
ಹಿರಿಯೂರು:
ಹಿರಿಯೂರಿನ ನಾಗರೀಕರರಿಗೆ ದಾವಣಗೆರೆ ಹಾಗೂ ಬೆಂಗಳೂರು ಮಾರ್ಗವಾಗಿ ಪ್ರಯಾಣ ಮಾಡುವುದೇ ಬಹುದೊಡ್ಡ ಸಮಸ್ಯೆಯಾಗಿದೆ, ಏಕೆಂದರೆ ಈ ಮಾರ್ಗವಾಗಿ ಬರುವ ಬಸ್ ಗಳು ಹಿರಿಯೂರು ಒಳಗಡೆ ಪ್ರವೇಶಿಸದೇ ಬೈಪಾಸ್ ಮಾರ್ಗವಾಗಿ ಹೋಗಿಬಿಡುತ್ತವೆ, ಇದರಿಂದ ಹಿರಿಯೂರಿಗೆ ಬರುವ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಹಿರಿಯೂರು ನಗರಸಭೆ ಉಪಾಧ್ಯಕ್ಷರಾದ ಅಂಬಿಕಾ ಆರಾಧ್ಯ ಮನವಿ ಮಾಡಿದರು.
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ದಾವಣಗೆರೆ ಹಾಗೂ ಬೆಂಗಳೂರು ಮಾರ್ಗವಾಗಿ ಬರುವ ಬಸ್ ಗಳು ಹಿರಿಯೂರು ಒಳಗಡೆ ಬಂದೇ ಹೋಗುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ, ಸಾರ್ವಜನಿಕರ ಪರವಾಗಿ ಕೆ.ಎಸ್.ಆರ್.ಟಿ.ಸಿ ನಿಯಂತ್ರಣ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಬೆಂಗಳೂರಿನಿಂದ ಅಲ್ಲದೆ ದಾವಣಗೆರೆ ಚಿತ್ರದುರ್ಗದಿಂದಲೂ ಸಹ ಹಿರಿಯೂರಿನ ಪ್ರಯಾಣಿಕರಿಗೆ ಕೆ.ಎಸ್.ಆರ್.ಟಿ.ಸಿ ಯ ಕೆಲವು ಬಸ್ ನವರು ಹತ್ತಿಸಿಕೊಳ್ಳುತ್ತಿಲ್ಲ, ಭಾನುವಾರವು ಸೇರಿದಂತೆ ರಜಾ ದಿನಗಳ ಸಂದರ್ಭದಲ್ಲಿ ಬೆಂಗಳೂರು ಕಡೆ ಹೋಗಲು ಐದಾರು ಬಸ್ ಹತ್ತುವಷ್ಟು ಜನ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿರುತ್ತಾರೆ.
ಆದರೆ ಬಸ್ ಗಳು ಬೈಪಾಸ್ ಮೂಲಕವೇ ಹೋಗಿ ಬಿಡುತ್ತವೆ ಅಲ್ಲದೇ ಒಳಗೆ ಬರುವ ಬಸ್ ಗಳಲ್ಲಿ ನಿಂತುಕೊಳ್ಳಲು ಜಾಗವಿಲ್ಲದ ಹಾಗೆ ಬಸ್ಸುಗಳು ತುಂಬಿಕೊಂಡು ಹೋಗುತ್ತವೆ. ಹಿರಿಯೂರಿನ ಪ್ರಯಾಣಿಕರು ವಯೋ ವೃದ್ಧರು ಮಹಿಳೆಯರು ಅಲ್ಲದೆ ಸಾಕಷ್ಟು ವಿದ್ಯಾರ್ಥಿಗಳು ಬೆಂಗಳೂರಿನವರೆಗೂ ನಿಂತುಕೊಂಡೇ ಹೋಗಬೇಕಾದ ಪರಿಸ್ಥಿತಿ ಒದಗಿದೆ, ಇದನ್ನು ಸರಿಪಡಿಸಬೇಕು
ಅಲ್ಲದೆ ಭಾನುವಾರ ಮತ್ತು ಹಬ್ಬಗಳು ಬರುವ ರಜೆಯ ಸಂದರ್ಭದಲ್ಲಿ ಹಿರಿಯೂರಿನಿಂದ ಬೆಂಗಳೂರಿಗೆ ಹೆಚ್ಚಿನ ಬಸ್ ಗಳನ್ನು ಹಾಕಬೇಕು, ಪ್ರಯಾಣಿಕರಿಗೆ ತೊಂದರೆಯಾಗದಂತೆ ತಕ್ಷಣ ಸೂಕ್ತ ವ್ಯವಸ್ಥೆ ಮಾಡಬೇಕು, ಇಲ್ಲದಿದ್ದರೆ ಈ ಬಗ್ಗೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂಬುದಾಗಿ ಎಚ್ಚರಿಸಿದರು.
ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ಅಂಬಿಕಾ ಆರಾಧ್ಯರವರ ಮನವಿಗೆ ಸ್ಪಂದಿಸಿ, ಮಾತನಾಡಿದ ಕೆ.ಎಸ್.ಆರ್.ಟಿ.ಸಿಯ ನಿಯಂತ್ರಣ ಅಧಿಕಾರಿ ನೇತ್ರಾವತಿಯವರು ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವುದಾಗಿ ಭರವಸೆ ನೀಡಿದರು.

About The Author
Discover more from JANADHWANI NEWS
Subscribe to get the latest posts sent to your email.