ಚಳ್ಳಕೆರೆ:
ಪ್ರತಿಯೊಬ್ಬ ನಾಗರಿಕನು ಸಂವಿಧಾನ ನೀಡಿರುವ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಅರಿತು ಜವಾಬ್ದಾರಿಯಿಂದ ನಡೆದುಕೊಂಡಾಗ ಮಾತ್ರ ಶಾಂತಿಯುತ ಹಾಗೂ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಚಳ್ಳಕೆರೆ ವೃತ್ತ ನಿರೀಕ್ಷಕ ಕೆ. ಕುಮಾರ್ ಹೇಳಿದರು.
ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಜಾಗೃತಿ ಜಾತ್ರೆ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿದ್ದು, ವಿದ್ಯಾವಂತರು ಹಾಗೂ ಉದ್ಯೋಗಸ್ಥರು ಕೂಡಾ ಇದಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಸಾರ್ವಜನಿಕರು ಇಂತಹ ಅಪರಾಧಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಅವರು ಸಲಹೆ ನೀಡಿದರು.
ಬಾಲ್ಯವಿವಾಹ, ವರದಕ್ಷಿಣೆ ಪಿಡುಗು, ಬಾಲ ಕಾರ್ಮಿಕ ಪದ್ಧತಿ, ರಸ್ತೆ ಅಪಘಾತಗಳು ಹಾಗೂ ಮೊಬೈಲ್ ಬಳಕೆಯ ಅತಿರೇಕ ದಿನೇದಿನೇ ಹೆಚ್ಚುತ್ತಿದೆ. ಜೊತೆಗೆ ಯುವಜನತೆ ಮದ್ಯಪಾನ ಸೇರಿದಂತೆ ವಿವಿಧ ವ್ಯಸನಗಳಿಗೆ ದಾಸರಾಗುತ್ತಿರುವುದು ಸಮಾಜದ ಭವಿಷ್ಯಕ್ಕೆ ಅಪಾಯಕಾರಿಯಾಗಿದೆ. ಕುಟುಂಬಗಳಲ್ಲಿ ಉತ್ತಮ ವಾತಾವರಣದ ಕೊರತೆಯಿಂದ ಯುವಕರು ಇಂತಹ ದುಷ್ಚಟಗಳಿಗೆ ಒಳಗಾಗುತ್ತಿದ್ದಾರೆ. ದೇಶದ ಭವಿಷ್ಯ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಮಹತ್ವದ್ದಾಗಿದ್ದು, ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಾಜ ನಾಯಕ್ ಮಾತನಾಡಿ, ಕಾನೂನು ಪಾಲನೆಯ ಮಹತ್ವ ಎಲ್ಲರಿಗೂ ತಿಳಿದಿದ್ದರೂ ನಾಟಕಗಳ ಮೂಲಕ ಇನ್ನೂ ಜಾಗೃತಿ ಮೂಡಿಸಬೇಕಾಗಿರುವುದು ವಿಷಾದಕರ ಸಂಗತಿಯಾಗಿದೆ. ಇಂದಿನ ತ್ವರಿತ ಜೀವನಶೈಲಿಯಲ್ಲಿ ಎಲ್ಲ ಮಾಹಿತಿಯೂ ಕ್ಷಣಾರ್ಧದಲ್ಲಿ ಲಭ್ಯವಾಗುತ್ತಿರುವಾಗ ಯುವಜನತೆ ಕಾನೂನನ್ನು ಸರಿಯಾದ ರೀತಿಯಲ್ಲಿ ಪಾಲಿಸಿದರೆ ಇಂತಹ ಜಾಗೃತಿ ಕಾರ್ಯಕ್ರಮಗಳ ಅಗತ್ಯವೇ ಇರುವುದಿಲ್ಲ. ಇಂದಿನ ನಾಟಕದ ಸಂದೇಶವಾದರೂ ಯುವಕರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಎಂ.ಕೆ. ದೇವಪ್ಪ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.