
ಚಿತ್ರದುರ್ಗ ಏ.15:
ಚಳ್ಳಕೆರೆಯ ಗೃಹಾಧಾರಿತ ಶಿಕ್ಷಣ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಅವರು ತಮ್ಮ ದುಡಿಮೆಯ ಉಳಿತಾಯದ ವೈಯಕ್ತಿಕ ಹಣದಿಂದ ಸುಮಾರು ಒಂದೂವರೆ ಲಕ್ಷ ರೂ. ಗೂ ಹೆಚ್ಚು ಮೊತ್ತದ ಸಾಮಾಗ್ರಿಯನ್ನು ಖರೀದಿಸಿ ಒದಗಿಸಿದ್ದು, ವಿಶೇಷ ಅಗತ್ಯವುಳ್ಳ ಮಕ್ಕಳು ಕೂಡ ಮುಖ್ಯ ವಾಹಿನಿಗೆ ಬರುವಂತಾಗಲು ಶ್ರಮ ವಹಿಸುವ ಮೂಲಕ, ಇಂತಹ ಮಕ್ಕಳಿಗೆ ಆಸರೆಯಾಗಿದ್ದಾರೆ.
ಕಿವುಡ ಹಾಗೂ ಮೂಕ ಮಕ್ಕಳು, ಮಾನಸಿಕ ಆರೋಗ್ಯ ವೈಕಲ್ಯ ಹೊಂದಿರುವAತಹ ಮಕ್ಕಳು ಸೇರಿದಂತೆ ಶಾಲೆಗೆ ಹಾಜರಾಗಲು ಸಾಧ್ಯವಾಗದ ವಿವಿಧ ಬಗೆಯ (ತೀವ್ರ ನ್ಯೂನ್ಯತೆಯುಳ್ಳ) ಮಕ್ಕಳಿಗೆ ಮನೆಯಲ್ಲಿಯೇ ತಮಗೆ ಅವಶ್ಯಕತೆಯಿರುವ ದೈನಂದಿನ ಕೌಶಲ್ಯಗಳ ತರಬೇತಿ ಹಾಗೂ ಫೀಜಿಯೋಥೆರಪಿ ಸೇವೆಯನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರುವುದೇ ಗೃಹಾಧಾರಿತ ಶಿಕ್ಷಣವಾಗಿದೆ. ಇಂತಹ ಮಕ್ಕಳ ಶಿಕ್ಷಣಕ್ಕಾಗಿ ಅಗತ್ಯವಿರುವ ಕಲಿಕಾ ಸಾಮಗ್ರಿಗಳನ್ನು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಶೋಧನಾ ಸಂಸ್ಥೆ ಶಿಫಾರಸ್ಸು ಮಾಡಿದ್ದು, ಈ ರೀತಿ ಶಿಫಾರಸು ಮಾಡಿರುವಂತಹ ಸಾಮಗ್ರಿಗಳನ್ನು ಜಿ.ಪಂ. ಸಿಇಒ ಸೋಮಶೇಖರ್ ಅವರು ತಮ್ಮ ದುಡಿಮೆಯಲ್ಲಿ ಉಳಿತಾಯ ಮಾಡಿರುವ ವೈಯಕ್ತಿಕ ಹಣದಿಂದ ಒಂದೂವರೆ ಲಕ್ಷ ರೂ. ಗೂ ಹೆಚ್ಚು ಮೊತ್ತದ ಕಲಿಕಾ ಸಾಮಗ್ರಿಗಳನ್ನು ಖರೀದಿಸಿ, ಚಳ್ಳಕೆರೆಯ ಗೃಹಾಧಾರಿತ ಶಿಕ್ಷಣ ಕೇಂದ್ರಕ್ಕೆ ಪೂರೈಕೆ ಮಾಡಿಸಿದ್ದಾರೆ. ಶೀಘ್ರದಲ್ಲಿಯೇ ಈ ಕೇಂದ್ರವನ್ನು ಚಳ್ಳಕೆರೆ ಶಾಸಕರಿಂದ ಉದ್ಘಾಟನೆ ಮಾಡಿಸಲಾಗುವುದು ಎಂದು ತಿಳಿಸಿದ್ದಾರೆ.
ಗೃಹಾಧಾರಿತ ಶಿಕ್ಷಣ ಕೇಂದ್ರದಲ್ಲಿ ದಾಖಲಾಗಿರುವ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಫಿಜಿಯೋಥೆರಪಿ ಮತ್ತು ದೈನಂದಿನ ಕೌಶಲ್ಯಗಳನ್ನು ಅಭ್ಯಾಸ ಮಾಡಿಸಿ ಈ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಎಲ್ಲಾ ತಾಲ್ಲೂಕು ಕೇಂದ್ರದಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರಗಳನ್ನು ಸಮನ್ವಯ ಶಿಕ್ಷಣ ಯೋಜನೆಯಡಿ ಪ್ರಾರಂಭಿಸಿದ್ದು, ಇಂತಹ ಮಕ್ಕಳಿಗೆ ಸರ್ಕಾರದಿಂದ ತಲಾ ಎರಡು ಲಕ್ಷದಂತೆ ಅನುದಾನ ನೀಡಲಾಗುತ್ತಿದೆ. ತಾಲ್ಲೂಕುಗಳಿಗೆ ಅನುದಾನ ಮಂಜೂರಾತಿಗೆ ಜಿ.ಪಂ ಸಿಇಒ ಅವರ ಅನುಮೋದನೆಗೆ ಬಂದAತಹ ಸಂದರ್ಭದಲ್ಲಿ, ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಚಿತ್ರದುರ್ಗ ತಾಲ್ಲೂಕು ಸಮನ್ವಯ ಶಿಕ್ಷಣ ಕೇಂದ್ರಕ್ಕೆ ಜಿ.ಪಂ ಸಿಇಒ ಸೋಮಶೇಖರ್ ಅವರು ಖುದ್ದು ಭೇಟಿ ನೀಡಿ, ಅಲ್ಲಿರುವ ಕಲಿಕೋಪಕರಣ, ಫಿಜಿಯೋಥೆರಪಿ, ಸ್ಯಾಂಡ್‌ಥೆರಪಿ ಹಾಗೂ ಮಕ್ಕಳಿಗೆ ವ್ಯಾಯಾಮ ಮಾಡಿಸಲು ಅನುಕೂಲವಾಗುವಂತಹ ಉಪಕರಣಗಳು ಮತ್ತು ಮಕ್ಕಳನ್ನು ಒಂದು ಕಡೆ ಕೂತು ಕಲಿಯುವ ಕಲಿಕೋಪಕರಣ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದರು.
ಗೃಹಾಧಾರಿತ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ ಅಭಿಪ್ರಾಯ ಪಡೆದ ನಂತರ, ಇದರಿಂದ ಪ್ರೇರಿತರಾದ ಜಿ.ಪಂ ಸಿಇಒ ಎಸ್.ಜೆ. ಸೋಮಶೇಖರ್ ಅವರು ಇನ್ನು ಯಾವ ಯಾವ ತಾಲ್ಲೂಕುಗಳಿಗೆ ಈ ರೀತಿಯ ಕಲಿಕಾ ಸಾಮಗ್ರಿಗಳು ಬೇಕಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಡಿಡಿಪಿಐ ಮತ್ತು ಡಿವೈಪಿಸಿ ಅವರಿಂದ ಸಮಗ್ರ ಮಾಹಿತಿ ಪಡೆದರು. ಚಳ್ಳಕೆರೆ ತಾಲ್ಲೂಕಿನ 49 ಮಕ್ಕಳಿಗೆ ಸಮನ್ವಯ ಶಿಕ್ಷಣ ನೀಡಲಾಗುತ್ತಿದ್ದು, ಈ ಕೇಂದ್ರಕ್ಕೆ ಕಲಿಕೋಪಕರಣ ಮತ್ತು ಫಿಜಿಯೋಥೆರಪಿ ಒಟ್ಟು 56 ಸಾಮಗ್ರಿಗಳು ಈ ತಾಲ್ಲೂಕಿಗೆ ಅವಶ್ಯಕತೆ ಇದೆ ಎಂದು ತಿಳಿಸಿದಾಗ ಕೂಡಲೇ ಜಿ.ಪಂ ಸಿಇಒ ಅವರು ನನ್ನ ಸ್ವಂತ ಖರ್ಚಿನಲ್ಲಿ ಚಳ್ಳಕೆರೆ ಗೃಹಧಾರಿತ ಶಿಕ್ಷಣ ಕೇಂದ್ರಕ್ಕೆ ಸಾಮಗ್ರಿಗಳನ್ನು ಖರೀದಿಸಿ ಕೊಡಿಸುವುದಾಗಿ ತಿಳಿಸಿ, ಕೂಡಲೆ ಇವುಗಳನ್ನು ತರಿಸಲು ಡಿಡಿಪಿಐ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಕಳೆದ ಮಾರ್ಚ್ 07 ರಂದು ಚಳ್ಳಕೆರೆಯ ಗೃಹಾಧಾರಿತ ಶಿಕ್ಷಣ ಕೇಂದ್ರಕ್ಕೆ ಸುಮಾರು 56 ಬಗೆಯ ಸಾಮಗ್ರಿಗಳನ್ನು ಜಿ.ಪಂ ಸಿಇಒ ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿ ಈ ಕೇಂದ್ರಕ್ಕೆ ನೀಡಿದ್ದಾರೆ.





ಮಕ್ಕಳ ಬಳಕೆಗೆ ಮತ್ತು ಕಲಿಕೆಗೆ ಈ ಕೇಂದ್ರದಲ್ಲಿರುವ ಸೌಲಭ್ಯಗಳು ಮತ್ತು ಮಗುವಿನ ವಿಕಲತೆಯ ಪ್ರಮಾಣ ಕಡಿಮೆಯಾಗಿ ಜೀವನ ಕೌಶಲ್ಯಗಳು ಸುಧಾರಣೆಯಾಗಬೇಕು, ಅವರನ್ನು ಮುಖ್ಯ ವಾಹಿನಿಗೆ ತರಲು ಇಲ್ಲಿನ ಶಿಕ್ಷಕರು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.