March 16, 2026
IMG-20260316-WA0260.jpg

ನಾಯಕನಹಟ್ಟಿ: ಮಧ್ಯ ಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ನಮ್ಮ ದೇಶದ ರೈತರಿಗೆ ಸಹ ತಟ್ಟಿದ್ದು, ಕಲ್ಲಂಗಡಿ, ಕರಬೂಜ, ಟೊಮೇಟೊ ಸೇರಿದಂತೆ ಹಣ್ಣಿನ ಬೆಳೆಗಳಿಗೆ ಬೆಲೆ ಕುಸಿತ ಉಂಟಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕರ್ನಾಟಕದಲ್ಲಿ ಕಲ್ಲಂಗಡಿ ಹಾಗೂ ಕರಬೂಜ ಹಣ್ಣಿನ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೆ ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಬಿತ್ತನೆ ಮಾಡಿದ ನಂತರ ಉತ್ತಮವಾಗಿ ಬೆಳೆದ ಬೆಳೆಯು ಸುಮಾರು 45 ದಿನಗಳ ನಂತರ ವೈರಸ್ ಹಾಗೂ ವಿಲ್ಟ್ (ಬಳ್ಳಿ ಒಣಗುವ ರೋಗ) ಗೆ ತುತ್ತಾಗುತ್ತಿದ್ದು ರೈತರಿಗೆ ಮತ್ತಷ್ಟು ನಷ್ಟ ಉಂಟಾಗಿದೆ.
ಈ ಹಿಂದೆ ಕಲ್ಲಂಗಡಿ ಮತ್ತು ಕರಬೂಜ ಹಣ್ಣುಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ವಿಶೇಷವಾಗಿ ಮಧ್ಯ ಪ್ರಾಚ್ಯ ದೇಶಗಳಿಗೆ ದೆಹಲಿ ಮಾರುಕಟ್ಟೆಯ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗುತ್ತಿತ್ತು. ಯುದ್ಧದ ಮುನ್ನ ವ್ಯಾಪಾರಸ್ಥರು ರೈತರ ಹೊಲಗಳಿಗೆ ಬಂದು ಕಲ್ಲಂಗಡಿಯನ್ನು ಕಿಲೋಗೆ ₹22 ರಿಂದ ₹25 ರವರೆಗೆ ಖರೀದಿ ಮಾಡುತ್ತಿದ್ದರು. ಆದರೆ ಈಗ ಇರಾನ್–ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ರಫ್ತು ಸ್ಥಗಿತಗೊಂಡಿದ್ದು, ವ್ಯಾಪಾರಸ್ಥರು ಕೇವಲ ₹4 ರಿಂದ ₹5 ರವರೆಗೆ ಮಾತ್ರ ಖರೀದಿ ಮಾಡುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ನಾಯಕನಹಟ್ಟಿ ಹೋಬಳಿಯ ಬೋಸೆದೇವರಹಟ್ಟಿ, ಎನ್. ಮಹದೇವಪುರ, ತಿಮ್ಮಪ್ಪಯ್ಯನಹಳ್ಳಿ, ಮಲ್ಲೂರಹಳ್ಳಿ, ನಲಗೇತನಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಲ್ಲಂಗಡಿ, ಕರಬೂಜ ಮತ್ತು ಟೊಮೇಟೊ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೆ ಕಲ್ಲಂಗಡಿ ಬೆಳೆ ರೋಗಕ್ಕೆ ತುತ್ತಾಗಿ ನಾಶವಾಗುತ್ತಿದ್ದರೂ ಈವರೆಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಇದೇ ವೇಳೆ ತೋಟಗಾರಿಕೆ ಇಲಾಖೆ ರೈತರ ಪರವಾಗಿ ಕೆಲಸ ಮಾಡದೇ, ಡ್ರಿಪ್ ಕಂಪನಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಹನಿ ನೀರಾವರಿ ಯೋಜನೆಗೆ ಸಬ್ಸಿಡಿ ಪಡೆಯಲು ರೈತರು ತಮ್ಮ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಿದರೂ ಅವುಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಆದರೆ ಡ್ರಿಪ್ ಕಂಪನಿಗಳ ಏಜೆನ್ಸಿಗಳು ನೀಡುವ ದಾಖಲೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಇಲಾಖೆ ಯಾರ ಪರವಾಗಿ ಕೆಲಸ ಮಾಡುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ರೈತ ಮುಖಂಡ ಪಿ.ಬಿ. ರಂಗಸ್ವಾಮಿ (ಬೋಸೆದೇವರಹಟ್ಟಿ) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಸ್ ಹಾಗೂ ವಿಲ್ಟ್ ರೋಗದ ಪರಿಣಾಮ ಕಲ್ಲಂಗಡಿ ಬೆಳೆಗಳಲ್ಲಿ ಬಳ್ಳಿಗಳು ಒಣಗಿ ಹೋಗುತ್ತಿವೆ. ಸಾಮಾನ್ಯವಾಗಿ 60 ರಿಂದ 70 ದಿನಗಳೊಳಗೆ ಹಣ್ಣುಗಳನ್ನು ಕಟಾವು ಮಾಡಬೇಕಾಗುತ್ತದೆ. ಆದರೆ ಯುದ್ಧದ ಪರಿಣಾಮ ವ್ಯಾಪಾರಸ್ಥರು ಖರೀದಿಗೆ ಮುಂದೆ ಬರದೇ ಇರುವುದರಿಂದ ರೈತರಿಗೆ ದಿಕ್ಕುತೋಚದ ಪರಿಸ್ಥಿತಿ ನಿರ್ಮಾಣವಾಗಿದೆ.
ಚಳ್ಳಕೆರೆ ತೋಟಗಾರಿಕೆ ಇಲಾಖೆಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಆಗ್ರಹಿಸಿದ್ದಾರೆ.

ಕಲ್ಲಂಗಡಿ ಬೆಳೆ ರೋಗಕ್ಕೆ ತುತ್ತಾಗಿ ಹಾಳಾಗುತ್ತಿದ್ದರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ನೆರವಿಗೆ ಬರದೇ ಇರುವುದು ವಿಪರ್ಯಾಸಕರವಾಗಿದೆ. ರೈತರ ಪರ ಕೆಲಸ ಮಾಡುವ ಬದಲು ಡ್ರಿಪ್ ಏಜೆನ್ಸಿಗಳ ಪರವಾಗಿ ಕೆಲಸ ಮಾಡುತ್ತಿರುವುದು ಬೇಸರ ತಂದಿದೆ ಎಂದು ಕಲ್ಲಂಗಡಿ ಬೆಳೆಗಾರ ಪಿ.ಬಿ. ರಂಗಸ್ವಾಮಿ (ಬೋಸೆದೇವರಹಟ್ಟಿ) ಆರೋಪಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading