ಚಿತ್ರದುರ್ಗ ನ.13:
ಶಾಲೆ ಕಾಲೇಜುಗಳ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪೋಷಕರು ಮತ್ತು ಮಕ್ಕಳೊಂದಿಗೆ ಆರೋಗ್ಯಪೂರ್ಣ ಚರ್ಚೆ ನಡೆಸಿ, ವಿಚಾರ ವಿನಿಮಯ ಮಾಡಿಕೊಂಡು, ಮಕ್ಕಳ ಕಲಿಕಾ ಸಾಮಥ್ರ್ಯ ವೃದ್ಧಿ ಹಾಗೂ ಫಲಿತಾಂಶ ಸುಧಾರಣೆ ಕೈಗೊಳ್ಳುವ ಸಲುವಾಗಿ ಜಿಲ್ಲೆಯ ಎಲ್ಲ ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಪೋಷಕ-ಶಿಕ್ಷಕರ ಮಹಾ ಸಭೆಯನ್ನು ನ. 14 ರಂದು ನಡೆಯಲಿದ್ದು, ಎಲ್ಲ ಪೋಷಕರು ತಪ್ಪದೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಆಕಾಶ್ ಅವರು ಮನವಿ ಮಾಡಿದ್ದಾರೆ.
ಗೈರು ಹಾಜರಿ, ಶಾಲೆ ಬಿಡುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವ ಹಾಗೂ ಫಲಿತಾಂಶಗಳನ್ನು ಹೆಚ್ಚಿಸುವ ಕುರಿತು, ಹಾಗೂ ಆಯಾ ಮಕ್ಕಳ ಕಲಿಕಾ ಪ್ರಗತಿ ಕುರಿತಂತೆ ಮಹಾಸಭೆಯಲ್ಲಿ ಮಕ್ಕಳ ಸಮ್ಮುಖದಲ್ಲಿ ಶಿಕ್ಷಕರು ಪೋಷಕರೊಂದಿಗೆ ಚರ್ಚಿಸಲಿದ್ದಾರೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪೋಷಕರ ಪಾತ್ರ ಪ್ರಮುಖವಾಗಿದ್ದು, ಈ ಪ್ರಕ್ರಿಯೆಯಲ್ಲಿ ಅವರನ್ನು ತೊಡಗಿಸಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ. ನಿರಂತರ ಗೈರು ಹಾಜರಿಯನ್ನು ತಡೆಗಟ್ಟುವ ಮುಖಾಂತರ ಮಕ್ಕಳ ನಿಯಮಿತ ಹಾಜರಾತಿಯೊಂದಿಗೆ ಎಲ್ಲ ಮಕ್ಕಳು ಮುಖ್ಯ ವಾಹಿನಿಗೆ ಬಂದು ಗುಣಮಟ್ಟದ ಶಿಕ್ಷಣ ಪಡೆಯುವ ಉದ್ದೇಶಕ್ಕಾಗಿ ಪೋಷಕರ ಸಹಕಾರವನ್ನು ಪಡೆಯುವುದು ಅಗತ್ಯವಾಗಿದೆ. ಪೋಷಕರು, ಶಿಕ್ಷಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಬಿವರದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುವುದು ಪೋಷಕ-ಶಿಕ್ಷಕರ ಸಭೆಯ ಪ್ರಮುಖ ಉದ್ದೇಶವಾಗಿದೆ. ಸರ್ಕಾರದಿಂದ ದೊರೆಯುವ ಪ್ರೋತ್ಸಾಹದಾಯಕ ಸೌಲಭ್ಯಗಳಾದ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು, ಹಾಲು, ಶೂ ಮತ್ತು ಸಾಕ್ಸ್, ವಿದ್ಯಾರ್ತಿ ವೇತನ ಇತ್ಯಾದಿ ಯೋಜನೆಗಳ ಅನುಷ್ಠಾನದ ಕುರಿತು ಪರಸ್ಪರ ಚಿಂತನ ಮಂಥನವನ್ನು ಇದೇ ಮಹಾ ಸಭೆಯಲ್ಲಿ ಕೈಗೊಳ್ಳಲಾಗುವುದು. ಶಾಲಾ ಕಾಲೇಜುಗಳಲ್ಲಿ ಮಕ್ಕಳ ಕಲಿಕೆ ಉತ್ತಮಪಡಿಸಲು ಇಲಾಖೆಯಿಂದ ಹಮ್ಮಿಕೊಂಡಿರುವ ಕಲಿಕಾ ಉಪಕ್ರಮಗಳ ಬಗ್ಗೆ ಈ ಸಂದರ್ಭದಲ್ಲಿ ಪೋಷಕರಿಗೆ ಮಾಹಿತಿ ನೀಡಿ, ಅವರಿಂದಲೂ ಅಭಿಪ್ರಾಯ ಆಲಿಸಲಾಗುವುದು. ಶಾಲಾ ಪರಿಸರ, ಸುರಕ್ಷತೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವ ವಿಷಯದಲ್ಲಿ ಶಾಲೆಗಳಲ್ಲಿ ಅನುಪಾಲನೆ ಮಾಡುತ್ತಿರುವ ಬಗ್ಗೆ ಪೋಷಕರು ಖಾತ್ರಿ ಪಡಿಸಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ.
ಹಬ್ಬದಂತೆ ಆಚರಿಸಲು ಸೂಚನೆ :
*********ಸರ್ಕಾರದ ಸೂಚನೆಯಂತೆ ನ. 14 ರಂದು ಜಿಲ್ಲೆಯ ಎಲ್ಲ ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಪೋಷಕ-ಶಿಕ್ಷಕರ ಮಹಾ ಸಭೆಯ ಅಂಗವಾಗಿ ಶಾಲಾ ಕಾಲೇಜುಗಳನ್ನು ತಳಿರು-ತೋರಣಗಳಿಂದ ಅಲಂಕರಿಸಿ, ಹಬ್ಬದ ವಾತಾವರಣ ಸೃಷ್ಟಿಸಬೇಕು. ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಸಭೆಯಲ್ಲಿ ಅಭಿನಂದಿಸುವ ಕೆಲಸ ಆಗಬೇಕು. ಶಾಲಾ ಕಾಲೇಜು ಹಂತದಲ್ಲಿ ನಡೆಸಲಾಗುತ್ತಿರುವ ಪಾಠ ಆಧಾರಿತ ಮೌಲ್ಯ ಮಾಪನದ ವಿಶ್ಲೇಷಣೆ ಕುರಿತು ಪೋಷಕರಿಗೆ ಮಾಹಿತಿ ನೀಡಬೇಕು. ಪ್ರಮುಖ ಪರೀಕ್ಷೆಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಮತ್ತು ಆತಂಕ ನಿವಾರಣೆ, ಏಕಾಗ್ರತೆ, ಮಾನಸಿಕ ಒತ್ತಡಗಳ ನಿರ್ವಹಣೆ ಬಗ್ಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿ, ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನು ಹೇಳಬೇಕು. ಸರ್ಕಾರ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿವಿಧ ಸವಲತ್ತುಗಳ ಅನುಷ್ಠಾನ ಕುರಿತು ಪೋಷಕರಿಗೆ ಮಾಹಿತಿ ಒದಗಿಸಬೇಕು. ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣಾ ನೀತಿ, ಪೋಕ್ಸೋ ಕಾಯ್ದೆ ಕುರಿತಂತೆ ಪೋಷಕರಲ್ಲಿ ಅರಿವು ಮೂಡಿಸಬೇಕು ಎಂದು ಜಿ.ಪಂ. ಸಿಇಒ ಡಾ. ಆಕಾಶ್ ಅವರು ಎಲ್ಲ ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.
2,22,004 ಮಕ್ಕಳ ಪೋಷಕರು ಮಹಾಸಭೆಯಲ್ಲಿ ಭಾಗಿ :
************** ಜಿಲ್ಲೆಯಲ್ಲಿನ 1619 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 88,613 ವಿದ್ಯಾರ್ಥಿಗಳು, 115- ಪ್ರೌಢಶಾಲೆಗಳಲ್ಲಿ 18,362 ವಿದ್ಯಾರ್ಥಿಗಳು ಹಾಗೂ 38 ಪದವಿಪೂರ್ವ ಕಾಲೇಜುಗಳಲ್ಲಿ 8,054 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2,22,004 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಈ ಮಕ್ಕಳ ಎಲ್ಲ ಪೋಷಕರು ನ. 14 ರಂದು ನಡೆಯುವ ಪೋಷಕ-ಶಿಕ್ಷಕ ಮಹಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೆ ವಿದ್ಯಾರ್ಥಿಗಳ ಪೋಷಕರು ಈ ಮಹಾಸಭೆಯಲ್ಲಿ ಭಾಗವಹಿಸಲು ಅನುವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಡಿಪಿಐ ಮಂಜುನಾಥ್ ಹಾಗೂ ಡಿಡಿಪಿಯು ತಿಮ್ಮಯ್ಯ ಅವರು ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.