ಹಿರಿಯೂರು :ತಾಲೂಕಿನ ಪಟ್ರೆಹಳ್ಳಿ ಗ್ರಾಮದಲ್ಲಿ ತೋಟಕ್ಕೆ ಜಾನುವಾರುಗಳನ್ನು ಹೊಡೆದುಕೊಂಡು ಹೋಗಿದ್ದಾಗ ಹಿಂಬದಿಯಿಂದ ಬಂದು ಯಾರೋ ದುಷ್ಕರ್ಮಿಗಳು ಮಹಿಳೆ ಮೇಲೆ ಹಲ್ಲೆ ನಡೆಸಿ ಸುಮಾರು 48 ಗ್ರಾಂ ತೂಕದ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿರುವ ಘಟನೆ ಇಂದು ನಡೆದಿದೆ.


ತಾಲ್ಲೂಕಿನ ಪಟ್ರೆಹಳ್ಳಿ ಗ್ರಾಮದ ಶಿವಸ್ವಾಮಿ ಎಂಬುವರ ಪತ್ನಿ ದೀಪಾ (32) ಹಲ್ಲೆಗೊಳಗಾದ ಮಹಿಳೆಯಾಗಿದ್ದು ಅವರನ್ನು ತಕ್ಷಣ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು.
ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಗ್ರಾಮಾಂತರ ಪೋಲಿಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಮಹಿಳೆ ದೀಪಾ ಎಂದಿನಂತೆ ಮಕ್ಕಳನ್ನು ಹಿರಿಯೂರು ನಗರದ ಶಾಲೆಗೆ ಕಳುಹಿಸಿ ನಂತರ ನಂದಿಹಳ್ಳಿ ರಸ್ತೆಯಲ್ಲಿರುವ ತೋಟಕ್ಕೆ ಹಸುಗಳನ್ನು ಹೊಡೆದುಕೊಂಡು ಹೋಗಿದ್ದಾರೆ. ತೋಟದ ಗೇಟ್ ಬೀಗ ತೆಗೆದ ಬಳಿಕ ಹಸುಗಳು ಒಳಹೋದ ನಂತರ ಗೇಟ್ ಹಾಕಿದ್ದಾರೆ. ದುಷ್ಕರ್ಮಿಗಳು ದೀಪಾ ಅವರಿಗಿಂತ ಮುಂಚೆಯೇ ತೋಟಕ್ಕೆ ಹೋಗಿ ಎತ್ತರಕ್ಕೆ ಬೆಳೆದಿರುವ ಗಿಡದಲ್ಲಿ ಅವಿತುಕೊಂಡು ಸಮಯ ನೋಡಿ ಹಲ್ಲೆ ನಡೆಸಿ ಕ್ಷಣ ಮಾತ್ರದಲ್ಲಿ ಸರವನ್ನು ಕಿತ್ತುಕೊಂಡು ಗೇಟ್ ಬದಲು ಜಮೀನಿಗೆ ಹಾಕಿದ್ದ ತಂತಿಬೇಲಿ ಹಾರಿ ಪರಾರಿಯಾಗಿದ್ದಾರೆ. ದೀಪಾ ಕಿರುಚಿಕೊಂಡ ಶಬ್ದ ಕೇಳಿ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜೆಸಿಬಿ ಚಾಲಕ ದೀಪಾರವರ ಸ್ಥಿತಿ ನೋಡಿ ಮನೆಯವರಿಗೆ ತಿಳಿಸಿದ್ದಾನೆ. ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಡಿವೈಎಸ್ ಪಿ ಶಿವಕುಮಾರ್, ಗ್ರಾಮಾಂತರ ಠಾಣೆ ಸಿಪಿಐ ಕಾಳಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿತ್ರದುರ್ಗದಿಂದ ಶ್ವಾನದಳವನ್ನು ಕರೆಸಲಾಗಿತ್ತು. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
About The Author
Discover more from JANADHWANI NEWS
Subscribe to get the latest posts sent to your email.