February 16, 2026
IMG-20260216-WA0188.jpg

ಚಳ್ಳಕೆರೆ: ಆಧುನಿಕ ಯುಗದಲ್ಲಿ ಯುವ ಸಮುದಾಯ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗುತ್ತಿರುವ ಸಂದರ್ಭದಲ್ಲೇ, ಮಹಾ ಶಿವರಾತ್ರಿ ಅಂಗವಾಗಿ ಮೊಬೈಲ್‌ಗಳನ್ನು ಬದಿಗಿಟ್ಟು ಮೈದಾನಕ್ಕಿಳಿದು ಕ್ರಿಕೆಟ್ ಮೂಲಕ ಜಾಗರಣೆ ಮಾಡಿದ ಗೋಪನಹಳ್ಳಿ ಗ್ರಾಮದ ಯುವಕರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಗ್ರಾಮಸ್ಥರ ಸಹಕಾರದೊಂದಿಗೆ ಆಯೋಜಿಸಲಾದ ನಾಲ್ಕನೇ ವರ್ಷದ “ಶಿವರಾತ್ರಿ ಕಪ್” ಕ್ರಿಕೆಟ್ ಪಂದ್ಯಾವಳಿಯನ್ನು ಯುವ ಪತ್ರಕರ್ತ ದ್ಯಾಮಕುಮಾರ್ ಟಿ. ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯವಾಗಿ ಶಿವರಾತ್ರಿ ಹಬ್ಬದಂದು ರಾತ್ರಿ ಪೂಜೆ, ಭಜನೆ, ಜಪ ಮತ್ತು ಧ್ಯಾನದ ಮೂಲಕ ಶಿವನ ಆರಾಧನೆ ನಡೆಯುತ್ತದೆ. ಆದರೆ ಇಲ್ಲಿ ವಿದ್ಯುತ್ ದೀಪಗಳ ಬೆಳಕಿನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸಿ, ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಕ್ರೀಡೆಗೆ ಆದ್ಯತೆ ನೀಡಿರುವುದು ವಿಶಿಷ್ಟ ಹಾಗೂ ಮಾದರಿಯಾಗಿದೆ ಎಂದರು.
ಕ್ರೀಡೆ ಮನರಂಜನೆ ಮಾತ್ರವಲ್ಲ, ವ್ಯಕ್ತಿತ್ವ ವಿಕಾಸದ ಪ್ರಮುಖ ಸಾಧನವಾಗಿದೆ. ಶಿಸ್ತು, ಸಹನೆ, ನಾಯಕತ್ವ ಗುಣ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಶಕ್ತಿ ಕ್ರೀಡೆಗೆ ಇದೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬಹುದು. ದೈಹಿಕ ಶ್ರಮದಿಂದ ದೇಹ ಸದೃಢವಾಗಿ, ಮನಸ್ಸು ಶುದ್ಧವಾಗಿ ಆರೋಗ್ಯಕರವಾಗಿರಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕೆಆರ್‌ಎಸ್ ಪಕ್ಷದ ಮಣಿಕಂಠ ಎಸ್ ಮಾತನಾಡಿ, ಇಂದಿನ ಪ್ರಪಂಚದಲ್ಲಿ ಯುವಕರು ಆನ್‌ಲೈನ್ ಗೇಮ್‌ಗಳಿಗೆ ಹೆಚ್ಚು ಒಲವು ತೋರಿಸುತ್ತಿರುವುದು ಆತಂಕಕಾರಿ. ಆತ್ಮಸ್ಥೈರ್ಯ ವೃದ್ಧಿ, ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರಿಕೆಟ್ ಅತ್ಯುತ್ತಮ ಕ್ರೀಡೆಯಾಗಿದೆ. ಆದ್ದರಿಂದ ಯುವಜನತೆ ಕ್ರೀಡೆಯತ್ತ ಹೆಚ್ಚಿನ ಗಮನ ಹರಿಸುವಂತೆ ಪ್ರೇರೇಪಿಸಬೇಕು ಎಂದು ಅಭಿಪ್ರಾಯಪಟ್ಟರು.
ಆರ್‌ಟಿಐ ಕಾರ್ಯಕರ್ತ ಅನಿಲ್ ಕುಮಾರ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಶಿವರಾತ್ರಿ ಕಪ್ ಪಂದ್ಯಾವಳಿಯನ್ನು ಯುವಕರು ನಿರಂತರವಾಗಿ ಆಯೋಜಿಸುತ್ತಿದ್ದಾರೆ. ದಾನಿಗಳ ಸಹಾಯದಿಂದ ಬ್ಯಾಟ್, ಬಾಲ್ ಹಾಗೂ ಲೈಟಿಂಗ್ ವ್ಯವಸ್ಥೆ ಮಾಡಿಕೊಂಡು ಯಶಸ್ವಿಯಾಗಿ ಟೂರ್ನಿಯನ್ನು ನಡೆಸುತ್ತಿರುವುದು ಶ್ಲಾಘನೀಯ. ಗ್ರಾಮದಲ್ಲಿ ಯುವಕರು ಒಂದೇ ಮನೆಯ ಸಹೋದರರಂತೆ ಸಹಕಾರದಿಂದ ಆಟವಾಡುತ್ತಿರುವುದು ಸುತ್ತಮುತ್ತಲಿನ ಗ್ರಾಮಗಳಿಗೆ ಮಾದರಿಯಾಗಿದೆ ಎಂದರು.
ಈ ವರ್ಷದ ಶಿವರಾತ್ರಿ ಕಪ್‌ನಲ್ಲಿ ಭಜರಂಗಿ ಬಾಯ್ಸ್, ಕ್ಲಾಸಿಕ್ ಬಾಯ್ಸ್, ಇಲೆವೆನ್ ಸ್ಟಾರ್ ಕ್ರಿಕೆಟರ್ಸ್, ಗೋಪನಹಳ್ಳಿ ವಾರಿಯರ್ಸ್ ಮತ್ತು ಫ್ಲವರ್ ಬಾಯ್ಸ್ ಸೇರಿ ಐದು ತಂಡಗಳು ಐಪಿಎಲ್ ಮಾದರಿಯಲ್ಲಿ ಸ್ಪರ್ಧಿಸಿವೆ. ಫೈನಲ್ ಪಂದ್ಯದಲ್ಲಿ ಇಲೆವೆನ್ ಸ್ಟಾರ್ ಕ್ರಿಕೆಟರ್ಸ್ ಮತ್ತು ಫ್ಲವರ್ ಬಾಯ್ಸ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿದವು. ರೋಚಕ ಅಂತಿಮ ಹೋರಾಟದಲ್ಲಿ ಫ್ಲವರ್ ಬಾಯ್ಸ್ ತಂಡ 5 ರನ್‌ಗಳ ಅಂತರದಲ್ಲಿ ಜಯಗಳಿಸಿ ನಾಲ್ಕನೇ ಬಾರಿ ಶಿವರಾತ್ರಿ ಕಪ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.
ವಿಜೇತ ತಂಡಕ್ಕೆ ಪ್ರಶಸ್ತಿಯನ್ನು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿ, ನಾಗರಾಜ್, ಹೇಮಂತ್, ಮಧುರಾಯ, ತಿಪ್ಪೇಶ್, ಮನೋಜ್ ಶ್ಯಾಮ್, ಯಲ್ಲಪ್ಪ, ಶರತ್, ತಿಲಕ್, ಮನು, ದಯಾನಂದ, ಮಹೇಶ್, ದ್ಯಾಮ, ನಿಜಲಿಂಗಪ್ಪ, ಮಂಜುನಾಥ ನಿಜಲಿಂಗಪ್ಪ, ಉಮೇಶ್ ಸೇರಿದಂತೆ ಗ್ರಾಮದ ಅನೇಕ ಯುವಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading