February 14, 2026
n70091210517710669300395b8dd2bb09f41096dc855228527f22090d727dce469a019dd2c85bba2f9505a0.jpg

ಹಾವೇರಿ ಫೆ14.ಕಂದಾಯ ಇಲಾಖೆಯಿಂದ ಹಕ್ಕುಪತ್ರ ವಿತರಣೆ ಹಾಗೂ ಸಹಸ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಮಹತ್ವದ ಘೋಷಣೆಗಳನ್ನು ಮಾಡಿದರು.ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ “ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ, ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎರಡನೇ ಹಂತದಲ್ಲಿ ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದುವರೆಗೆ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ದಾಖಲೆ ನಿರ್ಮಿಸಿದ್ದೇವೆ ಎಂದು ಹೇಳಿದರು.
ರಾಜ್ಯದ ಜಿಡಿಪಿ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದ್ದು, ಜಿಎಸ್‌ಟಿ ತೆರಿಗೆ ಸಂಗ್ರಹಣೆಯಲ್ಲೂ ರಾಜ್ಯ ದಾಖಲೆ ವೇಗದಲ್ಲಿ ಸಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ಈ ಎಲ್ಲಾ ಸಾಧನೆಗಳನ್ನು ಕೇಂದ್ರ ಸರ್ಕಾರದ ಅನ್ಯಾಯದ ನಡುವೆಯೂ ಮಾಡಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟರು.
ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಜಗದೀಶ್ ಶೆಟ್ಟರ್ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕೇಂದ್ರದಲ್ಲಿ ಧ್ವನಿ ಎತ್ತುತ್ತಿಲ್ಲ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸರ್ಕಾರಕ್ಕೆ 2 ವರ್ಷ 9 ತಿಂಗಳು ಪೂರ್ಣಗೊಂಡಿದ್ದು, ನೀಡಿದ್ದ 243 ಭರವಸೆಗಳನ್ನು ಈಡೇರಿಸಿದ್ದೇವೆ. ಉಳಿದ ಭರವಸೆಗಳನ್ನೂ ಅವಧಿಯೊಳಗೆ ಈಡೇರಿಸಲಾಗುವುದು ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳ ಮೂಲಕ ಇದುವರೆಗೆ ₹1,18,000 ಕೋಟಿ ನೇರವಾಗಿ ಜನರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದರು.
ಪ್ರಸಿದ್ಧ ಆರ್ಥಿಕ ತಜ್ಞರಾದ ಅಮರ್ತ್ಯ ಸೇನ್ ಮತ್ತು ಅಭಿಜಿತ್ ಬ್ಯಾನರ್ಜಿ ಸೇರಿದಂತೆ ಹಲವು ಅಧ್ಯಯನಗಳು ಸರ್ಕಾರದ ಕ್ರಮಗಳನ್ನು ಬೆಂಬಲಿಸಿವೆ ಎಂದು ಅವರು ಉಲ್ಲೇಖಿಸಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯಯುತ ಪಾಲು ಸಿಗುತ್ತಿಲ್ಲ. ಜಿಎಸ್‌ಟಿ ಸಂಗ್ರಹಣೆಯಲ್ಲಿ 12–15 ಸಾವಿರ ಕೋಟಿ ನಷ್ಟವಾಗಿದೆ. ಜಲ ಜೀವನ ಮಿಷನ್ (JJM) ಯೋಜನೆಯಡಿ 15 ಸಾವಿರ ಕೋಟಿ ರೂ. ಬಾಕಿ ಇದೆ. ಈ ಅನುದಾನ ಬಂದರೆ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬಹುದು ಎಂದು ಹೇಳಿದರು.
ಸಹಸ್ರ ದಿನಗಳ ಯಶಸ್ವಿ ಆಡಳಿತ ನಮ್ಮ ಜನಪರ ಬದ್ಧತೆಗೆ ಸಾಕ್ಷಿಯಾಗಿದೆ. ಬಡವರು, ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಕಾರ್ಮಿಕರ ಪರವಾಗಿ ನಮ್ಮ ಸರ್ಕಾರ ನಿಂತಿದೆ ಎಂದು ಸಿಎಂ ಪುನರುಚ್ಚರಿಸಿದರು.
ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರಾದ ಕೃಷ್ಣ ಭೈರೇಗೌಡ, ಶಿವಾನಂದ ಪಾಟೀಲ್, ಹೆಚ್.ಕೆ. ಪಾಟೀಲ್, ಸತೀಶ್ ಜಾರಕಿಹೊಳಿ, ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಹೆಚ್.ಎಂ. ರೇವಣ್ಣ, ಸಲೀಂ ಅಹ್ಮದ್ ಸೇರಿದಂತೆ ಹಲವಾರು ಶಾಸಕರು ಮತ್ತು ಮುಖಂಡರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading