January 29, 2026
IMG-20260114-WA0162.jpg

ಹಿರಿಯೂರು:
ಭೀಮನಬಂಡೆ ಸಮೀಪದ ಯಾಜ್ಞವಲ್ಕ್ಯ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ಹಾಗೂ ಯಾಜ್ಞವಲ್ಕ್ಯ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಎಂ.ಆರ್. ರಂಗಸ್ವಾಮಿ ಅವರು ಉದ್ಘಾಟಿಸಿ ಮಾತನಾಡಿ, ಜನನ ಪ್ರಮಾಣ ಪತ್ರದಿಂದ ಮರಣ ಪ್ರಮಾಣ ಪತ್ರದವರೆಗೆ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನ ಅರಿವು ಅಗತ್ಯ. ಉತ್ತಮ ಸಮಾಜ ನಿರ್ಮಾಣಕ್ಕೆ ಕಾನೂನು ಜ್ಞಾನ ಅತ್ಯವಶ್ಯಕ ಎಂದರು.
ಯುವ ದಿನಾಚರಣೆಯ ಹಿನ್ನೆಲೆ ಸ್ವಾಮಿ ವಿವೇಕಾನಂದರ ಜೀವನ, ಸಾಧನೆ ಮತ್ತು ಆದರ್ಶಗಳನ್ನು ಸ್ಮರಿಸಿ ಮಾತನಾಡಿದ ಅವರು, ವಿವೇಕಾನಂದರು ಚಿಕ್ಕ ವಯಸ್ಸಿನಲ್ಲಿಯೇ ಉಪನಿಷತ್ತುಗಳು ಹಾಗೂ ಆಧ್ಯಾತ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿ ದೇಶ–ವಿದೇಶಗಳಲ್ಲಿ ಸಂಚರಿಸಿ ಸರ್ವಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಮಹತ್ವವನ್ನು ಜಗತ್ತಿಗೆ ಪರಿಚಯಿಸಿದರು ಎಂದರು.
ಆತ್ಮವಿಶ್ವಾಸ, ಶಕ್ತಿಶಾಲಿ ಮನಸ್ಸು ಹಾಗೂ ಉಕ್ಕಿನಂತೆ ಗಟ್ಟಿಯಾದ ದೇಹ ಯುವಕರಲ್ಲಿ ಇದ್ದಾಗ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಶ್ರೀನಿವಾಸಮೂರ್ತಿ ಮಾತನಾಡಿ, ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂಬ ವಿವೇಕಾನಂದರ ಸಂದೇಶವನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದರು. ಸಿನಿಮಾ ನಟರು ಅಥವಾ ಕ್ರಿಕೆಟ್ ಆಟಗಾರರು ಅಲ್ಲ, ಸರಿಯಾದ ದಾರಿ ತೋರಿಸುವ ಮಹಾನಾಯಕರು ಯುವಜನತೆಗೆ ಆದರ್ಶವಾಗಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ವಕೀಲರ ಸಂಘದ ಸದಸ್ಯ ಶ್ರೀ ಮಹಾಲಿಂಗಪ್ಪ ಅವರು, ಸ್ವಾಮಿ ವಿವೇಕಾನಂದರು ಬಾಲ್ಯದಿಂದಲೇ ಧೈರ್ಯ, ನಾಯಕತ್ವ ಮತ್ತು ತಪ್ಪುಗಳನ್ನು ಖಂಡಿಸುವ ಗುಣ ಹೊಂದಿದ್ದರು ಎಂದು ತಿಳಿಸಿದರು. ಯುವಕರು ತಮ್ಮ ಹಕ್ಕು–ಕರ್ತವ್ಯಗಳ ಬಗ್ಗೆ ಕಾನೂನು ಅರಿವು ಬೆಳೆಸಿಕೊಳ್ಳಬೇಕು ಎಂದರು.
ಸಹಾಯಕ ಕಾನೂನು ನೆರವು ಅಭಿಕ್ಷಕ ಶ್ರೀಮತಿ ಸೋಮ ಮಾತನಾಡಿ, ವಿವೇಕಾನಂದರ ಭಾಷಣಗಳು ಇಂದಿಗೂ ಪ್ರೇರಣೆಯಾಗಿ ಉಳಿದಿವೆ. ವೇದಾಂತ, ಅದ್ವೈತ ತತ್ವಗಳನ್ನು ತಿಳಿದು ಭಾರತೀಯರ ಬೌದ್ಧಿಕ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಸನ್ಯಾಸಿ ವಿವೇಕಾನಂದರು ಎಂದು ಹೇಳಿದರು. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ ಎಂಬ ಸಂದೇಶವನ್ನು ಯುವಕರಿಗೆ ತಿಳಿಸಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ಗಾಂಧೀಜಿ ದೇಶಕ್ಕಾಗಿ ದುಡಿದರು, ಆದರೆ ನಾವು ನೋಟಿಗಾಗಿ ದುಡಿಯುವ ಸ್ಥಿತಿಗೆ ಬಂದಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಅರ್ಚಿತಾ ಪ್ರಾರ್ಥಿಸಿದರು. ಉಪನ್ಯಾಸಕ ಹರ್ಷ ವಿವೇಕವಾಣಿಗಳನ್ನು ವಿವರಿಸುತ್ತಾ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಸ್ವಾಗತಿಸಿ, ಉಪನ್ಯಾಸಕ ವೇಣುಕುಮಾರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧೀಕ್ಷಕ ಪ್ರಶಾಂತ್, ಉಪನ್ಯಾಸಕರಾದ ನರಸಿಂಹಮೂರ್ತಿ, ವರದೇಗೌಡ, ಪ್ರವೀಣ್, ಸುಗುಣ, ನೇತ್ರ, ವಿದ್ಯಾ, ಅನುಷಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading