ಚಿತ್ರದುರ್ಗಅ.14:
ಪ್ರಾದೇಶಿಕ ತಿಳುವಳಿಕೆಯನ್ನು ರಾಷ್ಟ್ರೀಯ, ಅಂತರಾಷ್ಟ್ರೀಯಗೊಳಿಸುವ ಶಕ್ತಿ ಅನುವಾದಕ್ಕಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಹೇಳಿದರು.

ನಗರದ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ವಿಭಾಗದ ಸಭಾಂಗಣದಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ಕನ್ನಡ ಮತ್ತು ಇಂಗ್ಲಿಷ್ ವಿಭಾಗ ಇವರುಗಳ ಸಹಯೋಗದಲ್ಲಿ “ಭಾಷಾಂತರ ಪ್ರಸ್ತುತತೆ” ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಅನುವಾದ ಎಂಬ ಮಾಧ್ಯಮ ಮೂಲಕ ನಮ್ಮ ಕನ್ನಡ ನೆಲದ ಸಂಸ್ಕøತಿ, ತಿಳುವಳಿಕೆ ಅರಿವು ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಲು ಸಾಧ್ಯವಿದೆ. ಹಾಗಾಗಿ ಅನುವಾದ ತುಂಬಾ ಮಹತ್ವವಾದುದು ಎಂದು ತಿಳಿಸಿದ ಅವರು, ಸೃಜನಶೀಲ ಲೇಖಕರರು ಜೊತೆ ಜೊತೆಗೆ ಅನುವಾದಕರಾಗಿಯೂ ಕೆಲಸ ಮಾಡಬೇಕಾದ ತುಂಬಾ ಜರೂರಿದೆ. ಈಗಾಗಲೇ ರಾಜ್ಯದಲ್ಲಿ ಅನುವಾದಕರ ಪಡೆ ಇದೆ. ಇದು ನಿಲ್ಲಬಾರದು, ಅದರ ಮುಂದುವರಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ನಮ್ಮನ್ನು ಒಂದು ಕಡೆ ಸೇರಿಸುವ ಶಕ್ತಿ ಅನುವಾದಕ್ಕೆ ಇದೆ. ಹಲವು ಸಂಸ್ಕøತಿ, ಭಾಷೆ, ನಂಬಿಕೆ, ಸಿದ್ದಾಂತಗಳನ್ನು ಅರ್ಥ ಮಾಡಿಕೊಂಡು ಸಮಾನವಾಗಿ ತಿಳುವಳಿಕೆ ನಮ್ಮೊಳಗೆ ಮಾಡಲು ಅನುವಾದಕ್ಕೆ ಸಾಧ್ಯವಿದೆ. ಶಬ್ದಗಳಿಗೆ ರೆಕ್ಕೆಗಳಿವೆ, ಹಾರುವ ಸಾಮಥ್ರ್ಯವೂ ಇದೆ. ಅದು ಸರಿಯಾದ ದಿಕ್ಕಿಗೆ ನಡೆಯಲು ತಲುಪಿಸೇಕಾದ ಕೆಲಸವನ್ನು ಮಾಡಬೇಕಾದವರು ಅನುವಾದಕರು. ಅನುವಾದಕರು ಮತ್ತು ಮೂಲಪಠ್ಯ ಎರಡೂ ಸೇರಿಕೊಂಡು ಜಗತ್ತಿನಾದ್ಯಂತ ಸಂಚಾರ ಮಾಡಲು ಸಾಧ್ಯವಿದೆ. ಕೇವಲ ಶಾಬ್ಧಿಕ ಅನುವಾದಗಳು ಅಷ್ಟೇ ಅಲ್ಲದೇ ಭಾಷಾಂತರ ವಿಶಾಲಾರ್ಥದಲ್ಲಿ ಮನುಷ್ಯನ ಎಲ್ಲ ಚಟುವಟಿಕೆಗಳು ಅನುವಾದಗಳೇ ಇದ್ದಂತೆ. ಅನುವಾದ ನಿರಂತರ ನಡೆದಿದೆ. ಅನುವಾದಕ್ಕೆ ಹೊಸ ಪಡೆ ನಿರ್ಮಾಣ ಮಾಡಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕಾರ್ಯಯೋಜನೆ ಹಾಕಿಕೊಂಡಿದೆ ಎಂದು ತಿಳಿಸಿದರು.
ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲರು ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದಸ್ಯ ಸಂಚಾಲಕ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಭಾಷಾಂತರದ ವ್ಯಾಪ್ತಿ ಹಿರಿದು. ನಿತ್ಯ, ಪ್ರತಿಕ್ಷಣ ಅನುವಾದ ಆಗುತ್ತಲೇ ಇದೆ. ಎಲ್ಲರ ಗ್ರಹಿಕೆಗಳು ಒಂದು ರೀತಿಯಲ್ಲಿ ಅನುವಾದವೇ. ಓದುವುದರಲ್ಲಿ, ಕೇಳುವುದರಲ್ಲಿ, ಮಾತಾಡುವುದರಲ್ಲಿಯೂ ಅನುವಾದವಿದೆ ಎಂದು ಹೇಳಿದರು.
ಮೂಲಭಾಷೆಯ ಪಠ್ಯವನ್ನಾಧರಿಸಿ ರೂಪಿಸಿದ ಅನುವಾದಗಳು, ಮೂಲ ಪಠ್ಯವನ್ನು ಅನುಸರಿಸಿ, ಅಗತ್ಯಕ್ಕೆ ತಕ್ಮಂತೆ ಅನುಸೃಷ್ಠಿಯಾದವುಗಳು. ಮೂಲ ಪಠ್ಯದ ಹೂರಣವನ್ನು ಸ್ಥಳೀಯವಾಗಿ ಅಗತ್ಯಕ್ಕೆ ತಕ್ಕಂತೆ ಪೂರಕವಾಗಿ ಬದಲಾಯಿಸಿಕೊಂಡ ರೂಪಾಂತರಗಳು ಹೀಗೆ ಯಾವ ಭಾಷಾಂತರದಲ್ಲೂ ಶ್ರೇಷ್ಠ ಕನಿಷ್ಟವೆಂಬ ತಾರತಮ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಹಾಗೂ ಐಕ್ಯೂಎಸಿ ಸಂಚಾಲಕಿ ಡಾ.ಆರ್.ತಾರಿಣಿ ಶುಭದಾಯಿನಿ ಮಾತನಾಡಿ, ಪ್ರತಿ ಭಾಷೆಗೂ ತನ್ನದೇಯಾದ ಅನನ್ಯತೆ ಇದೆ. ಈ ಅನನ್ಯತೆ ಹೇಗೆ ಮುಂದೆ ಭಾಷಾಂತರಕ್ಕೆ ಉಳಿದುಕೊಂಡು ಹೋಗಬಹುದು ಎಂಬ ವಿಷಯ ಬಂದಾಗ ಭಾಷೆಯ ಅನನ್ಯತೆ ತಿಳಿಯಲಿಕ್ಕೆ ಬಹುತೇಕ ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ. ಭಾಷಾಂತರ ಮಾಡಿದ ಸಂದರ್ಭದಲ್ಲಿ ಭಾಷೆಯ ಯಾವ ಗುಣವನ್ನಿಟ್ಟುಕೊಂಡು ಭಾಷಾಂತರಕ್ಕೆ ತೊಡಗುತ್ತದೆ ಎಂಬುವುದು ತುಂಬಾ ಮುಖ್ಯ ಎಂದು ತಿಳಿಸಿದ ಅವರು, ಭಾಷಾಂತರ ಮಾಡುತ್ತಾ ಮಾಡುತ್ತಾ ಹೋದಂತೆ ನಾವು ನಮ್ಮದೇಯಾದ ಪ್ರತಿ ಸೃಷ್ಠಿ, ಸೃಜನಶೀಲವಾದ ಸಾಧ್ಯತೆ ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಎರಡು ಭಾಷೆಗಳನ್ನು ಬಲ್ಲ ಭಾಷಾಂತರಕಾರ ಎರಡು ಭಾಷೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತನ್ನದೇಯಾದ ಇನ್ನೊಂದು ಸಾಧ್ಯತೆಯನ್ನೂ ಪ್ರಾಯಶಃ ಶೋಧಿಸಿಕೊಂಡಿರುತ್ತಾನೆ. ಹಾಗಾಗಿ ಮೂರನೇಯದಾದ ಭಾಷಾಂತರ ಬರುವ ಎಲ್ಲ ಸಾಧ್ಯತೆಗಳು ಇರುತ್ತವೆ ಎಂದು ಅಭಿಪ್ರಾಯಪಟ್ಟರು.
ಭಾಷಾಂತರ ಸಾಧ್ಯತೆಗಳು ಕುರಿತು ವಿಮರ್ಶಕ ಡಾ.ಕೆ.ಕೇಶವ ಶರ್ಮ ವಿಷಯ ಮಂಡನೆ ಮಾಡುತ್ತಾ, ಭಾಷಾಂತರ ಎಂದರೆ ಭಯಪಡುವ ಅಗತ್ಯವಿಲ್ಲ. ಸಾಂಸ್ಕøತಿಕ ಗ್ರಹಿಕೆಯಿಲ್ಲದೆ ಪ್ರತಿ ಪದವನ್ನು, ವಾಕ್ಯವನ್ನು ಅನುವಾದ ಮಾಡುವ ಜಡತ್ವ ಅನುವಾದಕರು ಇಂತಹ ವಾತಾವರಣ ಸೃಷ್ಟಿಸಿದ್ದಾರೆ. ಒಂದಿಷ್ಟು ಕೌಶಲ, ಸೂಕ್ಷ್ಮಗಳನ್ನು ಅರಿತು ಆನಂದಿಸುತ್ತಾ ಅದನ್ನು ಓದುಗನಿಗೆ ಸರಳವಾಗಿ ತಲುಪಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಸಾಮಾಜಿಕ, ಭಾಷಿಕ ಒತ್ತಡದಿಂದ ರೂಪುಗೊಳ್ಳುವ ಅನುವಾದ ಒತ್ತಡ ಸೂಚಕವಾಗಿ ಬಲವಂತದ ಹೇರಿಕೆ ಆಗಿರುತ್ತದೆ. ಆದ್ದರಿಂದ ಒಂದು ಕಥೆ ಓದಿದ ಮೇಲೆ ನಿಮ್ಮಲ್ಲಿ ಮೂಡುವ ಭಾವಕ್ಕೆ ಒಂದು ಭಾಷೆ ಇರುತ್ತದೆ. ಅದನ್ನೇ ನೀವು ಅಂದುಕೊಂಡ ಭಾಷೆಗೆ ಸಾಂಸ್ಕøತಿಕ ಗ್ರಹಿಕೆ ಮೂಲಕ ಬದಲಾಯಿಸುವ ಕೆಲಸ ಮಾಡಬೇಕು ಎಂದರು.
ಓದು ನಿರಂತವಾಗಿದ್ದಾಗ ಜ್ಞಾನ ಹಾಗೂ ಭಾವನೆ ವಿಸ್ತರಗೊಳ್ಳುತ್ತದೆ. ಜ್ಞಾನದ ಜಗತ್ತಿಗೆ ದಕ್ಕು ಎಲ್ಲದನ್ನು ಹಿಡಿದಿಟ್ಟು ಅರಗಿಸಿಕೊಳ್ಳುವ ಕೆಲಸ ಮಾಡಬೇಕು. ಕೌಶಲದ ಜತೆಗೆ ಕನಸು ಇದ್ದರೆ ಸಾಕು ಅನುವಾದ ಸರಳ ಸುಂದರವಾಗುತ್ತದೆ. ನಿಯಮ, ಸೂತ್ರಗಳು ಯಾವುದು ಇಲ್ಲ. ಜತೆಗೆ ಈ ಎಲ್ಲವನ್ನು ಆಳವಡಿಸಿಕೊಂಡು ಅನುವಾದ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣದಿಂದ ಹೊರಬಂದು ಜ್ಞಾನ ವಿಸ್ತರಿಸುವ ಬಾಗಿಲು ತೆರೆಯಿರಿ. ಏಕೆಂದರೆ ಜಾಗತಿಕ ಸ್ಪರ್ಧೆಯ ದಿನದಲ್ಲಿ ಹೆಜ್ಜೆ ಹಾಕುತ್ತಿದ್ದೇವೆ. ಇಲ್ಲಿನ ಪ್ರತಿ ದಿನವನ್ನು ಎದುರಿಸಲು ಸಜ್ಜಾಗಬೇಕು. ಅದಕ್ಕೆ ಅನುವಾದ ಬಹಳ ಮುಖ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎಚ್. ನಾಗವರ್ಮ, ಪರೀಕ್ಷಾ ನಿಯಂತ್ರಕ ಡಾ.ಬಿ.ಸುರೇಶ್, ಸಹಾಯಕ ಪ್ರಾಧ್ಯಾಪಕ ಪ್ರೊ.ಕೆ.ಮಂಜುನಾಥ್, ವಿಮರ್ಶಕರು ಹಾಗೂ ಅನುವಾದಕರಾದ ಡಾ.ಕೇಶವಶರ್ಮ, ಡಾ.ರಾಮಲಿಂಗಪ್ಪ ಟಿ.ಬೇಗೂರು, ಕಥೆಗಾರ ಹಾಗೂ ಅನುವಾದಕ ಪ್ರೊ.ಎಸ್.ಗಂಗಾಧರಯ್ಯ, ಸ್ನಾತಕೋತ್ತರ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಚಿತ್ತಯ್ಯ ಸೇರಿದಂತೆ ಮತ್ತಿತರರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.