January 29, 2026


ಹಿರಿಯೂರು :
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಬಳಿ ಇರುವ ಜ್ಞಾನಭಾರತಿ ವಿದ್ಯಾಸಂಸ್ಥೆಯು ಕಳೆದ 2008ರಲ್ಲಿ ಅರೆವೈದ್ಯಕೀಯ ಕಾಲೇಜಿನೊಂದಿಗೆ ಪ್ರಾರಂಭವಾಗಿ ನಂತರ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಹಾಗೂ ಬಿ.ಇಡಿ ತರಬೇತಿ ಕಾಲೇಜನ್ನು ಆರಂಭಿಸಿ ತನ್ನ ಶೈಕ್ಷಣಿಕ ಸೇವೆಯನ್ನು ವಿಸ್ತರಿಸಿಕೊಂಡಿದೆ ಎಂಬುದಾಗಿ ಜ್ಞಾನಭಾರತಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಡಾ.ವಿ.ಬಸವರಾಜಹೇಳಿದರು.
ನಗರದ ಜ್ಞಾನಭಾರತಿ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ಉದ್ಘಾಟನೆಗೊಳ್ಳಲಿರುವ ರಂಗಮಂದಿರ ಉದ್ಘಾಟನೆಗೆ ನಗರ ಹಾಗೂ ಗ್ರಾಮೀಣ ಭಾಗದ ಕಲಾಭಿಮಾನಿಗಳು ಉಪಸ್ಥಿತರಿದ್ದು, ಹೆಚ್ಚಿನ ರಂಗಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪ್ರೋತ್ಸಾಹ ನೀಡುವಂತೆ ಪತ್ರಿಕಾ ಮಾಧ್ಯಮಗಳ ಮೂಲಕ ಅವರು ಮನವಿ ಮಾಡಿದ್ದಾರೆ.
ಜ್ಞಾನಭಾರತಿ ವಿದ್ಯಾಸಂಸ್ಥೆ ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಎರಡು ದಶಕಗಳಿಂದ ವಿಭಿನ್ನ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು , ಇದೀಗ ರಂಗಕಲೆ, ಸಂಗೀತ, ಜಾನಪದ ಕ್ಷೇತ್ರದತ್ತ ಮುಖ ಮಾಡಿ ರಂಗಮಂದಿರ ನಿರ್ಮಾಣ ಮಾಡುವ ಮೂಲಕ ವಿನೂತನ ಹೆಜ್ಜೆ ಇಟ್ಟಿದೆ ಎಂಬುದಾಗಿ ಅವರು ಹೇಳಿದರು.
ಜ್ಞಾನಭಾರತಿ ಬಿ.ಇಡಿ. ಕಾಲೇಜಿನ ಪ್ರಾಚಾರ್ಯ ಎನ್.ಧನಂಜಯ ಮಾತನಾಡಿ, ಜ್ಞಾನಭಾರತಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಡಾ.ವಿ.ಬಸವರಾಜರವರು ಮೂಲತಃ ಹಿರಿಯೂರು ತಾಲ್ಲೂಕಿನ ಹುಚ್ಚವನಹಳ್ಳಿ ಗ್ರಾಮದವರು ತಮ್ಮ ಪ್ರೌಢ ಶಿಕ್ಷಣದ ಹಂತದಲ್ಲಿಯೇ ಗ್ರಾಮೀಣ ಕಲೆಗಳ ಬಗ್ಗೆ ಆಸಕ್ತಿ ಹೊಂದಿದ್ದ ಇವರಿಗೆ ರಂಗಕಲೆಯ ಬಗ್ಗೆ ವಿಶೇಷ ಒಲವಿತ್ತು ಎಂದರಲ್ಲದೆ,
ಚಿತ್ರದುರ್ಗದ ಮಹಾರಾಜ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನಕ್ಕೆ ಕಾಲಿಟ್ಟ ಅವರು ವಿದ್ಯಾರ್ಥಿಗಳಿಗೆ ಬೋಧನೆಯ ಹೊರತಾಗಿ ರಂಗಕಲೆಯ ಚಟುವಟಿಕೆಗಳನ್ನು ಪರಿಚಯಿಸುತ್ತ, ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಹಲವಾರು ನಾಟಕಗಳನ್ನು ನಿರ್ದೇಶಿಸಿ ಯಶಸ್ವಿಯಾಗಿದ್ದವರು. ಹಲವಾರು ನಾಟಕ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸುವುದರ ಮುಖಾಂತರ ರಂಗಕಲೆ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ
ಅಲ್ಲದೆ ನಿವೃತ್ತಿಯ ನಂತರ ಅವರಲ್ಲಿದ್ದ ರಂಗಾಸಕ್ತಿ ಕುಂದದೆ ರಂಗ ಚಟುವಟಿಕೆಯತ್ತ ಆಸಕ್ತಿ ಮುಂದುವರಿಸಿ ತಾವು ಸ್ಥಾಪಿಸಿದ ವಿದ್ಯಾಸಂಸ್ಥೆಯ ಆವರಣದಲ್ಲಿ ಪ್ರತಿ ತಿಂಗಳು ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಕನಸಿನ ಕೂಸಾದ ರಂಗವೇದಿಕೆ ನಿರ್ಮಾಣದಲ್ಲಿ ತೊಡಗಿಕೊಂಡು ಹೆಗ್ಗೋಡಿನ ನೀನಾಸಂ ರಂಗಮಂದಿರದ ಮಾದರಿಯಲ್ಲಿ ಸುಮಾರು 800 ಜನರು ಏಕಕಾಲದಲ್ಲಿ ಕುಳಿತುಕೊಂಡು ಕಾರ್ಯಕ್ರಮ ವೀಕ್ಷಿಸುವ ಸುಸಜ್ಜಿತ ರಂಗಮಂದಿರವನ್ನು ತಮ್ಮ ಮಾತಾಪಿತರಾದ ದಿವಂಗತ ಪುಟ್ಟರಂಗಮ್ಮ ವೀರಭದ್ರಪ್ಪನವರ ಸ್ಮರಣಾರ್ಥ ನಿರ್ಮಿಸಿದ್ದು “ಪುವೀ ” ಎಂಬ ಹೆಸರಿನ ಶೀರ್ಷಿಕೆಯಡಿ ನಿರ್ಮಾಣಗೊಂಡಿದೆ.
ಅಲ್ಲದೆ, ಇದೀಗ ಉದ್ಘಾಟನೆಯ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ರಂಗಮಂದಿರದ ಉದ್ಘಾಟನೆಯೊಂದಿಗೆ ಆರಂಭಿಕ ಪಯಣದಲ್ಲಿ ಮೊದಲ ಬಾರಿಗೆ ಮೈಸೂರಿನ “ನಿರ್ದಿಗಂತ “ತಂಡವು ಖ್ಯಾತ ರಂಗ ನಿರ್ದೇಶಕ ಬಿಜಾಪುರದ ಶಕೀಲ್ ಅಹಮದ್ ನಿರ್ದೇಶನದ ಮೂಲ “ಬ್ರೇಖ್ಟ್” ರಚನೆ ಆಗಿರುವ ಉತ್ತರ ಕರ್ನಾಟಕದ ಕಲಾವಿದರನ್ನು ಒಳಗೊಂಡ ನಾಟಕ ನೂತನ “ಪುವೀ ” ಥಿಯೇಟರ್ ನಲ್ಲಿ ಅಕ್ಟೋಬರ್ 17 ರ ಗುರುವಾರ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ.
ಆದ್ದರಿಂದ ಹಿರಿಯೂರು ನಗರ ಹಾಗೂ ಗ್ರಾಮೀಣ ಭಾಗದ ಕಲಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮುಖಾಂತರ ಇನ್ನು ಹೆಚ್ಚಿನ ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಉತ್ತೇಜನ ನೀಡಬೇಕು ಎಂಬುದಾಗಿ ಈ ಮೂಲಕ ಅವರು ಮನವಿ ಮಾಡಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading