
ಚಿತ್ರದುರ್ಗಏ.16:
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಯಿಂದಾಗಿ ಹಾನಿಗೊಳಗಾದ ಬೆಳೆಹಾನಿ ಪ್ರದೇಶಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ ನಿಖರ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಬೆಳೆಹಾನಿ ಹಾಗೂ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಮಳೆಹಾನಿ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸುತ್ತಿಲ್ಲ ಎಂದು ರೈತರು ದೂರುತ್ತಿದ್ದು, ಬೆಳೆಹಾನಿ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸದ ಅಧಿಕಾರಿಗಳ ಅಮಾನತಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.
ಹೊಳಲ್ಕೆರೆ ತಾಲ್ಲೂಕಿನಲ್ಲಿ 25 ಎಕೆರೆ ಅಡಿಕೆ ಬೆಳೆ, 15 ಎಕರೆ ಮಾವು, ಹಾಗೂ 03 ಎಕರೆ ಬಾಳೆ ಬೆಳೆ ಹಾನಿಯಾಗಿವೆ. ಚಳ್ಳಕೆರೆ ತಾಲ್ಲೂಕಿನಲ್ಲಿ 120 ಎಕರೆ ಪಪ್ಪಾಯಿ ಬೆಳೆ ಹಾಗೂ 8.30 ಎಕರೆ ಕೃಷಿ ಬೆಳೆಗಳು ಹಾನಿಯಾಗಿವೆ. ಚಿತ್ರದುರ್ಗ ತಾಲ್ಲೂಕಿನ ವಿ.ಪಾಳ್ಯ, ನಲ್ಲೆಕಟ್ಟೆ ಗ್ರಾಮಗಳಲ್ಲಿ ಅಡಿಕೆ ಬೆಳೆ ಹಾಗೂ ಪಪ್ಪಾಯಿ ಬೆಳೆ ಹಾನಿಯಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ ಒಂದು ಜಾನುವಾರು ಮೃತಪಟ್ಟಿದೆ. ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಮನೆಯ ಮೇಲ್ಛಾವಣೆಯು ಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 4.20 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 1 ಹೆಕ್ಟೇರ್ ಕೃಷಿ ಹಾಗೂ 1 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿ ಹಾಗೂ ಒಂದು ಜಾನುವಾರು ಮೃತಪಟ್ಟಿದೆ, 06 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ತಹಶೀಲ್ದಾರ್‍ಗಳು ಸಭೆಗೆ ಮಾಹಿತಿ ನೀಡಿದರು.
ಬೆಳೆಹಾನಿಗೆ ಸಂಬಂಧಿಸಿದಂತೆ ಎಲ್ಲ ವರದಿಯನ್ನು ಸಿದ್ದತೆ ಮಾಡಿಟ್ಟುಕೊಂಡು, ಪರಿಹಾರ ಸಾಫ್ಟವೇರ್ ಓಪನ್ ಆದ ತಕ್ಷಣ ಎಂಟ್ರಿ ಮಾಡಬೇಕು. ನಿಯಮಾನುಸಾರ ಪರಿಹಾರ ವಿತರಣೆಗೆ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಬಸನಗೌಡ ಪಾಟೀಲ್ ಮಾತನಾಡಿ, ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರಸ್ತುತ 7 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸಮಸ್ಯೆ ಉದ್ಭವಿಸುವ ಸಮಸ್ಯೆಯಾತ್ಮಕ ಗ್ರಾಮಗಳ ನಿಖರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್ ಖುರೇಷಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಬಸನಗೌಡ ಪಾಟೀಲ್ ಸೇರಿದಂತೆ ತಹಶೀಲ್ದಾರ್‍ಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

About The Author
Discover more from JANADHWANI NEWS
Subscribe to get the latest posts sent to your email.