February 14, 2026
07795560a15e4bb8a4712b877d41133d.jpg

ಚಿತ್ರದುರ್ಗ: ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ಅವರಿಗೆ ದಾವಣಗೆರೆ ವಿಶ್ವವಿದ್ಯಾನಿಲಯ ನೀಡಿದ ಗೌರವ ಡಾಕ್ಟರೇಟ್ ಹಿನ್ನೆಲೆ, ನಗರದ ಭೋವಿ ಗುರುಪೀಠದಲ್ಲಿ ಫೆಬ್ರವರಿ 13ರಂದು ಭವ್ಯ ಅಭಿನಂದನಾ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮಾತನಾಡಿ, ಭೋವಿ ಸಮಾಜ ಅತ್ಯಂತ ಸ್ವಾಭಿಮಾನಿ ಹಾಗೂ ಸ್ವಾವಲಂಬಿ ಸಮಾಜವಾಗಿದ್ದು, ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿರುವ ಭೋವಿ ಮಹಾಸಂಸ್ಥಾನಕ್ಕೆ ಅಗತ್ಯ ನೆರವು ನೀಡಲು ಸದಾ ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.

“ಎಂ. ರಾಮಪ್ಪ ಅವರು ಸರಳಜೀವಿ ಹಾಗೂ ಆತ್ಮೀಯ ವ್ಯಕ್ತಿ. ಅವರಂತಹವರು ನಿಗಮದ ಅಧ್ಯಕ್ಷರಾಗಿರುವುದು ಸಂತೋಷದ ವಿಷಯ. ಮಠಗಳತ್ತ ನಾನು ಹೆಚ್ಚು ಹೋಗದಿದ್ದರೂ, ಭೋವಿ ಮಹಾಸಂಸ್ಥಾನದ ಗುರುಗಳ ಸರಳತೆ ಮತ್ತು ಸಜ್ಜನಿಕೆ ನನ್ನನ್ನು ಆಕರ್ಷಿಸಿದೆ. ಅಧಿಕಾರವಿರುವವರೆಗೆ ಮಠಕ್ಕೆ ನನ್ನಿಂದಾದ ಸಹಾಯ ಮಾಡುತ್ತೇನೆ,” ಎಂದರು.
ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ, ಭೋವಿ ಗುರುಪೀಠ ಸಮಾಜದಲ್ಲಿ ಪ್ರಭಾವಿ ಮಠವಾಗಿ ಬೆಳೆದಿದ್ದು, ಅದಕ್ಕೆ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಮಾರ್ಗದರ್ಶನ ಕಾರಣ ಎಂದರು. ನಿಗಮದ ಸೌಲಭ್ಯಗಳನ್ನು ಸಮಾಜದ ತಳಹದಿ ವರ್ಗಗಳಿಗೆ ತಲುಪಿಸುವಲ್ಲಿ ರಾಮಪ್ಪ ಶ್ರಮಿಸಲಿ ಎಂದು ಆಶಿಸಿದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, “2008ರಿಂದಲೇ ರಾಮಪ್ಪ ನನ್ನ ಆತ್ಮೀಯರು. ಎಲ್ಲರಿಗೂ ಎಲ್ಲ ಅವಕಾಶ ಸಿಗುವುದಿಲ್ಲ. ಇವತ್ತು ಅವರು ಕೇವಲ ಅಧ್ಯಕ್ಷರಲ್ಲ, ಡಾಕ್ಟರ್ ಆಗಿದ್ದಾರೆ. ಅವರ ಸಮಾಜಸೇವೆಗೆ ಈ ಪದವಿ ದೊರೆತಿದೆ,” ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿದ ಎಂ. ರಾಮಪ್ಪ ಮಾತನಾಡಿ, “ನನ್ನದೇ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುವುದು ಮುಜುಗರದ ವಿಷಯ. ಕೆಳಹಂತದಿಂದ ಬಂದವನಾಗಿರುವುದರಿಂದ ಜನರ ಸಮಸ್ಯೆಗಳು ನನಗೆ ಗೊತ್ತಿವೆ. ಭೋವಿ ನಿಗಮದ ಅಧ್ಯಕ್ಷನಾಗುವ ಕನಸೇ ಇರಲಿಲ್ಲ. ಸಿಕ್ಕಿರುವ ಈ ಅವಕಾಶವನ್ನು ಪ್ರಾಮಾಣಿಕವಾಗಿ ನಿಭಾಯಿಸುವೆ,” ಎಂದು ಹೇಳಿದರು.
ಹೊಳೆಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ಮಾತನಾಡಿ, ಸಮಾಜದ ವಿಶ್ವಾಸ ಹೊಂದಿರುವ ವ್ಯಕ್ತಿಯಾಗಿ ರಾಮಪ್ಪರನ್ನು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿ ನೇಮಕ ಮಾಡಲಾಗಿದೆ. ನಿಗಮವನ್ನು ಸರಿದಾರಿಗೆ ಕೊಂಡೊಯ್ಯುವ ವಿಶ್ವಾಸವಿದೆ ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಭೋವಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, “ಜೀವನದಲ್ಲಿ ಪರೀಕ್ಷೆಯ ಕಾಲ ಎಲ್ಲರಿಗೂ ಬರುತ್ತದೆ. ಅರ್ಹತೆ ಇದ್ದರೂ ಅದೃಷ್ಟ ತಡವಾಗಿ ಬರುತ್ತದೆ. ರಾಮಪ್ಪ ಅವರಿಗೆ ಈಗ ಅದೃಷ್ಟ ಒಲಿದಿದೆ. ಅಧಿಕಾರವಿದ್ದಾಗ ಜನರಿಗೆ ಏನು ಮಾಡಿದ್ದೇವೆ ಎನ್ನುವುದು ಮುಖ್ಯ,” ಎಂದು ಹೇಳಿದರು.
ಅಧ್ಯಕ್ಷರಾಗಿ ಕೇವಲ ನಾಲ್ಕು-ಐದು ತಿಂಗಳಲ್ಲಿ ಅರ್ಧ ಕರ್ನಾಟಕವನ್ನು ಸುತ್ತಿ ಜನರ ಸಮಸ್ಯೆಗಳನ್ನು ಅರಿತು, ಪ್ರತಿ ಜಿಲ್ಲೆಯಲ್ಲಿ ಬೌದ್ಧಿಕ ಕಾರ್ಯಾಗಾರಗಳನ್ನು ನಡೆಸುತ್ತಿರುವುದು ಗಮನಾರ್ಹ ಎಂದು ಪ್ರಶಂಸಿಸಿದರು. ಮೈಸೂರು ಭಾಗದಲ್ಲಿ ಭೂಹಕ್ಕು ಮತ್ತು ರೈತರ ಸಮಸ್ಯೆಗಳ ಕುರಿತು ಹೋರಾಟ ನಡೆಸಿದ ಹಿನ್ನಲೆ ರಾಮಪ್ಪ ಅವರಿಗೆ ಸಮಾಜದಲ್ಲಿ ವಿಶಿಷ್ಟ ಸ್ಥಾನ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಭೋವಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವೈ. ರವಿಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading