
ಚಿತ್ರದುರ್ಗ ಆಗಸ್ಟ್16:
ಉಳುವವೇ ಭೂಮಿ ಒಡೆಯ ಎಂಬ ಮಾದರಿಯಲ್ಲಿ, ಸರ್ಕಾರ ವಾಸಿಸುವವನೇ ಮನೆ ಒಡೆಯ ಎಂಬ ಪರಿಕಲ್ಪನೆ ರೂಪಿಸಿ ಗೊಲ್ಲರಹಟ್ಟಿಗಳಿಗೆ ಕಂದಾಯ ಗ್ರಾಮಗಳ ಮಾನ್ಯತೆ ನೀಡಿ, ಅಲ್ಲಿ ವಾಸಿಸುವ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ನೀಡುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಅಖಿಲ ಭಾರತ ಯಾದವ ಮಹಾಸಂಸ್ಥಾನ ಸುಕ್ಷೇತ್ರ ಗೊಲ್ಲಗಿರಿಯಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ಜನವಸತಿ ಇರುವ 296 ಗ್ರಾಮಗಳಿಗೆ ಕಂದಾಯ ಗ್ರಾಮದ ಮಾನ್ಯತೆ ನೀಡಲಾಗಿದೆ. ಇವುಗಳಲ್ಲಿ ವಾಸವಿದ್ದ 6,384 ಕುಟುಂಬಗಳಿಗೆ ಹಕ್ಕುಪತ್ರ ಸಹ ನೀಡಲಾಗಿದೆ. ಜನರು ಖಾಸಗಿ ಅಥವಾ ಸರ್ಕಾರಿ ಜಾಗದಲ್ಲಿ ಬಹುದಿನಗಳಿಂದ ವಾಸವಿದ್ದರೆ ಅಂತಹ ಸ್ಥಳಗಳನ್ನು ಗುರುತಿಸಿ, ತಹಶೀಲ್ದಾರ್ ಹೆಸರಿಗೆ ಮೊದಲು ನೊಂದಣಿ ಮಾಡಲಾಗುವುದು. ತದ ನಂತರ ತಹಶೀಲ್ದಾರರು ಸಂಬಂದ ಪಟ್ಟವರಿಗೆ ಅವರ ಸ್ವತ್ತುಗಳನ್ನು ನೊಂದಣಿ ಮಾಡಿಕೊಡುತ್ತಾರೆ. ಸರ್ಕಾರ ಕೇವಲ ಹಕ್ಕುಪತ್ರ ನೀಡದೇ, ಫಲಾನುಭವಿಗಳ ಹೆಸರಿನಲ್ಲಿ ನೇರವಾಗಿ ಇ-ಸ್ವತ್ತನ್ನು ಸೃಜಿಸಿ ಕೊಡುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಇ-ಸ್ವತ್ತನ್ನು ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಮುಂದುವರಿದು 190 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಗುರುತಿಸಲಾಗಿದೆ. 2026 ರಲ್ಲಿ ದೇಶಾದ್ಯಂತ ಜನಗಣತಿ ನಡೆಯಲಿದ್ದು, ಅದಕ್ಕೂ ಮುನ್ನವೇ ಇ ಸ್ವತ್ತು ವಿತರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಗೊಲ್ಲ ಸಮುದಾಯದವರದು ನೆಲ ಮೂಲದ ಸಂಸ್ಕøತಿಯಾಗಿದೆ. ಕೃಷಿ ಹಾಗೂ ಪಶುಪಾಲನೆಯ ವೃತ್ತಿ ಮಾಡುತ್ತಾ ಶ್ರಮ ಜೀವಿಗಳಾಗಿದ್ದಾರೆ. ಇದರೊಂದಿಗೆ ಮಕ್ಕಳ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರ ವಿದ್ಯಾರ್ಥಿನಿಲಯ, ವಸತಿ ಶಾಲೆಗಳನ್ನು ತೆರೆದಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಮೂಡನಂಬಿಕೆಗಳನ್ನು ಕೈ ಬಿಡಬೇಕು. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾದವಾಗಿದೆ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡಬಾರದು. ಪ್ರತಿಯೊಬ್ಬರು ಭಗವದ್ಗೀತೆ ಓದುವ ಮೂಲಕ ಶ್ರೀ ಕೃಷ್ಣನ ಬೋಧನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಯಾದವ ಮಹಾಸಂಸ್ಥಾನ ಮಠದ ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮಿ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ, ಕೃಷ್ಣ ಪರಮಾತ್ಮ ಎಲ್ಲರಿಗೂ ಗುರು, ಕೇವಲ ಯಾದವ ಜನಾಂಗಕ್ಕೆ ಸೀಮಿತವಲ್ಲ. ಇಂತಹ ಕೃಷ್ಣನಿಗೆ ಜಾತಿ ಬಂಧನದ ಸಂಕೋಲೆಯನ್ನು ತೊಡಿಸುವುದು ತರವಲ್ಲ. ನ್ಯಾಯಾಲಯಗಳಲ್ಲಿ ಇಂದಿಗೂ ಭಗವದ್ಗೀತೆ ಮೇಲೆ ಕೈ ಇರಿಸಿ ಪ್ರಮಾಣ ಮಾಡಿಸುತ್ತಾರೆ. ಕೃಷ್ಣ ಹಾಗೂ ಬಸವಣ್ಣವರ ತತ್ವಗಳಲ್ಲಿ ಸಾಮ್ಯತೆ ಇದೆ. ಎರಡರಲ್ಲೂ ವಿಧವೆ ಎನ್ನುವ ಪರಿಕಲ್ಪನೆ ಇಲ್ಲ. ಮೂಹೂರ್ತ ನೋಡಿ ಮದುವೆ ಶುಭ ಕಾರ್ಯಗಳನ್ನು ಆಯೋಜಿಸುವುದಿಲ್ಲ. ಭಗವಂತ ಅನುಕ್ಷಣ ನಮ್ಮೊಂದಿಗೆ ಇರುತ್ತಾನೆ. ಭಕ್ತಿಗೆ ಭಗವಂತ ಒಲಿಯುತ್ತಾನೆ ಎನ್ನುವುದನ್ನು ಕೃಷ್ಣ ತತ್ವ ಸಾರುತ್ತದೆ ಎಂದರು.
ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದಿನ ಅವಧಿಯಲ್ಲಿ ಶ್ರೀ ಕೃಷ್ಣ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ಆದೇಶ ಮಾಡಿದರು. ಕಾಡುಗೊಲ್ಲರ ಅಭಿವೃದ್ದಿಗಾಗಿ ನಿಗಮ ರಚನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 40ಕ್ಕೂ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದೆ. ಇಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವುದರೊಂದಿಗೆ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲಾಗುವುದು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್ ಮಾತನಾಡಿ, ಶ್ರೀ ಕೃಷ್ಣನ ಹಾಗೆ ಮಹಮದ್ ಪೈಗಂಬರರು ಸಹ ಪಶುಪಾಲನೆಗೆ ಒತ್ತು ನೀಡಿದ್ದರು. ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಶ್ರೀ ಕೃಷ್ಣ ವೃತ್ತದ ಅಭಿವೃದ್ಧಿಗೆ ಪ್ರಾಧಿಕಾರದಿಂದ ಯೋಜನೆ ರೂಪಿಸಲಾಗಿದೆ. ಯೋಜನೆ ಕಾರ್ಯಗತಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ಬೇಕಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗದ ಕಚೇರಿಗೆ ಪತ್ರ ಬರೆಯಲಾಗಿದೆ. ಅನುಮತಿ ದೊರೆತ ತಕ್ಷಣ ಕಾಮಗಾರಿ ಆರಂಭಿಸಲಾಗಿದೆ ಹೇಳಿದರು.
ಸಾಹಿತಿ ಹೆಚ್.ಆನಂದ್ ಕುಮಾರ್ ಉಪನ್ಯಾಸ ನೀಡಿ, ಶ್ರೀ ಕೃಷ್ಣ ವಿಚಾರಗಳು ಅನಂತವಾಗಿವೆ. ಭಕ್ತಿ ಅವಲೋಕನದ ಮೂಲಕ ಕೃಷ್ಣನನ್ನು ಅರಿಯಬಹುದಾಗಿದೆ. ಸೆರೆಮನೆಯ ಕತ್ತಲಲ್ಲಿ ಹುಟ್ಟಿದ ಕೃಷ್ಣ ಜಗತ್ತಿಗೆ ಬೆಳಕಾದರು. ಕೃಷ್ಣನದು ಬುಡಕಟ್ಟು ಸಂಸ್ಕøತಿಯಾಗಿದ್ದು, ಪ್ರಕೃತಿ ಹಾಗೂ ಪ್ರಾಣಿಗಳ ಜೊತೆ ಅನ್ಯೋನ್ಯ ಸಂಬಂಧವಿದೆ. ಶ್ರೀ ಕೃಷ್ಣ ಸುಧಾರಣವಾದಿಯಾಗಿದ್ದು, ಜಾಂಬವತನ ಮಗಳನ್ನು ಮದುವೆಯಾಗುವ ಮೂಲಕ ಜಾತಿ ಪದ್ದತಿಯನ್ನು ಮೀರಿದರು. ಕೃಷ್ಣ ಹುಟ್ಟುವ ಮೊದಲೇ ದೇಶದಲ್ಲಿ ಜಾತಿ ಪದ್ದತಿ ಅಸ್ತಿತ್ವದಲ್ಲಿತ್ತು. ಬಡ ಕುಚೇಲನಿಗೆ ಆತಿಥ್ಯ ನೀಡಿದ ಪ್ರಸಂಗ ಅಂತಸ್ತು, ಕುಲೀನ ಎನ್ನವ ಕಲ್ಪನೆ ಕೃಷ್ಣನಲ್ಲಿ ಇರಲಿಲ್ಲ ಎಂಬುದನ್ನು ಸಾರುತ್ತದೆ. ಶ್ರೀ ಕೃಷ್ಣ ಯಾವಾಗಲು ಬಡವರ ಪರ, ಅಸ್ತಿತ್ವವನ್ನು ಕಳೆದುಕೊಂಡ ಪಾಂಡವರ ರಕ್ಷಣೆಗೆ ಅಭಯ ನೀಡಿದರು. ದಾನವ ವಿರೋಧಿ, ಆಧ್ಯಾತ್ಮಿಕ ಚಿಂತಕ, ಆರೋಗ್ಯ ಸೂತ್ರ ಬೋಧಿಸಿದ ವೈದ್ಯ, ದ್ವಾರಕ ನಗರ ನಿರ್ಮಾತೃ ಹೀಗೆ ಶ್ರೀ ಕೃಷ್ಣ ನಾನಾ ವಿಷಯಗಳಲ್ಲಿ ಪರಿಣಿತರಾಗಿದ್ದರು ಎಂದು ತಿಳಿಸಿದರು.
ಮಾಜಿ ಶಾಸಕ ಎಸ್.ಕೆ.ಬಸವರಾಜ್ ಮಾತನಾಡಿ ಗೊಲ್ಲ ಜನಾಂಗಕ್ಕೆ ಎಸ್.ಟಿ.ಸೌಲಭ್ಯ ಸಿಗಬೇಕು ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಮಾತನಾಡಿ ಗೊಲ್ಲರಹಟ್ಟಿಗಳಲ್ಲಿ ಸರ್ಕಾರ ವತಿಯಿಂದ ಗ್ರಂಥಾಲಯಗಳನ್ನು ತೆರೆಯುವಂತೆ ಮನವಿ ಮಾಡಿದರು.
ಕೆ.ಡಿ.ಪಿ ಸದಸ್ಯ ಕೆ.ಸಿ.ನಾಗರಾಜ್ ಮಾತನಾಡಿ, ಶಾಸಕರ ಅನುದಾನದಲ್ಲಿ ಗೊಲ್ಲರಹಟ್ಟಿಗಳಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು. ಈಗಾಗಲೇ 28 ಗೊಲ್ಲರಹಟ್ಟಿಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಸೋಲಾರ್ ಬೀದಿದೀಪಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ತಿಪ್ಪೆಸ್ವಾಮಿ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಮುಖಂಡರಾದ ಲಿಂಗಾರೆಡ್ಡಿ, ಕವರಪ್ಪ ಸೇರಿದಂತೆ ಮತ್ತಿತರರು ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್ ಸ್ವಾಗತಿಸಿದರು. ಆಯೋತೋಳ ಮಾರುತೇಶ್ ಮತ್ತು ತಂಡ ಗೀತಗಾಯನ ಪ್ರಸ್ತುತ ಪಡಿಸಿದರು. ಆಕಾಶವಾಣಿಯ ಡಾ.ನವೀನ್ ಮಸ್ಕಲ್ ಕಾರ್ಯಕ್ರಮ ನಿರೂಪಿಸಿದರು.



About The Author
Discover more from JANADHWANI NEWS
Subscribe to get the latest posts sent to your email.