ಚಿತ್ರದುರ್ಗ ನ. 14:
ಪೋಷಕರು ಮತ್ತು ಸಂಬಂಧಿಕರು ಮಕ್ಕಳನ್ನು ಅನಾಥರನ್ನಾಗಿ ಬೇರ್ಪಡಿಸದಿರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.
ಶುಕ್ರವಾರ ನಗರದ ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಆಯೋಜಿಸಲಾದ ‘ಅಂತರಾಷ್ಟ್ರೀಯ ದತ್ತು ಮಾಸಾಚರಣೆ’ ಅಂಗವಾಗಿ ದತ್ತು ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ನಿಸರ್ಗ ಮತ್ತು ನೇಸರ ಎಂದು ನಾಮಕರಣ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ಮಕ್ಕಳು ಕೂಡ ಅನಾಥರಲ್ಲ. ಪೋಷಕರು ಹಾಗೂ ಸಂಬಂಧಿಕರು ತಮ್ಮ ತಮ್ಮ ಮಕ್ಕಳನ್ನು ಅನಾಥರನ್ನಾಗಿ ಮಾಡುವುದು ಮಾನವ ಧರ್ಮಕ್ಕೆ ವಿರುದ್ಧವಾಗಿದೆ. ಸರ್ಕಾರ ಅನಾಥ ಮಕ್ಕಳನ್ನು ಸಂರಕ್ಷಿಸಿ ಮೂಲಭೂತ ಸೌಕರ್ಯಗಳನ್ನು ನೀಡಿ ಸಲಹುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ, ಮಮತೆಯ ತೊಟ್ಟಿಲು ಎಂಬ ಯೋಜನೆ ಮೂಲಕ ಅನಾಥ ಮಕ್ಕಳನ್ನು ಸಾಕಿ ಬೆಳೆಸುತ್ತಿದೆ. ಪೋಷಕರಿಲ್ಲದೆ ಎಲ್ಲಾದರು ಅನಾಥ ಮಕ್ಕಳು ಕಂಡುಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಅನಾಥ ಮಕ್ಕಳನ್ನು ಒಪ್ಪಿಸಿ ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕ್ಕೆ ಕರೆ ಮಾಡಿ ಸಂಪರ್ಕಿಸಬಹುದು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ್ ಮಾತನಾಡಿ ಮನಃಶಾಂತಿಗೆ, ಶ್ರೇಯೋಭಿವೃದ್ಧಿಗೆ, ಆತ್ಮಸಂತೋಷಕ್ಕೆ ಹಾಗೂ ಆರೋಗ್ಯ ಪೂರ್ಣ ಜೀವನಕ್ಕೆ ಇಂತಹ ಪುಣ್ಯದ ಕೆಲಸದಲ್ಲಿ ಭಾಗಿಯಾಗಿ ಅನಾಥ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಸಂತಸ ತರುತ್ತದೆ ಎಂದು ಹೇಳಿದ ಅವರು, ಅನಾಥ ಮಕ್ಕಳನ್ನು ಉಪಚರಿಸುವಾಗ ತಮ್ಮ ಮಕ್ಕಳಂತೆ ಬಾಲ ಮಂದಿರದ ಮಕ್ಕಳಿಗೂ ಕೂಡ ಯಾವುದೇ ಕುಂದು ಕೊರತೆ ಕಾಣದಂತೆ ನೋಡಿಕೊಳ್ಳಬೇಕು, ಸರ್ಕಾರದ ನೀತಿ, ನಿರ್ದೇಶನದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಸತ್ಕರಿಸಬೇಕು ಎಂದು ಸಿಂಬಂದಿಗಳಿಗೆ ಕಿವಿ ಮಾತು ಹೇಳಿದರು.
ಜಿಲ್ಲಾ ಮಕ್ಕಳ ಘಟಕದ ರಕ್ಷಣಾಧಿಕಾರಿ ಕೆ. ಪ್ರೇಮಮೂರ್ತಿ ಮಾತನಾಡಿ ಮಕ್ಕಳ ರಕ್ಷಣೆಯಲ್ಲಿ ಎಲ್ಲ ನಾಗರಿಕರ ಪಾತ್ರ ಬಹಳ ಮುಖ್ಯವಾಗಿದೆ. ಪೋಷಕರಿಲ್ಲದ ಮಕ್ಕಳ ಜನ್ಮೋತ್ಸವದಲ್ಲಿ ನಾವೆಲ್ಲರೂ ಒಟ್ಟು ಕುಟುಂಬದಲ್ಲಿ ಸಿಗುವ ಎಲ್ಲಾ ಪ್ರೀತಿ ವಿಶ್ವಾಸವನ್ನು ನೀಡಬೇಕು. ಸರ್ಕಾರದ ಮುಖ್ಯ ಯೋಜನೆಗಳೊಂದಿಗೆ ಮೂಲಭೂತ ಹಕ್ಕುಗಳನ್ನು ಒದಗಿಸುವ ಪುಣ್ಯದ ಕೆಲಸ ಮಾಡುವುದು ಇಲಾಖೆಯ ಕರ್ತವ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಡಿ.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಗಂಗಪ್ಪ ಹಾಗೂ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
==========
About The Author
Discover more from JANADHWANI NEWS
Subscribe to get the latest posts sent to your email.