ಹಿರಿಯೂರು :
ನಗರದಲ್ಲಿ ಬೀದಿನಾಯಿಗಳಿಗೆ ಆಹಾರ ನೀಡಲೆಂದು 16 ಸ್ಥಳಗಳನ್ನು ಗುರುತು ಮಾಡಲಾಗಿದ್ದು, ಇನ್ನು ಮುಂದೆ ನಾಗರೀಕರು ಎಲ್ಲೆಂದರಲ್ಲಿ ಬೀದಿನಾಯಿಗಳಿಗೆ ಆಹಾರ ನೀಡಿದಲ್ಲಿ ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ದಂಡವನ್ನು ವಿಧಿಸಲಾಗುವುದು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಅವರು ಎಚ್ಚರಿಸಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಗುರುವಾರದಂದು ಬೀದಿನಾಯಿಗಳ ಹಾವಳಿ ನಿಯಂತ್ರಣ ಕುರಿತಂತೆ ನಗರದ ನಾಗರೀಕರು ಹಾಗೂ ನಗರಸಭೆಯ ಸಿಬ್ಬಂದಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ನಗರದಲ್ಲಿರುವ ಕೋಳಿ ಮತ್ತು ಮಾಂಸದ ಅಂಗಡಿಯವರು ನಗರವನ್ನು ಸ್ವಚ್ಚವಾಗಿಡಲು ನಗರಸಭೆಗೆ ಸಹಕಾರ ನೀಡಬೇಕು. ಮಾಂಸದಂಗಡಿಯ ತ್ಯಾಜ್ಯವನ್ನು ಚರಂಡಿಗೆ ಬಿಡುವುದು, ವೇದಾವತಿ ನದಿಗೆ ಹಾಕುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಇಂತಹ ಕೃತ್ಯದಿಂದ ನಗರದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತವೆ.
ಆದ್ದರಿಂದ ಮಾಂಸದಂಗಡಿಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಿದರೆ ಸುಮ್ಮನಿರಲಾಗದು. ಇನ್ನುಮುಂದೆ ಅಂತಹವರಿಗೆ ದಂಡ ವಿಧಿಸುವುದು ಖಚಿತ ಎಂಬುದನ್ನು ನೆನಪಿನಲ್ಲಿಡಬೇಕು. ಎಂದು ಕೋಳಿ ಮತ್ತು ಮಾಂಸದ ಅಂಗಡಿ ಮಾಲೀಕರಿಗೆ ಪೌರಾಯುಕ್ತರಾದ ವಾಸೀಂ ಖಡಕ್ ಎಚ್ಚರಿಕೆ ನೀಡಿದರು.
ನಾಯಿಗಳಿಗೆ ನಗರಸಭೆ ಗುರುತಿಸಿದ ಜಾಗದಲ್ಲಿ ಮಾತ್ರವೇ ಆಹಾರ ನೀಡಬೇಕು. ಬೀದಿನಾಯಿಗಳ ಮೇಲೆ ಹಲ್ಲೆ ಮಾಡಲು ಮುಂದಾದರೆ ಪ್ರಾಣಿ ದಯಾ ಸಂಘದವರು ಪೊಲೀಸರಿಗೆ ದೂರು ನೀಡುತ್ತಾರೆ. ಅಗತ್ಯತೆ ಕಂಡು ಬಂದಲ್ಲಿ ನ್ಯಾಯಾಲಯದ ಮೆಟ್ಟಿಲನ್ನು ಸಹ ಏರುತ್ತಾರೆ. ಹೀಗಾಗಿ ಯಾರೂ ಕೂಡ ಸುಪ್ರೀಂ ಕೋರ್ಟ್ ಆದೇಶವನ್ನು ಮೀರಬಾರದು.
ನಗರದ ಬಹುತೇಕ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮರಾಗಳನ್ನು ಅಳವಡಿಸಿದ್ದು, ಅದರಲ್ಲಿ ನಾಯಿಗಳಿಗೆ ನಗರಸಭೆ ಗುರುತಿಸಿದ ಜಾಗದಲ್ಲಿ ಆಹಾರ ನೀಡದೇ ರಸ್ತೆಗಳಲ್ಲಿ ಆಹಾರ ನೀಡುವುದು ಅಥವಾ ಬೀದಿನಾಯಿಗಳ ಮೇಲೆ ಹಲ್ಲೆ ಮಾಡುವುದು ಕಂಡುಬಂದರೆ ಅದರಲ್ಲಿನ ದೃಶ್ಯಗಳನ್ನು ಆಧರಿಸಿ, ತಪ್ಪಿತಸ್ಥರಿಗೆ ದಂಡ ಹಾಕಲಾಗುವುದು ಎಂಬುದಾಗಿ ಅವರು ಹೇಳಿದರು.
ಈ ಸಭೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾದ ಸುನಿಲ್ ಕುಮಾರ್, ಸಂಧ್ಯಾ, ಮಹಲಿಂಗರಾಜು, ಚಂದ್ರಕೀರ್ತಿ ಗುಜ್ಜಾರ್ ಸೇರಿದಂತೆ ಮಾಂಸದ ಮಾರುಕಟ್ಟೆಯ ವರ್ತಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.