September 14, 2025
1755358667337.jpg


N bಚಿತ್ರದುರ್ಗಆಗಸ್ಟ್16:
ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೇವಲ ಸರ್ಕಾರದ ಕರ್ತವ್ಯ ಮಾತ್ರವಲ್ಲದೇ, ಸಾರ್ವಜನಿಕರು, ಗ್ರಾಮಸ್ಥರು, ಶಾಲೆಯಲ್ಲಿ ಓದಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವೈಯಕ್ತಿಕ ಕರ್ತವ್ಯವೂ ಹೌದು. ಶಿಕ್ಷಣಕ್ಕೆ ಒತ್ತು ನೀಡುವುದು ಸಾರ್ವಜನಿಕರ ಸಾಮಾಜಿಕ ಜವಾಬ್ದಾರಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು.
ಹಿರಿಯೂರು ತಾಲ್ಲೂಕಿನ ತಾಳವಟ್ಟಿ ಗ್ರಾಮದಲ್ಲಿ ಶನಿವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಹಾಗೂ ನೂತನ ಶಾಲಾ ಕೊಠಡಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಶತಮಾನ ಪೂರೈಸಿರುವ ತಾಳವಟ್ಟಿ ಸರ್ಕಾರಿ ಶಾಲೆಗೆ ಹಳೆಯ ವಿದ್ಯಾರ್ಥಿಗಳ ನೆರವು ಹಾಗೂ ದಾನಿಗಳ ಸಹಾಯದಿಂದ ಉತ್ತಮ ಕಾಯಕಲ್ಪ ನೀಡಿದ್ದು, ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
17 ಸಾವಿರ ಶಿಕ್ಷಕ ನೇಮಕಕ್ಕೆ ಕ್ರಮ: ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾದ ತಕ್ಷಣವೇ ಶಾಲಾ ಶಿಕ್ಷಣ ಇಲಾಖೆಗೆ 17 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮವಹಿಸಲಾಗುವುದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು.
ರಾಜ್ಯದಲ್ಲಿ 17 ಸಾವಿರ ಶಿಕ್ಷಕ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದ್ದು, ಈ ಬಾರಿಯ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಹೆಚ್ಚಿನ ಕಾಲಾವಧಿಯನ್ನು ತೆಗೆದುಕೊಳ್ಳದೇ ಕೇವಲ 3 ರಿಂದ 4 ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ನಡೆಸಿ, ಶಾಲೆಗಳಿಗೆ ಶಿಕ್ಷಕರನ್ನು ನಿಯೋಜನೆ ಮಾಡಲಾಗುವುದು ಎಂದು ಹೇಳಿದರು.
ರಾಜ್ಯ ಶಿಕ್ಷಣ ನೀತಿ (ಎಸ್‍ಇಪಿ) ಕರಡು ವರದಿ ಸಲ್ಲಿಸಲಾಗಿದ್ದು, ಅದರಲ್ಲಿರುವ ನ್ಯೂನತೆಗಳನ್ನು ಪರಿಶೀಲನೆ ನಡೆಸಲು ಉಪ ಸಮಿತಿ ರಚನೆ ಮಾಡಿ, ನಂತರ ಅಂತಿಮವಾಗಿ ಅನುಷ್ಠಾನ ಮಾಡಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಒಪ್ಪುವುದಿಲ್ಲ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಪ್ರಸ್ತುತ 307 ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷವೇ ರಾಜ್ಯ ಸರ್ಕಾರ ವತಿಯಿಂದ 500 ಕೆಪಿಎಸ್ ಶಾಲೆಗಳನ್ನು 15 ದಿನದೊಳಗಾಗಿ ಘೋಷಣೆ ಮಾಡಲಾಗುವುದು. ಇದರ ಜೊತೆಗೆ ಹೈದರಬಾದ್ ಕರ್ನಾಟಕದಲ್ಲಿ ಅಕ್ಷರ ಅವಿಷ್ಕಾರ ವತಿಯಿಂದ 100 ಕೆಪಿಎಸ್ ಶಾಲೆಗಳು ಸೇರಿದಂತೆ ಒಟ್ಟು 600 ಕೆಪಿಎಸ್ ಶಾಲೆಗಳು ಕಾರ್ಯಾರಂಭ ಮಾಡಲಿದೆ. ಒಂದು ಕೆಪಿಎಸ್ ಶಾಲೆಯಲ್ಲಿ 1200 ಮಕ್ಕಳು ಉತ್ತಮ ವಾತಾವರಣದಲ್ಲಿ ವ್ಯಾಸಂಗ ಮಾಡಬಹುದಾಗಿದ್ದು, ಖಾಸಗಿ ಶಾಲೆಗಳಿಗಿಂತ ಉತ್ತಮವಾದ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ದೊರೆಯಲಿದೆ ಎಂದು ಹೇಳಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನಕಲು ತಡೆಗಟ್ಟುವ ನಿಟ್ಟಿನಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದು, ಮಕ್ಕಳು ಸ್ವಂತ ಶಕ್ತಿ, ಸಾಮಾಥ್ರ್ಯದ ಮೇಲೆ ಉತ್ತೀರ್ಣರಾಗುವ ವ್ಯವಸ್ಥೆಗಾಗಿ ಪರೀಕ್ಷೆ-1, ಪರೀಕ್ಷೆ-2, ಪರೀಕ್ಷೆ-3 ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಮಾತನಾಡಿ, ತಾಳವಟ್ಟಿ ಗ್ರಾಮದಲ್ಲಿ ವಿಶೇಷವಾದ ಸಂಭ್ರಮ. ಗ್ರಾಮದ ಹಿರಿಯರು ಸೇರಿ ಸುಮಾರು ರೂ.1 ಕೋಟಿ ಹಾಗೂ ಸರ್ಕಾರದಿಂದ ರೂ.25 ಲಕ್ಷ ವೆಚ್ಚ ಮಾಡಿ ಶತಮಾನೋತ್ಸವ ಶಾಲಾ ಕಟ್ಟಡ ಉದ್ಘಾಟನೆ ಮಾಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆಯಾದ ಪ್ರತಿಭಾವಂತ ಶಿಕ್ಷಕರಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಾಲು, ಮೊಟ್ಟೆ, ಸಮಸ್ತ್ರ, ಶೂ ಸೇರಿದಂತೆ ಹಲವಾರು ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು.
ಹಿರಿಯೂರು ವಿಧಾನ ಕ್ಷೇತ್ರದಲ್ಲಿ ಸುಮಾರು 250 ಶಾಲಾ ತರಗತಿ ಕೊಠಡಿಗಳು, 100ಕ್ಕೂ ಹೆಚ್ಚು ಶೌಚಾಲಯ ಹಾಗೂ ಕಾಂಪೌಂಡ್‍ಗಳನ್ನು ನಿರ್ಮಾಣಕ್ಕಾಗಿ ರೂ.30 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ದಪಡಿಸಲಾಗಿದ್ದು, ಶೀಘ್ರದಲ್ಲಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಂದಲೇ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ ಅವರು, ಸಾರ್ವಜನಿಕ ಪಾಲುಗಾರಿಕೆಯಿಂದ ಶಾಲೆಗಳ ಅಭಿವೃದ್ಧಿಯಾಗಲಿದೆ. ಗ್ರಾಮಸ್ಥರ ಮನವಿಯಂತೆ ಐಮಂಗಲ ಹೋಬಳಿಯ ವ್ಯಾಪ್ತಿಯಲ್ಲಿ ಸುಮಾರು 4 ಎಕರೆ ವಿಸ್ತೀರ್ಣದಲ್ಲಿ ಕ್ರೀಡಾಂಗಣ ನಿರ್ಮಿಸಲು ಕ್ರಮವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ತಾಳವಟ್ಟಿ ಶಾಲೆ ಅನೇಕ ಹಿರಿಯರಿಗೆ ಶಿಕ್ಷಣ ಕೊಡುವುದರಲ್ಲಿ 100 ವರ್ಷಗಳ ದೊಡ್ಡ ಯಶಸ್ಸು ಕಂಡಿದೆ. ಯಶಸ್ವಿನ ಪ್ರತಿಫಲವಾಗಿ ಶತಮಾನೋತ್ಸವ ಆಚರಣೆ ಮಾಡಿ ಮಾದರಿ ಶಾಲೆಯನ್ನಾಗಿ ರೂಪಿಸಲಾಗಿದೆ ಎಂದು ತಿಳಿಸಿದ ಅವರು, ತಾಳವಟ್ಟಿ ಸರ್ಕಾರಿ ಶಾಲೆಯ ಅಭಿವೃದ್ಧಿ ಸಂಪೂರ್ಣ ಸಹಕಾರ ಹಾಗೂ ಅಗತ್ಯ ಅನುದಾನವನ್ನೂ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಶಾಲಾ ಶಿಕ್ಷಣ ಉಪನಿರ್ದೇಶಕರಾದ ಎಂ.ಆರ್.ಮಂಜುನಾಥ್, ನಾಸಿರುದ್ದೀನ್, ತಹಶೀಲ್ದಾರ್ ಸಿದ್ದೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಶಾಲಾ ಪುನಃಶ್ಚೇತನ ಮತ್ತು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಡಾ. ವಿ.ವೀರಭದ್ರಯ್ಯ, ಗೌರವಾಧ್ಯಕ್ಷ ಎ.ಚಂದ್ರಾರೆಡ್ಡಿ, ಕಾರ್ಯಾಧ್ಯಕ್ಷ ಜಲೀಲ್ ಸಾಬ್, ವಿಶ್ವ ಮಾನವ ಸಾಂಸ್ಕøತಿಕ ಮತ್ತು ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ನೀಲಕಂಠದೇವ, ಸಮಿತಿಯ ಲಕ್ಷ್ಮಿಕಾಂತ್ ಸೇರಿದಂತೆ ಮತ್ತಿತರರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading