ಚಿತ್ರದುರ್ಗ ಫೆ.16:
ಅಸಂಘಟಿತ ವಲಯದ ಕಾರ್ಮಿಕರಿಗೆ ನಿಶ್ಚಿತ ಪಿಂಚಣಿ ದೊರೆಯುವ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯಡಿ ಜಿಲ್ಲೆಯ ಹೆಚ್ಚಿನ ಕಾರ್ಮಿಕರನ್ನು ನೋಂದಾಯಿಸಲು ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಿಎಂ ಶ್ರಮಯೋಗಿ ಮಾನ್‍ಧನ್ ಯೋಜನೆ ಅನುಷ್ಠಾನ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅಸಂಘಟಿತ ವಲಯದಲ್ಲಿ ಸುಮಾರು 3.20 ಲಕ್ಷ ಕಾರ್ಮಿಕರು ಇದ್ದು, ಇದುವರೆಗೂ ಈ ಯೋಜನೆಯಡಿ ಕೇವಲ 7500 ಕಾರ್ಮಿಕರು ನೊಂದಾಯಿಸಿಕೊಂಡಿರುವುದು ಬೇಸರದ ಸಂಗತಿಯಾಗಿದೆ. 18 ರಿಂದ 40 ವರ್ಷ ವಯೋಮಿತಿಯೊಳಗಿನ ಅಸಂಘಟಿತ ವಲಯದ ಕಾರ್ಮಿಕರು ಈ ಯೋಜನೆಯಡಿ ನೊಂದಾಯಿಸಲು ಅರ್ಹರಿದ್ದು, ಇಂತಹ ದುಡಿಮೆಯ ವರ್ಗ ತಮ್ಮ ಜೀವನ ಸಂಧ್ಯಾಕಾಲದಲ್ಲಿ ದುಡಿದು ತಮ್ಮನ್ನು ಪೋಷಿಸಿಕೊಳ್ಳಲು ಯಾವುದೇ ಆರ್ಥಿಕ ಮೂಲ ಹೊಂದಿರುವುದಿಲ್ಲ. ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಸಾಮಾಜಿಕ ಭದ್ರತೆಯನ್ನು ಪಿಎಂ ಶ್ರಮಯೋಗಿ ಮಾನ್‍ಧನ್ ಯೋಜನೆ ನೀಡಲಿದೆ. ಜಿಲ್ಲೆಯಲ್ಲಿ ಅಂಗನವಾಡಿಗಳ 5000 ಕ್ಕಿಂತ ಹೆಚ್ಚಿನ ಸಿಬ್ಬಂದಿಗಳು, 1380 ಆಶಾ ಕಾರ್ಯಕರ್ತೆಯರು, 4800 ರಷ್ಟು ನೇಕಾರರು, 4138 ಬಿಸಿಯೂಟ ತಯಾರಿ ಸಿಬ್ಬಂದಿಗಳು, 2650 ಮೀನುಗಾರರು, ನೀರುಗಂಟಿಗಳು, ಹಮಾಲರು, ಸ್ವಚ್ಛತೆಗಾರರು ಹೀಗೆ ಸಾವಿರಾರು ಸಂಖ್ಯೆಯಲ್ಲಿರುವ ಸಿಬ್ಬಂದಿಗಳು ಜಿಲ್ಲೆಯಲ್ಲಿದ್ದು, ಇವರೆಲ್ಲರನ್ನೂ ಕೂಡ ಈ ಯೋಜನೆಯ ವ್ಯಾಪ್ತಿಗೆ ತರಲು ಆಯಾ ಇಲಾಖಾ ಅಧಿಕಾರಿಗಳು ಶ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಯೋಜನೆಗೆ ಅರ್ಹರು : 18 ರಿಂದ 40 ವರ್ಷ ವಯೋಮಿತಿಯೊಳಗಿರುವ ಅಸಂಘಟಿತ ವಲಯದ ಎಲ್ಲ ಕಾರ್ಮಿಕರು ಯೋಜನೆಗೆ ನೊಂದಾಯಿಸಲು ಅರ್ಹರು. ಇದರಲ್ಲಿ ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿಬ್ಬಂದಿ, ಹಮಾಲಿಗಳು, ಚಮ್ಮಾರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಕೃಷಿ ಕಾರ್ಮಿಕರು, ಕಟ್ಟಡ, ಬೀಡಿ, ಕೈಮಗ್ಗ, ಚರ್ಮೋದ್ಯಮ, ಇಟ್ಟಿಗೆಭಟ್ಟಿ, ಧ್ವನಿ ಮತ್ತು ದೃಶ್ಯ ಕಾರ್ಮಿಕರು ಅಲ್ಲದೆ ಇದೇ ರೀತಿಯ ಇತರೆ ವೃತ್ತಿಯಲ್ಲಿ ದುಡಿಯುವ ವರ್ಗದವರೆಲ್ಲರೂ ಈ ಯೋಜನೆ ವ್ಯಾಪ್ತಿಗೆ ಸೇರಲು ಅರ್ಹರಿದ್ದಾರೆ. ಮಾಸಿಕ ಆದಾಯ 15 ಸಾವಿರ ರೂ. ಗಿಂತ ಕಡಿಮೆ ಇರಬೇಕು. ಆದಾಯ ತೆರಿಗೆ, ಇಎಸ್‍ಐ, ಪಿಎಫ್, ಎನ್‍ಪಿಎಸ್ ಯೋಜನೆಗೆ ಒಳಪಟ್ಟಿರಬಾರದು. ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಖ್ಯೆ ಹೊಂದಿರಬೇಕು. ಇಂತಹ ಎಲ್ಲ ಕಾರ್ಮಿಕರು ನೊಂದಣಿಗೆ ಅರ್ಹರಿದ್ದಾರೆ ಎಂದು ಕಾರ್ಮಿಕ ಅಧಿಕಾರಿ ಅನಿಲ್ ಕುಮಾರ್ ಬಗಟೆ ತಿಳಿಸಿದರು.
ವಯೋಮಿತಿ ಆಧಾರದಲ್ಲಿ ವಂತಿಗೆ : 18 ರಿಂದ 40 ವರ್ಷದೊಳಗಿನ ವಯೋಮಿತಿಯ ಆಧಾರದಲ್ಲಿ ಮಾಸಿಕ ವಂತಿಗೆಯನ್ನು ನಿಗದಿಪಡಿಸಿದ್ದು, 18 ವರ್ಷದವರಿಗೆ ಮಾಸಿಕ ರೂ. 45, 40 ವರ್ಷದವರಿಗೆ ರೂ. 200, ಹೀಗೆ ಪ್ರತಿ ವಯಸ್ಸಿಗೆ ಅನುಗುಣವಾಗಿ ಮಾಸಿಕ ವಂತಿಗೆ ಹಣ ಸರ್ಕಾರ ನಿಗದಿಪಡಿಸಿದ್ದು, ಇದಕ್ಕೆ ಸಮಾನಾಂತರವಾಗಿ ಕೇಂದ್ರ ಸರ್ಕಾರವು ಕೂಡ ವಂತಿಗೆಯನ್ನು ಪಾವತಿಸಲಿದೆ. ವಂತಿಗೆ ಹಣವನ್ನು 60 ವರ್ಷ ವಯಸ್ಸಿನವರೆಗೂ ಪ್ರತಿ ಮಾಹೆ ಪಾವತಿಸಬೇಕಿದ್ದು, 60 ವರ್ಷ ಬಳಿಕ ಪ್ರತಿ ತಿಂಗಳು ರೂ. 3000 ಗಳ ನಿಶ್ಚಿತ ಪಿಂಚಣಿಯನ್ನು ಕಾರ್ಮಿಕರು ಪಡೆಯಲಿದ್ದಾರೆ. ಹೀಗಾಗಿ ವಂತಿಗೆ ಪಾವತಿಯನ್ನು ಪ್ರತಿ ತಿಂಗಳು ಕಾರ್ಮಿಕರ ಬ್ಯಾಂಕ್ ಖಾತೆಯಿಂದ ಸ್ವಯಂ ಚಾಲಿತವಾಗಿ ಪಾವತಿಯಾಗುವ ರೀತಿ ವ್ಯವಸ್ಥೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ನೊಂದಣಿ ವಿಧಾನ : ಅರ್ಹ ಅಸಂಘಟಿತ ವಲಯದ ಕಾರ್ಮಿಕರು ತಮಗೆ ಸಮೀಪದ ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ ಫಲಾನುಭವಿಯಾಗಿ ನೋಂದಾಯಿಸಬಹುದಾಗಿದ್ದು, ಕಾರ್ಮಿಕರು ತಮ್ಮೊಂದಿಗೆ ಆರಂಭಿಕ ವಂತಿಗೆ ಮೊತ್ತ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ನಾಮನಿರ್ದೇಶಿತರ ವಿವರ ಮತ್ತು ಮೊಬೈಲ್‍ನೊಂದಿಗೆ ಕಾಮನ್ ಸರ್ವಿಸ್ ಸೆಂಟರ್‍ಗೆ ತೆರಳಿ, ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸಬೇಕು. ನಂತರದ ವಂತಿಗೆಯನ್ನು ಬ್ಯಾಂಕ್ ಖಾತೆಯಿಂದ ಆಟೋ-ಡೆಬಿಟ್ ಮೂಲಕ ಕಟಾವು ಮಾಡಲಾಗುತ್ತದೆ ಎಂದು ಕಾರ್ಮಿಕ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಕಾರ್ಮಿಕ ನಿರೀಕ್ಷಕರುಗಳು, ಆರೋಗ್ಯ, ಕಾರ್ಮಿಕ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಸಮಾಜ ಕಲ್ಯಾಣ, ನಗರಾಭಿವೃದ್ಧಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಆಟೋರಿಕ್ಷಾ ಚಾಲಕರ ಸಂಘ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.
About The Author
Discover more from JANADHWANI NEWS
Subscribe to get the latest posts sent to your email.