February 15, 2026
IMG-20260215-WA0380.jpg

ಚಳ್ಳಕೆರೆ:- ಮಹಾಶಿವರಾತ್ರಿ ಪ್ರಯುಕ್ತ ಹೊಸಗುಡ್ಡದ ರಾಮಲಿಂಗೇಶ್ವರ ಗುಹಾಂತರ ದೇವಾಲಯದಲ್ಲಿ ಗ್ರಾಮದ ಆರಾಧ್ಯ ದೈವ ಶ್ರೀ ರಾಮಲಿಂಗೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ ಭಕ್ತಿಭಾವದಿಂದ ಹಾಗೂ ವೈಭವದಿಂದ ನೆರವೇರಿತು.
ಶಿವರಾತ್ರಿ ಅಂಗವಾಗಿ ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ರುದ್ರಪಾರಾಯಣಗಳು ಜರುಗಿದವು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಆಶೀರ್ವಾದ ಪಡೆದರು.ಸಂಜೆ ವೇಳೆಗೆ ಸುಂದರವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಶ್ರೀ ರಾಮಲಿಂಗೇಶ್ವರ ಸ್ವಾಮಿಯನ್ನು ಭವ್ಯ ಮೆರವಣಿಗೆಯೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿಸಲಾಯಿತು. ನಾದಸ್ವರ, ಡೊಳ್ಳು-ಕುಣಿತ ಹಾಗೂ ಭಜನ ಮಂಡಳಿಗಳ ಗಾಯನದಿಂದ ಊರಿನಲ್ಲೆಲ್ಲಾ ಭಕ್ತಿಮಯ ವಾತಾವರಣ ನಿರ್ಮಾಣವಾಯಿತು.
ಮಹಿಳೆಯರು ಆರತಿ ಬೆಳಗಿ, ಹೂವಿನ ಮಳೆಯೊಂದಿಗೆ ಸ್ವಾಮಿಗೆ ಭಕ್ತಿಯಿಂದ ಸ್ವಾಗತ ಕೋರಿದರು. ಗ್ರಾಮಸ್ಥರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಿದರು. ಭಕ್ತರಿಗೆ ಪ್ರಸಾದ ವಿತರಣೆ ಕೂಡ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನವು ಶತಮಾನಗಳ ಇತಿಹಾಸ ಹೊಂದಿದ್ದು, ಹಲವು ವರ್ಷಗಳ ಕಾಲ ತನ್ನ ಗತವೈಭವ ಮರೆಮಾಚಿಕೊಂಡಿತ್ತು. ಸ್ಥಳೀಯರ ಸಹಕಾರದಿಂದ ಸುಮಾರು 15 ವರ್ಷಗಳ ಹಿಂದೆ ದೇವಸ್ಥಾನ ಜೀರ್ಣೋದ್ಧಾರಗೊಂಡು ಮತ್ತೆ ಚೇತರಿಸಿಕೊಂಡಿತು. ಅದಿನಿಂದ ಪ್ರತಿವರ್ಷ ಪಲ್ಲಕ್ಕಿ ಉತ್ಸವವನ್ನು ನಿರಂತರವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಮಾಜಿ ಶಾಸಕ ತಿಪ್ಪೇಸ್ವಾಮಿ ಅವರು ನೀಡಿದ ಒಂದು ಕೋಟಿ ರೂಪಾಯಿ ಅನುದಾನದಿಂದ ದೇವಸ್ಥಾನ ಅಭಿವೃದ್ಧಿಗೆ ಮತ್ತಷ್ಟು ಬಲವಾಯಿತು. ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಪ್ರತಿವರ್ಷ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಉತ್ಸವವನ್ನು ಅದ್ದೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading