January 30, 2026
IMG-20250115-WA0087.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ): ತಾಲೂಕಿನ ಚುಂಚನಕಟ್ಟೆಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಕೋದಂಡರಾಮ ದೇವರ ಬ್ರಹ್ಮ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಸಾವಿರಾರು ಜನರ ನಡುವೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯವನ್ನು ಹೂವು ಹಾಗೂ ವಿದ್ಯುತ್ ದೀಪಗಳಿಂದ ವಿಶೇಷವಾಗಿ ಶೃಂಗಾರಮಾಡಲಾಗಿತ್ತು.

ದೇವಾಲಯದಲ್ಲಿ ಶ್ರೀರಾಮದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ಕಾರ್ಯಗಳನ್ನು ನೆರವೇರಿಸಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ರಥೋತ್ಸವಕ್ಕೆ ಶಾಸಕ ಡಿ.ರವಿಶಂಕರ್ ಚಾಲನೆ ನೀಡಿದರು.

ರಥಕ್ಕೆ ಸಾರ್ವಜನಿಕರು ಹಣ್ಣು ಜವನಗಳನ್ನು ಎಸೆಯುವ ಮೂಲಕ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.

ರಥೋತ್ಸವದಲ್ಲಿ ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ, ತುಮಕೂರು, ಬೆಂಗಳೂರು, ರಾಮನಗರ, ಕೋಲಾರ ಸೇರಿದಂತೆ ನಾಡಿನ ಹಲವು ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.

ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣರಾಜು ಅವರ ನೇತೃತ್ವದಲ್ಲಿ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ರಥೋತ್ಸವದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಭಕ್ತರುಗಳು ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆಗಳನ್ನು ಸಲ್ಲಿಸಿದರು.

ಜಾತ್ರಾ ಮಹೋತ್ಸವದಲ್ಲಿ ತಂಪು ಪಾನೀಯ, ಆಟಿಕೆ ಸಾಮಾನುಗಳು, ಹೋಟೆಲ್ ಗಳು, ಗೃಹ ಉಪಯೋಗಿ ವಸ್ತುಗಳು, ಬಳೆ, ಹಣ್ಣು, ಕಾಯಿ ಅಂಗಡಿಗಳು, ಸಿಹಿ ತಿಂಡಿಗಳು ಸೇರಿದಂತೆ ವಿವಿಧ ಮಾದರಿಯ ಅಂಗಡಿಗಳು, ಮಳಿಗೆಗಳು ತಲೆಯೆತ್ತಿ ಸಾರ್ವಜನಿಕರನ್ನು ತಮ್ಮತ್ತ ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದು ಕಂಡುಬಂದಿತು.

ರಥೋತ್ಸವದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಗಾವಡಗೆರೆ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿಗಳು, ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದ ಪುರಿ ಸ್ವಾಮೀಜಿಗಳು, ಶಾಸಕರ ಪತ್ನಿ ಸುನಿತಾ, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಪತ್ನಿ ವನಜಾಕ್ಷಮ್ಮ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ತಹಶೀಲ್ದಾರ್ ಎಸ್.ಎನ್.ನರಗುಂದ, ದೇವಾಲಯದ ಇಓ ರಘು, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು, ವಿವಿಧ ಸಂಘ ಸಂಸ್ಥೆಗಳವರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading