆಚರಿಸಲಾಗುತ್ತಿದೆ.
ಸ್ವಚ್ಛತೆಯೇ ಸೇವೆ ವಿಶೇಷ ಪಾಕ್ಷಿಕ ಆಚರಣೆ ಪ್ರಯುಕ್ತ ಗ್ರಾಮ ಪಂಚಾಯಿತಿ ಹಂತದಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಸೆ.17ರಂದು ಜಿಲ್ಲಾ ಮಟ್ಟದಲ್ಲಿ ಸ್ವಚ್ಛತೆಯ ಸೇವೆ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ರಚಿಸಿ, ಅಭಿಯಾನದ ಮೇಲ್ವಿಚಾರಣೆ ಮತ್ತು ದೈನಂದಿನ ವರದಿಗಳನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲು ಕ್ರಮವಹಿಸುವುದು. ಸ್ವಚ್ಛತಾ ಗುರಿ ಘಟಕಗಳ ಪರಿವರ್ತನೆ-ಬೃಹತ್ ಕಸ ರಾಶಿ ಹೊಂದಿರುವ ಸ್ಥಳಗಳು ಮತ್ತು ಕೊಳಕು ಸ್ಥಳಗಳನ್ನು ಗುರುತಿಸಿ, ಅವುಗಳನ್ನು ಸ್ವಚ್ಛಗೊಳಿಸುವುದು. ಸಾರ್ವಜನಿಕ ಸ್ಥಳಗಳ ಸ್ವಚ್ಛತ-ಜನಸಂದಣಿ ಹೆಚ್ಚಿರುವ ಸ್ಥಳಗಳು ಮತ್ತು ವಿವಿಧ ಸಂಸ್ಥೆಗಳ ಆವರಣಗಳಲ್ಲಿ ಶುಚಿತ್ವವನ್ನು ಸುಧಾರಿಸಲು ಸ್ವಚ್ಛತಾ ಶ್ರಮದಾನಗಳನ್ನು ಹಮ್ಮಿಕೊಳ್ಳಲಾಗುವುದು. ಸಫಾಯಿ ಮಿತ್ರ ಸುರಕ್ಷಾ ಶಿಬಿರಗಳು-ನೈರ್ಮಲ್ಯ ಕಾರ್ಯಕರ್ತರಿಗೆ ಆರೋಗ್ಯ ತಪಾಸಣೆ ಮತ್ತು ಸರ್ಕಾರಗಳ ವತಿಯಿಂದ ಜಾರಿ ಮಾಡಿರುವ ವಿವಿಧ ಜನ ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಏಕಗವಾಕ್ಷಿ ಶಿಬಿರಗಳನ್ನು ಆಯೋಜಿಸುವುದು. ಸ್ವಚ್ಛ ಹಸಿರು ಉತ್ಸವ- ಪರಿಸರ ಸ್ನೇಹಿ ಮತ್ತು ತ್ಯಾಜ್ಯ ರಹಿತ ಹಬ್ಬಗಳ ಆಚರಣೆ ಪ್ರೋತ್ಸಾಹಿಸುವುದು. ಸ್ವಚ್ಛ ಸುಜಲ ಗ್ರಾಮ, ತ್ಯಾಜ್ಯದಿಂದ ಕಲಾಕೃತಿಗಳ ರಚನೆ, ಸ್ವಚ್ಛ ಬೀದಿ, ಸ್ವಚ್ಛ ಆಹಾರ ಮತ್ತು ರೆಡ್ಯೂಸ್, ರಿಯೂಸ್, ರಿಸೈಕಲ್ ಮುಂತಾದ ಉಪಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು.
ಸೆ.25ರಂದು ಒಂದು ದಿನ, ಒಂದು ಗಂಟೆ ಎಲ್ಲರೂ ಒಟ್ಟಿಗೆ ಶ್ರಮದಾನ:
ಹಿಂದಿನ ವರ್ಷಗಳಂತೆ ಕೋಟ್ಯಂತರ ಜನರು ಸ್ವಯಂ ಪ್ರೇರಿತರಾಗಿ ಲಕ್ಷಾಂತರ ಸ್ಥಳಗಳಲ್ಲಿ ಒಂದು ಗಂಟೆ ಸ್ವಚ್ಛತಾ ಸೇವೆಗೆ ಕೊಡುಗೆ ನೀಡಿದಂತೆ ಈ ವರ್ಷವೂ ಕೂಡ ಒಂದು ದಿನ, ಒಂದು ಗಂಟೆ, ಎಲ್ಲರೂ ಒಟ್ಟಿಗೆ ಶ್ರಮದಾನ, “ಏಕ್ ದಿನ್, ಏಕ್ ಘಂಟಾ, ಏಕ್ ಸಾಥ್” ಎಂಬ ಘೋಷ ವಾಕ್ಯದಡಿ ಸೆ.25ರಂದು ಸಾಮೂಹಿಕ ಶ್ರಮದಾನವನ್ನು ಏಕಕಾಲದಲ್ಲಿ ಹಮ್ಮಿಕೊಳ್ಳಲಾಗುವುದು. ಸ್ವಚ್ಛತೆಗಾಗಿ ನಾಗರಿಕರು ಕೈಜೋಡಿಸಲು ಇದು ಒಂದು ಸಹಕಾರಿಯಾಗಲಿದೆ.
ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಅಭಿಯಾನದ ಅವಧಿಯಲ್ಲಿ ಹಮ್ಮಿಕೊಳ್ಳುವ ಎಲ್ಲಾ ಚಟುವಟಿಕೆಗಳನ್ನು ಎಸ್‍ಹೆಚ್‍ಎಸ್-2025ರ ವಿಶೇಷವಾಗಿ ರಚಿಸಲಾದ ಐಟಿ ಫೋರ್ಟಲ್‍ನಲ್ಲಿ ಆಪ್‍ಲೋಡ್ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ವಚ್ಛತಾ ಅಭಿಯಾನದಲ್ಲಿ ನಾಗರೀಕರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ಸ್ಥಳೀಯ ಸಂಸ್ಥೆಗಳು, ರಾಜಕೀಯ ನಾಯಕರು, ಸೆಲೆಬ್ರಿಟಿಗಳು, ಪ್ರಭಾವಿಗಳು ಮತ್ತು ಆಧ್ಯಾತ್ಮಿಕ ನಾಯಕರನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಖಾಸಗಿ ವಲಯ, ಎನ್‍ಜಿಓಗಳು ಮತ್ತು ಇತರ ಪಾಲುದಾರರ ಸಹಭಾಗಿತ್ವವನ್ನು ಉತ್ತೇಜಿಸುವುದು. ಪರಿಸರ ಸ್ನೇಹಿ ಹಬ್ಬಗಳ ಆಚರಣೆಗೆ ಸ್ಥಳೀಯ ಸಂಘಟನೆಗಳೊಂದಿಗೆ ಕೈಜೋಡಿಸುವುದು. ಪ್ರವಾಹ ಅಥವಾ ಇತರೆ ನೈಸರ್ಗಿಕ ವಿಕೋಪಗಳಿಂದ ಪೀಡಿತವಾಗಿರುವ ಪ್ರದೇಶಗಳಲ್ಲಿ ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ನೈರ್ಮಲ್ಯ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಪರಿಹಾರ ಕಾರ್ಯಗಳೊಂದಿಗೆ ಅವುಗಳನ್ನು ಸಂಯೋಜಿಸಲು ಕ್ರಮವಹಿಸುವುದು.

ಸ್ವಚ್ಛತಾ ಹೀ ಸೇವಾ ಅಭಿಯಾನ ಯಶಸ್ವಿಗೊಳಿಸಲು ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರಿಯಾಶೀಲ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್.ಆಕಾಶ್ ತಿಳಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading