
ಚಿತ್ರದುರ್ಗ, ಸೆ.15 :
ನಮ್ಮ ದೇಶ ಸ್ವಾತಂತ್ರ್ಯ ಪಡೆದ ಬಗೆ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮಹತ್ವವನ್ನು ಯುವಪೀಳಿಗೆ ಸಮಗ್ರವಾಗಿ ಅರಿತುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಆಕಾಶ್ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾದ ಅಂತರಾಷ್ಟ್ರೀಯ ಪ್ರಜಾಪ್ರಬುತ್ವ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಜಗತ್ತಿನಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೊಡ್ಡ ದೇಶವಾಗಿದೆ. ಕಾರಣ, ನಮ್ಮಲ್ಲಿನ ಜನಸಂಖ್ಯೆ. ದೇಶದ ಜನಸಂಖ್ಯೆ ಸುಮಾರು 140 ಕೋಟಿ ಇದ್ದು, ಮತದಾನದ ಹಕ್ಕು ಹೊಂದಿರುವ ಸುಮಾರು 100 ಕೋಟಿಗೂ ಹೆಚ್ಚು ಜನ ನಮ್ಮಲ್ಲಿದ್ದಾರೆ. ಜನರೇ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಹೊಂದಿದ್ದಾರೆ. ಮತದಾನದ ಮೂಲಕ ನಾವು ಆಯ್ಕೆ ಮಾಡಿರುವ ನಾಯಕರೇ ನಮ್ಮನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಇಂತಹ ನಾಯಕರು ಯಾವ ರೀತಿ ಇರಬೇಕು ಎಂಬುದನ್ನು ಜನರೇ ನಿರ್ಧರಿಸುವುದರಿಂದ, ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ದೇಶದಲ್ಲಿ ಬಲಿಷ್ಟವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದು, ಅಧಿಕೃತವಾಗಿ ಜಾರಿಗೊಂಡ ದಿನವಾದ ಜನವರಿ 26 ಅನ್ನು ನಾವು ಗಣರಾಜ್ಯ ದಿನವನ್ನಾಗಿ ಆಚರಿಸುತ್ತೇವೆ. “ನಮ್ಮ ಮತ- ನಮ್ಮ ಹಕ್ಕು” ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿ ಪ್ರಜಾ ಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದೆ. ಯುವಪೀಳಿಗೆ ತಮ್ಮ ವಿಧ್ಯಾಭ್ಯಾಸದ ಅವಧಿಯಲ್ಲಿ ನಮ್ಮ ದೇಶ ಸ್ವಾತಂತ್ರ್ಯ ಪಡೆದ ಬಗೆ, ಸಂವಿಧಾನದಲ್ಲಿ ಅಡಕವಾಗಿರುವ ಅಂಶಗಳು, ದೇಶ, ರಾಜ್ಯದಲ್ಲಿನ ಪೌರನೀತಿಗಳ ಬಗ್ಗೆ ಸಮಗ್ರವಾದ ಅರಿವು ಹೊಂದಬೇಕು ಎಂದು ಡಾ. ಎಸ್. ಆಕಾಶ್ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ಅವರು ಮಾತನಾಡಿ, ಈ ಹಿಂದೆ ದೇಶದಲ್ಲಿ ರಾಜರ ಆಡಳಿತ ಇತ್ತು. ಬಲಿಷ್ಟರು, ಪರಾಕ್ರಮಿಗಳು ಪ್ರಜೆಗಳನ್ನು ಆಳುತ್ತಿದ್ದರು. ಆದರೆ, ಈಗ ಆ ವ್ಯವಸ್ಥೆ ಇಲ್ಲ, ಸ್ವಾತಂತ್ರ್ಯಾ ನಂತರ ನಮ್ಮಲ್ಲಿ ಪ್ರಜಾಪ್ರಬುತ್ವ ವ್ಯವಸ್ಥೆ ಜಾರಿಗೆ ಬಂದಿದ್ದು, ನಾವೇ ನಮ್ಮ ನಾಯಕರನ್ನು ಜನಪ್ರತಿನಿಧಿಗಳನ್ನಾಗಿ ಆರಿಸಿಕೊಳ್ಳುತ್ತೇವೆ. ಪ್ರಜಾಪ್ರಭುತ್ವ ಹಾಗೂ ಮತದಾನದ ಮೌಲ್ಯ ಅರಿಯದಿದ್ದರೆ ಮತ್ತೆ ನಾವು ಹಿಂದಿನ ಯುಗಕ್ಕೆ ಹಿಂದಿರುಗಬೇಕಾಗುತ್ತದೆ. “ಯಥಾ ರಾಜ- ತಥಾ ಪ್ರಜಾ’ ಎಂಬ ನಾಣ್ನುಡಿ ಇತ್ತು, ಆದರೆ ಈಗ ಕಾಲ ಬದಲಾಗಿದೆ. ‘ಯಥಾ ಪ್ರಜಾ-ತಥಾ ರಾಜಾ’ ಎಂಬುವಂತಾಗಿದೆ. ದೇಶದಲ್ಲಿ ಜಾತಿ, ಧರ್ಮದ ಆಧಾರಗಳಲ್ಲಿ ಮತ ಚಲಾವಣೆ ಆಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಅಭಿವೃದ್ಧಿಯ ದೃಷ್ಟಿಕೋನವನ್ನಿಟ್ಟಿಕೊಂಡು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಾಗಬೇಕು. ಬೇರೆ ದೇಶಗಳಿಗೆ ಹೋಲಿಸಿದಾಗ, ನಮ್ಮ ದೇಶ ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿದೆ. ಹೀಗಾಗಿ ದೇಶದ ಭವ್ಯ ಭವಿಷ್ಯ ಯುವ ಪೀಳಿಗೆಯ ಕೈನಲ್ಲಿದೆ. ಅಂಬೇಡ್ಕರ್ ಅವರು ಸಂವಿಧಾನ, ಪ್ರಜಾಪ್ರಭುತ್ವ ಎಂಬ ಅಸ್ತ್ರವನ್ನು ನಮಗೆ ಕೊಟ್ಟಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದಲ್ಲಿ ನಮ್ಮ ದೇಶದ ಭವಿಷ್ಯ ಉಜ್ವಲವಾಗಲಿದೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಜನಪರವಾಗಿರಬೇಕು. ಸರ್ಕಾರದ ಆಳ್ವಿಕೆ ಯಾವ ರೀತಿ ಇರಬೇಕು ಎನ್ನುವುದನ್ನು ಪ್ರಜೆಗಳೇ ನಿರ್ಧರಿಸಬೇಕು. ಆಗಿನ ಪ್ರಧಾನಮಂತ್ರಿಯಾಗಿದ್ದ ರಾಜೀವ್ ಗಾಂಧಿಯವರು ಮತದಾನಕ್ಕೆ ಇದ್ದಂತಹ 21 ವರ್ಷ ವಯಸ್ಸಿನ ಅರ್ಹತೆಯ ಮಿತಿಯನ್ನು 18 ವರ್ಷಕ್ಕೆ ಇಳಿಸುವ ಮೂಲಕ ಯುವಜನರಿಗೆ ಮತದಾನದ ಹಕ್ಕನ್ನು ನೀಡಿದರು. ಚುನಾವಣೆ ಸಂದರ್ಭಗಳಲ್ಲಿ ಯುವ ಪೀಳಿಗೆ, ಸಮಾಜಮುಖಿ ಆಡಳಿತ ಮಾಡುವವರನ್ನು ನಿರ್ಭಯದಿಂದ ಮತದಾನ ಮಾಡುವ ಮೂಲಕ ಆಯ್ಕೆ ಮಾಡಬೇಕು ಎಂದರು.
ಚಳ್ಳಕೆರೆಯ ಸಹಾಯಕ ಪ್ರಾಧ್ಯಾಪಕ ಸಂಜೀವ್ ಕುಮಾರ್ ಪೋತೆ ಉಪನ್ಯಾಸ ನೀಡಿ, ಪ್ರಜಾಪ್ರಭುತ್ವದ ತತ್ವಗಳನ್ನು ಉತ್ತೇಜಿಸುವ ಮತ್ತು ಎತ್ತಿ ಹಿಡಿಯುವ ಉದ್ದೇಶದಿಂದ 2007ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸೆಪ್ಟೆಂಬರ್ 15 ಅನ್ನು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲು ನಿರ್ಧರಿಸಿತು ಮತ್ತು ಸಾರ್ವಜನಿಕ ಜಾಗೃತಿ ಮೂಡಿಸಲು ಕರೆಕೊಟ್ಟಿತು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಪ್ರಜಾಪ್ರಭುತ್ವದ ಮೌಲ್ಯಗಳಾಗಿದ್ದು, ದೇಶವನ್ನು ಯಾವುದೇ ಧರ್ಮ, ದೇವರು, ದೇವತೆಗಳು ಆಳುವುದಿಲ್ಲ, ಸಾಮಾನ್ಯ ಪ್ರಜೆಗಳೇ ದೇಶವನ್ನು ಆಳುತ್ತಾರೆ. ಪ್ರಜಾಪ್ರಭುತ್ವವು ದ್ವೇಷ, ಅಸ್ಪøಶ್ಯತೆ, ಅಸಮಾನತೆ ತೊಡೆದು ಹಾಕಿ ಐಕ್ಯಮತವನ್ನು ತರುತ್ತದೆ ಎಂದು ಹೇಳಿದರು.
ಪ್ರಜಾಪ್ರಭುತ್ವವು ವರ್ಗ ಅಥವಾ ಜಾತಿಪದ್ಧತಿಯ ಸಾಮಾಜಿಕ ರಚನೆಯಿಂದ ಹೀನವಾಗುತ್ತದೆ. ಇಂಥ ಪ್ರತ್ಯೇಕತೆಯ ವ್ಯವಸ್ಥೆಯಲ್ಲಿ ಭ್ರಾತೃತ್ವ ಜೀವಿಸಲು ಸಾಧ್ಯವೇ? ಭ್ರಾತೃತ್ವವಿಲ್ಲದ ಸಮಾಜದಲ್ಲಿ ಪ್ರಜಾಪ್ರಭುತ್ವವು ಅಗೋಚರವಾಗುತ್ತದೆ. ಸಮಾಜದಲ್ಲಿ ಬಡತನ, ಹಸಿವುಗಳಂತಹ ಅಂಶಗಳು ಪ್ರಜಾಪ್ರಭುತ್ವಕ್ಕೆ ತೊಡರಾಗಿ ಪರಿಣಮಿಸಿವೆ. ಎμÉ್ಟೂೀ ಜನ ತಮ್ಮ ಹೊಟ್ಟೆಪಾಡಿಗಾಗಿ ಸಂವಿಧಾನಬದ್ಧ ಹಕ್ಕುಗಳನ್ನು ತ್ಯಜಿಸಿ ಖಾಸಗಿ ಅಥವಾ ಬಂಡವಾಳಶಾಹಿ ಒಡೆತನದಲ್ಲಿ ಬವಣಿಸುತ್ತಾರೆ. ಪ್ರಜಾತಂತ್ರವು ಕಡ್ಡಾಯ ಶಿಕ್ಷಣ, ಸಮಾನ ಸೌಕರ್ಯಗಳು, ದುರ್ಬಲರಿಗೆ ವಿಶೇಷ ಸೌಲಭ್ಯಗಳು ಮತ್ತು ಆರ್ಥಿಕ ಸ್ಥಾನಮಾನಗಳ ಧರ್ಮ, ಜಾತಿಗಳನ್ನು ಮೀರಿ ಸಮಾನ ತತ್ವದ ಅವಕಾಶನ್ನು ಕಲ್ಪಿಸುತ್ತದೆ ಎಂದು ತಿಳಿಸಿದರು.
ಸಂವಿಧಾನ ಜಾರಿಯಾದ ದೇಶದಲ್ಲಿ ಭಕ್ತಿ ಅಥವಾ ವ್ಯಕ್ತಿಪೂಜೆ ಪ್ರಭುತ್ವ ಸಾಧಿಸಿದರೆ ಖಂಡಿತವಾಗಿಯೂ ನಿರಂಕುಶ ಪ್ರಭುತ್ವಕ್ಕೆ ದಾರಿಯಾಗುತ್ತದೆ. ಪ್ರಜಾಪ್ರಭುತ್ವ ಮರೆಯಾದರೆ, ಸರ್ವಾಧಿಕಾರವು ತಲೆದೋರಿ ಅಪಾಯದ ಸಂಭವವುಂಟು. ದೇಶದ ಮೂಲನಿವಾಸಿಗಳು ರಾಜಕೀಯ ಪ್ರಜಾಪ್ರಭುತ್ವಕ್ಕೆ ಸಂತುಷ್ಟರಾಗಬಾರದು. ಅದರ ದೃಢತೆಯನ್ನು ಪಡೆದು ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವವನ್ನು ಏರ್ಪಡಿಸಿಕೊಳ್ಳಬೇಕು. ಆರ್ಥಿಕ ಪ್ರಜಾಪ್ರಭುತ್ವದ ಬುನಾದಿ ಇಲ್ಲದೇ ಹೋದರೆ ರಾಜಕೀಯ ಪ್ರಜಾಪ್ರಭುತ್ವಕ್ಕೆ ಯಾವುದೇ ಅರ್ಥವಿಲ್ಲ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ ಎಂದರು.
ಕಾರ್ಯಕ್ರಮದ ಅಂಗವಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಸಂವಿಧಾನದ ಪೀಠಿಕೆಯನ್ನು ವಾಚಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು. ಇದಕ್ಕೂ ಮುನ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಎಲ್ಲ ಗಣ್ಯಮಾನ್ಯರು ಪುಷ್ಪನಮನ ಸಲ್ಲಿಸಿದರು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಎಂ.ಪಿ. ಅನಿತಾ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಗಣ್ಯರಾದ ರಮೇಶ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ ಮುಂತಾದವರು ಉಪಸ್ಥಿತರಿದ್ದರು.






==========
About The Author
Discover more from JANADHWANI NEWS
Subscribe to get the latest posts sent to your email.