December 15, 2025

ನಾಯಕನಹಟ್ಟಿ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಾನವ ಬಂದುತ್ವ ವೇದಿಕೆ ಚಳ್ಳಕೆರೆ ತಾಲ್ಲೂಕು ಸಂಚಾಲಕರಾದ ಯನ್ನಪ್ಪ ಹಾಗೂ ರಾಜ್ಯ ರೈತ ಸಂಘ ಹಸಿರು ಸೇನೆ ಹೋಬಳಿ ಅಧ್ಯಕ್ಷ ನಾಗರಾಜ್ ಮೀಸೆ ಬೇಟಿ ನೀಡಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು.

ಮಾನವ ಬಂದತ್ವ ವೇದಿಕೆ ತಾಲ್ಲೂಕು ಸಂಚಾಲಕ ಯನ್ನಪ್ಪ ಮಾತನಾಡಿ ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಹಳ್ಳಿಗಳು ಅತಿ ಹೆಚ್ಚು ಹಿಂದುಳಿದ ಹಳ್ಳಿಗಳಾಗಿವೆ. ಸುತ್ತಮುತ್ತಲ ಹಳ್ಳಿಯ ಜನರು ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುತ್ತಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಸಾಕಷ್ಟು ರೋಗಿಗಳು ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ಸ್ಥಿತಿ ಇದೆ. ಆದ್ದರಿಂದ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ, ವೈದ್ಯರ ಮೂಲ ಕೊರತೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕೊರತೆ ಇರುವ ವೈದ್ಯರನ್ನು ನೇಮಕ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಆಸ್ಪತ್ರೆಯು ಸುಸಜ್ಜಿತವಾಗಿದ್ದು, ಚಿಕಿತ್ಸೆಗೆ ಬೇಕಾಗುವ ಯಂತ್ರೋಪಕರಣಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ರೋಗಿಗಳಿಗೆ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿಗಳಲ್ಲಿ ವಿನಂತಿ ಮಾಡಿಕೊಂಡರು.

ರಾಜ್ಯ ರೈತ ಸಂಘ ಹಸಿರು ಸೇನೆ ಹೋಬಳಿಯ ಅಧ್ಯಕ್ಷ ನಾಗರಾಜ್ ಮೀಸೆ ಮಾತನಾಡಿ ಆಸ್ಪತ್ರೆಯಲ್ಲಿ ಸಮಸ್ಯೆಗಳ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಹಲವು ಬಾರಿ ಮನವರಿಕೆ ಮಾಡಿದ್ದೇವೆ. ಅವರು ಮುಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಭರವಸೆಯನ್ನು ನೀಡಿದರು. ಮುಂದಿನ ದಿನಗಳಲ್ಲಿ ವೈದ್ಯರನ್ನು ನೇಮಕ ಮಾಡಿಸಿ ಹೋಬಳಿಯ ಸಮಸ್ತ ಜನತೆಗೆ ಉತ್ತಮ ಚಿಕಿತ್ಸೆ ದೊರೆಯುವಂತಾಗಲಿ ಎಂದು ಹೇಳಿದರು.

ಜಿಲ್ಲಾ ವೈದ್ಯಾಧಿಕಾರಿಗಳಿಗೆ ಕೇವಲ ಜಿಲ್ಲಾ ಆಸ್ಪತ್ರೆ ವಂದೇ ಅಲ್ಲ, ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ. ಕಾಶಿ ಮಾತನಾಡಿ ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆರಿಗೆ ತಜ್ಞರು, ಮಕ್ಕಳ ತಜ್ಞರು, ಅರವಳಿಕೆ ತಜ್ಞರು, ಹಿರಿಯ ಆರೋಗ್ಯ ವೈದ್ಯಾಧಿಕಾರಿಗಳು ಕೊರತೆ ಇದೆ. ಇವರಲ್ಲಿ ಸದ್ಯ ಮಕ್ಕಳ ತಜ್ಞರು, ಅರವಳಿಕೆ ತಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದು, ಹೆರಿಗೆ ತಜ್ಞರು ಹಾಗೂ ಹಿರಿಯ ಆರೋಗ್ಯ ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇವೆ. ದಂತ ವೈದ್ಯರು ಮತ್ತು ಆಯುಷ್ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಯುಷ್ ವೈದ್ಯರು ಬೆಳಗ್ಗೆ 9:30 ರಿಂದ ಸಂಜೆ 4:30ರ ವರೆಗೆ ಹೊರರೋಗಿಗಳ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಆಯುಷ್ಯ ವೈದ್ಯರುು ರಾತ್ರಿ ಪಾಳ್ಯದಲ್ಲಿ ಕರ್ತವ್ಯ ನಿರ್ವಹಿಸುವುದಿಲ್ಲ. ದಂತ ವೈದ್ಯರು ಕೂಡ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವುದಿಲ್ಲ. ಮಕ್ಕಳ ತಜ್ಞರು ಹಾಗೂ ಅರವಳಿಕೆ ತಜ್ಞರು ಮಾತ್ರ 24 ಗಂಟೆ ಕರ್ತವ್ಯ ನಿರ್ವಹಿಸುತ್ತಾರೆ. ವೈದ್ಯರ ಕೊರತೆ ಇರುವುದರಿಂದ ಪಕ್ಕದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ದಿನದ 24 ಗಂಟೆಗಳು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುವುದು. ಇರುವ ವೈದ್ಯರಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಶ್ರಮಿಸುತ್ತಿದ್ದೇವೆ ಎಂದರು.

ಆದ್ದರಿಂದ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರು ವೈದ್ಯರನ್ನು ನೇಮಕ ಮಾಡಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ದಾದಿಯರಾದ ಶಾಂತಮ್ಮ, ಸುಜಾತ, ಅನಿಲ್, ಡಿ ಗ್ರೂಪ್ ನೌಕರರ ನಾಗೇಂದ್ರಪ್ಪ, ಗೋವಿಂದಮ್ಮ ಇನ್ನು ಮುಂತಾದವರು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading