ಚಿತ್ರದುರ್ಗಮಾ.15:
ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿ ಬಲಿ ಕೈಬಿಟ್ಟು, ಅಹಿಂಸಾತ್ಮಕವಾಗಿ ಸಾತ್ವಿಕ ಪೂಜೆ ಸಲ್ಲಿಸಲು ಭಕ್ತರಲ್ಲಿ ಜಾಗೃತಿ ಮೂಡಿಸಲು, ಅಹಿಂಸಾ ಪ್ರಾಣಿ ದಯಾ ಆಧ್ಯಾತ್ಮ ಸಂದೇಶ ಯಾತ್ರೆಗೆ ಶನಿವಾರ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಚಾಲನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ವತಿಯಿಂದ ಪ್ರಾಣಿ ಬಲಿ ತಡೆ ಜಾಗೃತಿಗಾಗಿ ಜನತೆಯಲ್ಲಿ ಜಾಗೃತಿ ಮೂಡಿಸುವ ಅಹಿಂಸಾ ಪ್ರಾಣಿ ದಯಾ ಆಧ್ಯಾತ್ಮ ಸಂದೇಶ ಯಾತ್ರೆಗೆ ಚಾಲನೆ ದೊರೆಯಿತು.
ಈ ವೇಳೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಪ್ರಾಣಿ ಬಲಿ ತಡೆ ಜಾಗೃತಿಗಾಗಿ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಅಹಿಂಸಾ ಪ್ರಾಣಿ ದಯಾ ಆಧ್ಯಾತ್ಮ ಸಂದೇಶ ಯಾತ್ರೆಯು ಯಶಸ್ವಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದ ಅವರು, ಭಾರತ ಅಹಿಂಸಾತ್ಮಕ ದೇಶವಾಗಿದ್ದು, ಸಾರ್ವಜನಿಕ ಸ್ಥಳ, ಧಾರ್ಮಿಕ ಸ್ಥಳಗಳಲ್ಲಿ ಪ್ರಾಣಿಗಳ ವಧೆ ಆಗದಂತೆ ಎಲ್ಲರೂ ಸಹ ಜಾಗೃತಿ ವಹಿಸಬೇಕು ಎಂದು ಹೇಳಿದರು.
ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು-ಪ್ರಾಣಿ ಬಲಿ ನಿರ್ಮೂಲನಾ ಜಾಗೃತಿ ಮಹಾಸಂಘ ಹಾಗೂ ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಮಾತನಾಡಿ, ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯು ಮಾರ್ಚ್ 9 ರಿಂದ ಆರಂಭಗೊಂಡಿದ್ದು, ಮಾರ್ಚ್ 16ರಂದು ದೊಡ್ಡ ರಥೋತ್ಸವ ಜರುಗಲಿದೆ. ಈ ಜಾತ್ರೆಗೆ ಲಕ್ಷಾಂತರ ಭಕ್ತರು ನಾಡಿನ ವಿವಿಧ ಭಾಗಗಳಿಂದ ಆಗಮಿಸಿ ದೇವರಿಗೆ ಪೂಜಾದಿ, ಧಾರ್ಮಿಕ ಸೇವಾ ಕೈಂಕರ್ಯ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಲವು ಭಕ್ತರು ದೇವರು ಮತ್ತು ಧರ್ಮದ ಹೆಸರಿನಲ್ಲಿ ಹರಕೆಯ ರೂಪದಲ್ಲಿ ಆಡು, ಕುರಿ, ಕೋಳಿ ಮುಂತಾದ ಪ್ರಾಣಿಗಳ ಬಲಿ ನೀಡಲಿದ್ದು, ಈ ಬಾರಿ ವಿಶೇಷ ಗಮನಹರಿಸಿ, ಪ್ರಾಣಿಬಲಿಯನ್ನು ಕಾನೂನು ಹಾಗೂ ಹೈಕೋರ್ಟ್ ಆದೇಶಗಳ ಅಡಿಯಲ್ಲಿ ಸಂಪೂರ್ಣವಾಗಿ ತಡೆಗಟ್ಟಬೇಕು. ಪ್ರಾಣಿಗಳನ್ನು ಜಾತ್ರಾ ಪರಿಸರಕ್ಕೆ ಬಾರದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.
ಪ್ರಾಣಿಬಲಿಯು ಅನಾಗರೀಕವು ಅಂಧಶ್ರದ್ಧೆಯೂ, ಪರಿಸರ ಮಾಲಿನ್ಯಕಾರಕ ಆಗಿದ್ದು ಇದು ಕಾನೂನು ಮತ್ತು ಧರ್ಮ ವಿರೋಧಿ ಆಗಿದೆ, ಆದ್ದರಿಂದ ಭಕ್ತಾದಿಗಳು ಪ್ರಾಣಿಬಲಿ ತ್ಯಜಿಸಿ ಅಹಿಂಸಾತ್ಮಕವಾಗಿ ಸಾತ್ವಿಕ ಪೂಜೆ ಸಲ್ಲಿಸಬೇಕು ಎಂದು ಭಕ್ತರಲ್ಲಿ ಮನವಿ ಮಾಡಿದ ಸ್ವಾಮೀಜಿಯವರು, ದೇವಾಲಯಗಳು ವಧಾಲಯಗಳಾಗದೆ ದಿವ್ಯಾಲಯವಾಗಬೇಕು, ಜಾತ್ರಾ ಪರಿಸರಗಳ ಧಾರ್ಮಿಕ ಸ್ಥಾನಗಳು ಕಟುಕರ ಕೇರಿಗಳಾಗಬಾರದು, ಜೀವ ತೆಗೆಯುವ ಮೃತ್ಯು ಕೂಪವಾಗಬಾರದು, ಪ್ರಾಣಿಹಿಂಸೆ ಮತ್ತು ಮದ್ಯ – ಮಾದಕ ಪದಾರ್ಥಗಳಿಂದ ಮುಕ್ತವಾಗಿರಬೇಕು, ಅಹಿಂಸೆ ಕರುಣೆ, ಪ್ರೇಮ, ಜೀವದಯೆ, ಮಾನವೀಯತೆ, ಆಧ್ಯಾತ್ಮಿಕತೆ ಮುಂತಾದ ದಿವ್ಯ ಮೌಲ್ಯಗಳನ್ನು ಸಾರುವ ಸುಸಂಸ್ಕಾರ ನೀಡುವ ದಿವ್ಯ ಧಾಮಗಳಾಗಬೇಕು, ಸದ್ಭಕ್ತಿ, ಸುಜ್ಞಾನ ಮತ್ತು ಸದಾಚಾರಗಳ ತ್ರಿವೇಣಿ ಸಂಗಮವಾಗಬೇಕು ಎಂದು ಹೇಳಿದರು.
ಅಹಿಂಸಾ ಪ್ರಾಣಿ ದಯಾ ಆಧ್ಯಾತ್ಮ ಸಂದೇಶ ಯಾತ್ರೆಯು ಶನಿವಾರದಿಂದ ಪ್ರಾರಂಭವಾಗಿದ್ದು, ನಾಯಕನಹಟ್ಟಿ ಜಾತ್ರೆಯು ಮುಗಿಯುವವರೆಗೆ ಜಿಲ್ಲೆಯಲ್ಲಿ ಚಳ್ಳಕೆರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹಾಗೂ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಪರಿಸರ ಮತ್ತು ಸುತ್ತ ಮುತ್ತಲಿನ ಊರುಗಳಲ್ಲಿ ಸಂದೇಶ ಯಾತ್ರೆಯು ಸಂಚರಿಸಲಿದೆ.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಹಬೂಬ್ ಜಿಲಾನ್, ಪಶು-ಪ್ರಾಣಿ ಬಲಿ ನಿರ್ಮೂಲನಾ ಜಾಗೃತಿ ಮಹಾಸಂಘ, ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಪದಾಧಿಕಾರಿಗಳು ಇದ್ದರು.
ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ವತಿಯಿಂದ ಪ್ರಾಣಿ ಬಲಿ ತಡೆ ಜಾಗೃತಿಗಾಗಿ ಜನತೆಯಲ್ಲಿ ಜಾಗೃತಿ ಮೂಡಿಸುವ ಅಹಿಂಸಾ ಪ್ರಾಣಿ ದಯಾ ಆಧ್ಯಾತ್ಮ ಸಂದೇಶ ಯಾತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಕೂಡ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಜಾಗೃತಿ ಯಾತ್ರೆಗೆ ಯಶಸ್ವಿಯಾಗಲಿ ಎಂದು ಶುಭ ಕೋರಿದರು.






About The Author
Discover more from JANADHWANI NEWS
Subscribe to get the latest posts sent to your email.