ಹಿರಿಯೂರು:
ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಿ ಅಧಿಕಾರ, ಅಂತಸ್ತು, ಐಶ್ವರ್ಯ ಗಳಿಸುವುದು ಹಾಗೂ ಗಳಿಸಬೇಕೆಂದು ಆಸೆಪಡುವುದು ವ್ಯಕ್ತಿಯ ಅಧಃಪತನವನ್ನು ತೋರಿಸುತ್ತದೆ ಎಂಬುದಾಗಿ ನಿವೃತ್ತ ಬ್ಯಾಂಕ್ ಅಧಿಕಾರಿಯಾದ ಡಿ.ಕೆ.ನರಸಿಂಹಮೂರ್ತಿ ಅವರು ಹೇಳಿದರು.
ನಗರದ ಮೋಕ್ಷಗುಡಂ ವಿಶ್ವೇಶ್ವರಯ್ಯ ವಿದ್ಯಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ “ಶಿಕ್ಷಣದಲ್ಲಿ ನೈತಿಕತೆ” ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದುಡಿಮೆಯಲ್ಲಿ ಪ್ರಾಮಾಣಿಕತೆ ಇದ್ದರೆ ಅವಕಾಶಗಳು ಹುಡಿಕೊಂಡು ಬರುತ್ತವೆ. ಪರಿಶ್ರಮಕ್ಕೆ ತಕ್ಕ ಫಲ ಬಯಸಬೇಕು. ಮತ್ತೊಬ್ಬರದ್ದನ್ನು ಕಿತ್ತು ದೊಡ್ಡ ಮನುಷ್ಯನಾಗುವ ಯೋಚನೆ ಒಳ್ಳೆಯದಲ್ಲ ಎಂಬುದಾಗಿ ಅವರು ಹೇಳಿದರು.
ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅಬ್ದುಲ್ ಕಲಾಂ ಶ್ರೇಷ್ಠ ವಿಜ್ಞಾನಿ, ದೇಶದ ರಾಷ್ಟ್ರಪತಿಯಾದರು.ಸ್ವಂತ ಶ್ರಮದಿಂದ ಉನ್ನತ ಸ್ಥಾನಕ್ಕೆ ತಲುಪಿರುವ ಇಂತಹ ಲಕ್ಷಾಂತರ ನಿದರ್ಶನಗಳಿವೆ. ನಾವು ಅಂತಹ ಸಾಧಕರ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬೇಕೇ ಹೊರತು ತಪ್ಪು ಹಾದಿಯತ್ತ ಯೋಚನೆಯನ್ನೂ ಮಾಡಬಾರದು ಎಂಬುದಾಗಿ ಅವರು ಎಚ್ಚರಿಸಿದರು.
ರಾಜಕೀಯ ಕಾರಣದಿಂದ ಶಿಕ್ಷಣ ಕ್ಷೇತ್ರದಲ್ಲಿಯೂ ನೈತಿಕತೆ ಮಾಯವಾಗುತ್ತಿದೆ. ಹಿಂದೆಲ್ಲಾ ಪಂಚತಂತ್ರದ ಕಥೆಗಳು , ತೆನಾಲಿರಾಮಕೃಷ್ಣ, ಬೀರಬಲ್ ಕಥೆಗಳ ಮೂಲಕ ಮಕ್ಕಳಿಗೆ ನೈತಿಕ ಪಾಠ ಹೇಳಿ ಕೊಡಲಾಗುತ್ತಿತ್ತು.
ಎಳೆಯ ವಯಸ್ಸಿನಲ್ಲಿಯೇ ಇತಿಹಾಸ, ವಿಜ್ಞಾನದ ಜೊತೆ ನೈತಿಕಪಾಠಗಳನ್ನು ಬೋಧಿಸುವ ಅನಿವಾರ್ಯತೆ ಇದೆ.ಇಲ್ಲವಾದರೆ ಅನಾಥಶ್ರಮ, ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಬಹುದು ಎಂಬುದಾಗಿ ಅವರು ಆತಂಕವ್ಯಕ್ತಪಡಿಸಿದರು.
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹೆಚ್.ಎಂ.ಬಸವರಾಜ್ ಅವರು ಮಾತನಾಡಿ ವಿದ್ಯಾರ್ಥಿಗಳು ಕೇಳುವ ಗುಣ ಬೆಳೆಸಿಕೊಂಡಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಯಶಸ್ಸು ಪಡೆಯಬಹುದು. ಎಂದರಲ್ಲದೆ,
ನಮ್ಮ ಮನಸ್ಸಿನ ಆಲೋಚನೆಗಳು ಆರೋಗ್ಯಕರವಾಗಿದ್ದರೆ,ಅದರಿಂದ ನಮ್ಮ ವ್ಯಕ್ತಿತ್ವದ ಮೌಲ್ಯ ಹೆಚ್ಚುತ್ತದೆ. ಹಿರಿಯರನ್ನು ಗೌರವಿಸಬೇಕು.ಪರೋಪಕಾರಿಯಾಗಿರಬೇಕು ಎಂಬಂತಹ ುಪದೇಶಗಳನ್ನು ಪಾಲಿಸಿದರೆ ವ್ಯಕ್ತಿ ಇನ್ನಷ್ಟು ಎತ್ತರಕ್ಕೆ ಏರಬಹುದು ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಜಿ.ತಿಪ್ಪೇಸ್ವಾಮಿ, ಹಿರಿಯ ಶಿಕ್ಷಕರಾದ ಪದ್ಮಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.