January 29, 2026
IMG-20260115-WA0403.jpg

ಚಿತ್ರದುರ್ಗ
ಚದುರಿಕೊಂಡಿದ್ದ ಭೋವಿ ಸಮಾಜವನ್ನು ಒಗ್ಗೂಡಿಸಿ ಸಂಘಟಿತ ಶಕ್ತಿಯಾಗಿ ರೂಪಿಸುವಲ್ಲಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ಸೇವೆ ಅಪಾರವಾದದ್ದು ಎಂದು ಶಾಸಕ ಡಾ. ಎಂ. ಚಂದ್ರಪ್ಪ ಶ್ಲಾಘಿಸಿದರು.
ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಆಯೋಜಿಸಿದ್ದ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಗಳ ನಿರಂತರ ಶ್ರಮದ ಫಲವಾಗಿ ಭೋವಿ ಸಮಾಜ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಘಟನೆಯಾಗಿ ಗುರುತಿಸಿಕೊಂಡಿದೆ ಎಂದರು.

2027ರ ಜನವರಿ 14ರಂದು ಹೊಳಲ್ಕೆರೆಯಲ್ಲಿ ರಾಜ್ಯಮಟ್ಟದ ಬೃಹತ್ ಸಿದ್ಧರಾಮೇಶ್ವರ ಜಯಂತಿಯನ್ನು ಆಯೋಜಿಸಲಾಗುವುದು. ಈ ಸಮಾವೇಶಕ್ಕೆ ರಾಜ್ಯದ ಎಲ್ಲಾ ಮುಖಂಡರನ್ನು ಆಹ್ವಾನಿಸಲಾಗುತ್ತದೆ ಎಂದು ತಿಳಿಸಿದರು.
ಭೋವಿ ಗುರುಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಸಿದ್ಧರಾಮೇಶ್ವರರು ವಚನ ಚಳವಳಿಯ ಅತ್ಯಂತ ಮಹತ್ವದ ಶಕ್ತಿ. ಕಲ್ಯಾಣದಲ್ಲಿ ಶರಣರ ಮೇಲೆ ನಡೆದ ಹಿಂಸೆಯ ನಂತರವೂ ವಚನ ಸಾಹಿತ್ಯ ಹಾಗೂ ಚಳವಳಿಯ ಚಲನಶೀಲತೆಯನ್ನು ಕಾಪಾಡಿದವರು ಸಿದ್ಧರಾಮೇಶ್ವರರು ಎಂದು ಹೇಳಿದರು.
ಶೈವ ಪರಂಪರೆಯಲ್ಲಿ ‘ಸ್ಥಾವರದಲಿ ನಿಷ್ಠೆ, ಭೂತಂಗಳಲಿ ಅನುಕಂಪೆ, ತಾನೇ ಪರಬೊಮ್ಮ’ ಎಂಬ ತಾತ್ವಿಕ ನಿಲುವು ಹೊಂದಿದ್ದ ಸಿದ್ಧರಾಮೇಶ್ವರರು, ಬಸವಕಲ್ಯಾಣದಲ್ಲಿ ಶರಣತತ್ವವನ್ನು ಸ್ವೀಕರಿಸಿ ವಚನ ಸಾಹಿತ್ಯವನ್ನು ಸಮೃದ್ಧಗೊಳಿಸಿದರು. ಇಂದು ಸಿದ್ಧರಾಮೇಶ್ವರರನ್ನು ನಮ್ಮ ಕುಲಗುರುಗಳಾಗಿ ಆರಾಧಿಸಲಾಗುತ್ತಿದೆ. ಆರಾಧನೆ ಕೇವಲ ಆಚರಣೆಯಾಗದೆ, ಮೌಲ್ಯಾಧಾರಿತ ಚಿಂತನೆಯಾಗಬೇಕು ಎಂಬ ಉದ್ದೇಶದಿಂದ ಗುರುಪೀಠವು ಅವರ ಮೌಲ್ಯಗಳ ಪ್ರಚಾರವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.
ಕುಂಚಟಿಗ ಗುರುಪೀಠದ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಸಿದ್ಧರಾಮೇಶ್ವರರು ಕಾಯಕ ವರ್ಗದ ಅಸ್ಮಿತೆ. ಬದುಕಿನ ಪರಿವರ್ತನೆಗೆ ದರ್ಪಣವಾದ ಅವರ ಜೀವನ ಮೌಢ್ಯ ಸಂಪ್ರದಾಯಗಳಿಂದ ಮೌಲ್ಯ ಸಂಪ್ರದಾಯಗಳಿಗೆ ದಾರಿ ತೋರಿಸಿದೆ ಎಂದರು. ವಚನಗಳಲ್ಲಿ ಮೌಢ್ಯದ ತಿರಸ್ಕಾರ ಹಾಗೂ ಬದುಕಿನ ಸತ್ಯದರ್ಶನ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದರು.
ಕೊರಟಗೆರೆಯ ಮಹಾಲಿಂಗ ಸ್ವಾಮೀಜಿ ಮಾತನಾಡಿ, ಸಿದ್ಧರಾಮರ ಬದುಕನ್ನು ಪವಾಡಪುರುಷ ಹಾಗೂ ವಚನಕಾರ-ಪರಿವರ್ತನ ಪುರುಷ ಎಂಬ ಎರಡು ಘಟ್ಟಗಳಾಗಿ ನೋಡಬಹುದು ಎಂದರು.
ಮೇದಾರ ಗುರುಪೀಠದ ಕೇತೇಶ್ವರ ಸ್ವಾಮೀಜಿ ಮಾತನಾಡಿ, ಕರ್ಮಯೋಗಿ ಸಿದ್ಧರಾಮರ ಜೀವನವು ಭಕ್ತಿ, ತ್ಯಾಗ ಮತ್ತು ಪರಿವರ್ತನೆಯ ಪ್ರತೀಕವಾಗಿದೆ ಎಂದು ವಿವರಿಸಿದರು.
ಬಂಜಾರ ಗುರುಪೀಠದ ನಂದಮಸಂದ ಸೇವಾಲಾಲ್ ಶ್ರೀಗಳು ಮಾತನಾಡಿ, ವೈಚಾರಿಕ ಪರಿವರ್ತನೆಯ ಮೂಲಕ ಸಿದ್ಧರಾಮರು ಶಿವಯೋಗಿಯಾಗಿ ರೂಪುಗೊಂಡ ವಿಚಾರವನ್ನು ವಿವರಿಸಿದರು.
ಈ ಸಂದರ್ಭದಲ್ಲಿ OCCII ರಾಜ್ಯಾಧ್ಯಕ್ಷ ಹೆಚ್. ಆನಂದಪ್ಪ, ಬಂಡೆ ರುದ್ರಪ್ಪ, ಕಾಳಘಟ್ಟ ಹನುಮಂತಪ್ಪ, ಡಿ.ಸಿ. ಮೋಹನ, ಪೇಂಟ್ ತಿಮ್ಮಣ್ಣ, ಹೆಚ್. ಲಕ್ಷ್ಮಣ್, ಗೌನಹಳ್ಳಿ ಗೋವಿಂದಪ್ಪ, ಇಒ ರವಿಕುಮಾರ, ಪಿಡಿಎ ಆನಂದ, ಚಂದ್ರಶೇಖರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading