September 14, 2025
1755182429240.jpg



ಚಿತ್ರದುರ್ಗ ಆಗಸ್ಟ್14:
ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಸವಿನೆನಪಿನಲ್ಲಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಚಿತ್ರದುರ್ಗ ನಗರದ ಮುರುಘರಾಜೇಂದ್ರ ಮಠದ ಅನುಭವ ಮಂಟಪದಲ್ಲಿ 6ನೇ ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್‍ಶಿಫ್ ಹಾಗೂ ಅಸ್ಮಿತಾ ಖೇಲೋ ಇಂಡಿಯಾ ರಾಜ್ಯ ಮಟ್ಟದ ಮಹಿಳಾ ಯೋಗಾಸನ ಸ್ಪೋರ್ಟ್ ಚಾಂಪಿಯನ್ ಶಿಫ್ ಆಯೋಜಿಸಲಾಗಿದೆ. ಆಗಸ್ಟ್ 22 ರಿಂದ 24 ರವರೆಗೆ ಮೂರು ದಿನಗಳ ಚಾಂಪಿಯನ್‍ಶಿಫ್‍ನಲ್ಲಿ ರಾಜ್ಯದ 32 ಜಿಲ್ಲೆಗಳಿಂದ 800 ಯೋಗ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 8 ವಿಭಿನ್ನ ವಯೋಮಿತಿ ವಿಭಾಗದಲ್ಲಿ 10 ಬಗೆಯ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಕಾರ್ಯದರ್ಶಿ ಹಾಗೂ ಏಷಿಯನ್ ಮತ್ತು ಯೋಗಾಸನ ಭಾರತ್ ಉಪಾಧ್ಯಕ್ಷ ಡಾ.ಎಂ.ನಿರಂಜನ ಮೂರ್ತಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಯೋಗಾಸನ ಚಾಂಪಿಯನ್‍ಶಿಫ್ ಆಯೋಜನೆ ಕುರಿತು ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಯೋಗಾಸನವನ್ನು ಸಹ ಕ್ರೀಡೆ ಎಂದು ಭಾವಿಸಿ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸ್ಥಾನ ದೊರಕಿಸಿ ಕೊಡಲು ಭಾರತ ಸರ್ಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಯತ್ನಿಸುತ್ತಿದ್ದಾರೆ. 2026ರಲ್ಲಿ ಜಪಾನ್‍ನಲ್ಲಿ ನಡೆಯಲಿರುವ ಏಷಿಯನ್ ಗೇಮ್ಸ್ ಹಾಗೂ 2036ರ ಒಲಂಪಿಕ್ ಗೇಮ್ಸ್‍ನಲ್ಲಿ ಭಾರತೀಯ ಕ್ರೀಡೆಗಳಾದ ಖೋ ಖೋ ಹಾಗೂ ಯೋಗಾಸನವನ್ನು ಸೇರ್ಪಡೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. 2036ರ ಒಲಂಪಿಕ್ ಗೇಮ್ಸ್ ಆಯೋಜನೆಯ ಬಿಡ್‍ನಲ್ಲಿ ಭಾರತ ಸರ್ಕಾರ ಭಾಗವಹಿಸಲಿದೆ ಎಂದು ಡಾ.ಎಂ.ನಿರಂಜನ ಮೂರ್ತಿ ತಿಳಿಸಿದರು.
ಯೋಗ ತರಬೇತಿ ನೀಡುವಲ್ಲಿ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿಯವರು ರಾಜ್ಯದಲ್ಲಿ ಹೆಸರು ವಾಸಿಯಾಗಿದ್ದರು. ರಾಘವೇಂದ್ರ ಸ್ವಾಮೀಜಿ ಸವಿನೆಪಿನಲ್ಲಿಯೇ ಯೋಗ ಕ್ರೀಡೆಗಳನ್ನು ನಡೆಸಲಾಗುವುದು. ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಯೋಗ ಪಟುಗಳು ಭಾಗವಹಿಸಲಿದ್ದಾರೆ. 80 ತೀರ್ಪುಗಾರರು ಕಾರ್ಯನಿರ್ವಹಿಸಲಿದ್ದಾರೆ. ಕ್ರೀಡಾ ಕೂಟದಲ್ಲಿ ಭಾಗವಹಿಸುವವರಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಿಜೇತರಿಗೆ ಹಾಗೂ ತಂಡಗಳಿಗೆ ಪ್ರಮಾಣ ಪತ್ರ, ಪದಕ ಹಾಗೂ ನಗದು ಪ್ರಶಸ್ತಿಯನ್ನು ನೀಡಲಾಗುವುದು. ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದ ಯೋಗ ಪಟುಗಳಿಗೆ ತರಬೇತಿ ನೀಡಿ ರಾಷ್ಟ್ರೀಯ ಯೋಗ ಚಾಂಪಿಯನ್‍ಶಿಫ್‍ನಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9538722430, 8073055699 ಗೆ ಸಂಪರ್ಕಿಸಬಹುದು ಡಾ.ಎಂ.ನಿರಂಜನ ಮೂರ್ತಿ ಕೋರಿದರು.
ಆಗಸ್ಟ್ 22ರಂದು ಬೆಳಿಗ್ಗೆ 11 ಗಂಟೆ ಕ್ರೀಡಾಕೂಟ ಉದ್ಘಾಟನೆ ಸಮಾರಂಭ ಹಾಗೂ ಆಗಸ್ಟ್ 24 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಗಣಿ ಮತ್ತು ಭೂ ವಿಜ್ಞಾನ ಸಚಿವ ಮಲ್ಲಿಕಾರ್ಜುನ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಗೋವಿಂದ ಕಾರಜೋಳ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವರು ಎಂದು ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಯೋಗಾಸನ ಕ್ರೀಡಾಕೂಟ ಆಯೋಜನೆಗೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಚಿತ್ರದುರ್ಗ ಇತಿಹಾಸ ಸಾರುವ ನಿಟ್ಟಿನಲ್ಲಿ ವೀಡಿಯೋ ತುಣುಕು ಪ್ರದರ್ಶಿಸಲಾಗುವುದು. ಅತಿಥಿ ದೇವೋ ಭವ ಎನ್ನುವಂತೆ ಬೇರೆ ಜಿಲ್ಲೆಗಳಿಂದ ಭಾಗವಹಿಸುವ ಕ್ರೀಡಾ ಪಟುಗಳು ಹಾಗೂ ಪೋಷಕರಿಗೆ ಆತಿಥ್ಯ ನೀಡಲಾಗುವುದು. ಚಿತ್ರದುರ್ಗ ನಗರದಲ್ಲಿ ಯೋಗ ಅಕಾಡೆಮಿ ಸ್ಥಾಪನೆಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ಉಪಾಧ್ಯಕ್ಷ ಡಾ.ಪರಶುರಾಮಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಜಿ.ಡಿ.ರಂಜಿತ್, ಸದಸ್ಯರಾದ ಸುಮಲತಾ, ಚಿತ್ರದುರ್ಗ ಜಿಲ್ಲಾ ಸಂಸ್ಥೆಯ ಚಿನ್ಮಯಾನಂದ, ಮುರುಳಿ ಹಾಗೂ ತಿಪ್ಪೇಸ್ವಾಮಿ ಇದ್ದರು.

=========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading